ಭೂತಾನ್ ಒಳಗೆ ಚೀನಾ ಅತಿಕ್ರಮಣ: ಒಂದೇ ವರ್ಷದಲ್ಲಿ ನಾಲ್ಕು ಹಳ್ಳಿಗಳ ನಿರ್ಮಾಣ

ಒಂದೆಡೆ ಪೂರ್ವ ಲಡಾಖ್ ಹಾಗೂ ಅರುಣಾಚಲ ಪ್ರದೇಶದ ಭಾಗದಲ್ಲಿ ತನ್ನ ಅತಿಕ್ರಮಣಗಳಿಂದ ಭಾರತಕ್ಕೆ ತಲೆ ನೋವು ಉಂಟುಮಾಡಿರುವ ಚೀನಾ, ಇನ್ನೊಂದೆಡೆ ನೆರೆಯ ಭೂತಾನ್‌ ಗಡಿ ಭಾಗದೊಳಗೆ ಒಂದೇ ವರ್ಷದಲ್ಲಿ ನಾಲ್ಕು ಹಳ್ಳಿಗಳನ್ನು ನಿರ್ಮಿಸಿದೆ. ಇದು ಭಾರತಕ್ಕೆ ಮತ್ತಷ್ಟು ಅಪಾಯಕಾರಿಯಾಗಿದೆ.

ಭೂತಾನ್ ಒಳಗೆ ಚೀನಾ ಅತಿಕ್ರಮಣ: ಒಂದೇ ವರ್ಷದಲ್ಲಿ ನಾಲ್ಕು ಹಳ್ಳಿಗಳ ನಿರ್ಮಾಣ
Linkup
ಹೊಸದಿಲ್ಲಿ: ಉಪಗ್ರಹ ಚಿತ್ರಗಳ ಪರಿಣತರೊಬ್ಬರು ಬಿಡುಗಡೆ ಮಾಡಿರುವ ಹೊಸ ಉಪಗ್ರಹ ಚಿತ್ರಗಳು ಚೀನಾದ ಸೇನಾ ಅತಿಕ್ರಮಣಗಳ ಕುರಿತಾಗಿ ಕಳವಳಕಾರಿ ಸಂಗತಿಗಳನ್ನು ಬಯಲು ಮಾಡಿವೆ. ಕಳೆದ ಒಂದು ವರ್ಷದಲ್ಲಿ ಗಡಿ ಭಾಗದ ಒಳಗೆ ಹಳ್ಳಿಗಳನ್ನು ನಿರ್ಮಿಸಿರುವುದನ್ನು ಇದು ಬಹಿರಂಗಪಡಿಸಿದೆ. ಸುಮಾರು 100 ಚದರ ಕಿಮೀ ವ್ಯಾಪ್ತಿಯಲ್ಲಿ ಅನೇಕ ಹೊಸ ಹಳ್ಳಿಗಳು ಹರಡಿರುವುದು ಉಪಗ್ರಹ ಚಿತ್ರದಲ್ಲಿ ಕಾಣಿಸಿದೆ. ಈ ವಿವಾದಿತ ಭೂಮಿಯು 2017ರಲ್ಲಿ ಮತ್ತು ಚೀನಾ ಸೇನೆಗಳ ನಡುವೆ ಮುಖಾಮುಖಿ ಸಂಘರ್ಷ ನಡೆದ ದೋಕ್ಲಾಂ ಪ್ರಸ್ಥಭೂಮಿಯ ಸಮೀಪವೇ ಇದೆ. ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಮೂಲ ಇರುವ ದೋಕ್ಲಾಂನ ಮೂಲಕ ಭಾರತದ ರಕ್ಷಣಾ ಪಡೆಗಳನ್ನು ಹಾದು ರಸ್ತೆ ನಿರ್ಮಾಣ ಚಟುವಟಿಕೆಯನ್ನು ಮುಂದುವರಿಸಲು ಚೀನೀ ಪಡೆಗಳು ಪ್ರಯತ್ನಿಸಿದ್ದಾಗ ಈ ಸಂಘರ್ಷ ನಡೆದಿತ್ತು. ಭೂತಾನ್‌ ಭೂಮಿಯೊಳಗೆ ಚೀನಾದ ಹೊಸ ನಿರ್ಮಾಣಗಳು ಭಾರತಕ್ಕೆ ಕಳವಳಕಾರಿಯಾಗಿದೆ. ಭೂತಾನ್‌ನ ವಿದೇಶಾಂಗ ಸಂಬಂಧ ನೀತಿಗಳಲ್ಲಿ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ಅಲ್ಲದೆ, ಅಲ್ಲಿನ ಸಶಸ್ತ್ರ ಪಡೆಗಳಿಗೆ ಭಾರತವೇ ತರಬೇತಿ ನೀಡುತ್ತಿದೆ. ಅಲ್ಲದೆ, ಭೂತಾನ್‌ನ ಅನೇಕ ಭಾಗಗಳಲ್ಲಿ ಭಾರತದ ಸೇನಾ ಪಡೆಗಳು ರಕ್ಷಣೆಗಾಗಿ ಬೀಡು ಬಿಟ್ಟಿವೆ. ತನ್ನ ಭೂ ಗಡಿಗಳನ್ನು ಮರು ಗುರುತು ಮಾಡುವಂತೆ ಭೂತಾನ್ ಮೇಲೆ ಚೀನಾ ನಿರಂತರ ಒತ್ತಡಗಳನ್ನು ಹೇರುತ್ತಿದೆ. ಈ ಗಡಿ ರೇಖೆಗಳನ್ನು ಮರು ನಿಗದಿ ಮಾಡುವ ಯಾವುದೇ ಒಪ್ಪಂದಗಳು ಅಂತಿಮಗೊಳ್ಳದೆ ಇದ್ದರೂ, ಒಪ್ಪಂದದ ಭಾಗವಾಗಿ ಈ ಹೊಸ ಗ್ರಾಮಗಳ ನಿರ್ಮಾಣವನ್ನು ಅದು ಮುಂದುವರಿಸಿದೆ. ದಿ ಇಂಟೆಲ್ ಲ್ಯಾಬ್‌ನ ಜಾಗತಿಕ ಸಂಶೋಧನಾ ಸಂಸ್ಥೆ ಡಿಟ್ರೆಸ್‌ಫಾ ಉಪಗ್ರಹ ಚಿತ್ರಗಳನ್ನು ಟ್ವೀಟ್ ಮಾಡಿದೆ. ಭೂತಾನ್ ಗಡಿ ಒಳಗೆ ಈ ಹಳ್ಳಿಗಳನ್ನು 2020ರ ಮೇ ತಿಂಗಳಿನಿಂದ 2021ರ ನವೆಂಬರ್ ಅವಧಿಯಲ್ಲಿ ನಿರ್ಮಿಸಲಾಗಿದೆ. 2017ರಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ನಡೆದ ದೋಕ್ಲಾಂ ಪ್ರಸ್ಥಭೂಮಿ ಸಮೀಪದಲ್ಲಿ ಚೀನಾ ಸ್ಥಾಪನೆ ಮಾಡುತ್ತಿರುವುದು ಕಳೆದ ವರ್ಷ ವರದಿಯಾಗಿತ್ತು. ಭೂತಾನ್‌ನ ಎರಡು ಕಿಮೀ ಗಡಿಯೊಳಗೆ ದೋಕ್ಲಾಂಗೆ ಬಹಳ ಹತ್ತಿರದಲ್ಲಿ ಈ ಹಳ್ಳಿ ನಿರ್ಮಾಣ ಕಾರ್ಯ ನಡೆದಿರುವುದು ಬಹಿರಂಗವಾಗಿತ್ತು. ಈಗ ಭೂತಾನ್‌ನ ಸುಮಾರು 100 ಕಿಮೀ ಚದರ ಕಿಮೀ ವ್ಯಾಪ್ತಿಯಲ್ಲಿ ಅದು ನಾಲ್ಕು ಹಳ್ಳಿಗಳನ್ನು ನಿರ್ಮಿಸಿದೆ ಎನ್ನಲಾಗಿದೆ. ಭೂತಾನ್‌ ಜತೆ ಗಡಿ ಹಂಚಿಕೊಂಡಿರುವ ಭಾರತಕ್ಕೆ ಚೀನಾದ ಇನ್ನೊಂದು ದಿಕ್ಕಿನ ಈ ಅತಿಕ್ರಮಣ ಕಳವಳಕಾರಿಯಾಗಿದೆ. ಟಿಬೆಟ್ ಸ್ವಾಯತ್ತ ಪ್ರದೇಶ ಮತ್ತು ಭಾರತದ ಅರುಣಾಚಲ ಪ್ರದೇಶದ ನಡುವಿನ ಎಲ್‌ಎಸಿ ಪೂರ್ವ ವಲಯದಲ್ಲಿರುವ ವಿವಾದಿತ ಪ್ರದೇಶದಲ್ಲಿ ಚೀನಾ ದೊಡ್ಡ ಹಳ್ಳಿ ನಿರ್ಮಿಸಿದೆ ಎಂದು ಇತ್ತೀಚೆಗೆ ಅಮೆರಿಕದ ರಕ್ಷಣಾ ಇಲಾಖೆ ವರದಿ ತಿಳಿಸಿತ್ತು.