ನಾಯಕತ್ವ ಯಾರ ದೈವಿಕ ಹಕ್ಕಲ್ಲ! ಕಾಂಗ್ರೆಸ್‌ ವಿರುದ್ಧ ಪ್ರಶಾಂತ್‌ ಕಿಶೋರ್‌ ಕಿಡಿ

ಕಾಂಗ್ರೆಸ್‌ ನಾಯಕತ್ವಕ್ಕೆ ರಾಷ್ಟ್ರ ರಾಜಕಾರಣದಲ್ಲಿ ವಿರೋಧ ವ್ಯಕ್ತವಾಗಿದ್ದು, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಬೆನ್ನಲ್ಲಿಯೇ ಚುನಾವಣಾ ಚತುರ ಪ್ರಶಾಂತ್‌ ಕಿಶೋರ್‌ ಕಿಡಿಕಾರಿದ್ದಾರೆ. ನಾಯಕತ್ವ ಯಾರ ದೈವಿಕ ಹಕ್ಕಲ್ಲ. ವಿಪಕ್ಷದ ನಾಯಕತ್ವವನ್ನು ಪ್ರಜಾಸತ್ತಾತ್ಮಕವಾಗಿ ನಿರ್ಧರಿಸಲಿ ಎಂದಿದ್ದಾರೆ.

ನಾಯಕತ್ವ ಯಾರ ದೈವಿಕ ಹಕ್ಕಲ್ಲ! ಕಾಂಗ್ರೆಸ್‌ ವಿರುದ್ಧ ಪ್ರಶಾಂತ್‌ ಕಿಶೋರ್‌ ಕಿಡಿ
Linkup
ಹೊಸದಿಲ್ಲಿ: ಪಶ್ಚಿಮ ಬಂಗಾಳ ಸಿಎಂ ಯುಪಿಎ ಇಲ್ಲವೇ ಇಲ್ಲ ಎಂದು ಹೇಳಿ ಕಾಂಗ್ರೆಸ್‌ಗೆ ಆಘಾತ ನೀಡಿದ ಬೆನ್ನಲ್ಲಿಯೇ ಚುನಾವಣಾ ಚತುರ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಕಳೆದ 10 ವರ್ಷಗಳಲ್ಲಿ ಶೇ 90ರಷ್ಟು ಚುನಾವಣೆಯಲ್ಲಿ ಸೋತಿದೆ. ಕಾಂಗ್ರೆಸ್‌ಗೆ, ಅದರಲ್ಲೂ ವೈಯಕ್ತಿಕವಾಗಿ ನಾಯಕತ್ವ ದೈವಿಕ ಹಕ್ಕಲ್ಲ ಎಂದು ಹೇಳಿ ಪ್ರಶಾಂತ್‌ ಕಿಶೋರ್‌ ಟಾಂಗ್‌ ನೀಡಿದ್ದಾರೆ. ಈ ಬಗ್ಗೆ ಗುರುವಾರ ಟ್ವೀಟ್‌ ಮಾಡಿರುವ ಪ್ರಶಾಂತ್‌ ಕಿಶೋರ್‌, ಕಾಂಗ್ರೆಸ್‌ನ ಯೋಚನೆ ಹಾಗೂ ಅದರ ಹಿನ್ನೆಲೆ ಪ್ರಬಲ ವಿರೋಧ ಪಕ್ಷಕ್ಕೆ ಅತ್ಯಗತ್ಯ. ಆದರೆ, ಕಾಂಗ್ರೆಸ್‌ಗೆ, ಅದರಲ್ಲೂ ವೈಯಕ್ತಿಕವಾಗಿ ನಾಯಕತ್ವ ದೈವಿಕ ಹಕಲ್ಲ. ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್‌ ಶೇ.90ಕ್ಕಿಂತ ಹೆಚ್ಚು ಚುನಾವಣೆಗಳನ್ನು ಸೋತಿದೆ. ಆದ್ದರಿಂದ ವಿರೋಧ ಪಕ್ಷದ ನಾಯಕತ್ವವನ್ನು ಪ್ರಜಾಸತ್ತಾತ್ಮಕವಾಗಿ ನಿರ್ಧರಿಸಲಿ ಎಂದು ಹೇಳಿದ್ದಾರೆ. ಪ್ರಶಾಂತ್‌ ಕಿಶೋರ್‌ ತಮ್ಮ ಟ್ವೀಟ್‌ನಲ್ಲಿ ಪರೋಕ್ಷವಾಗಿ ಅವರನ್ನು ಗುರಿಯಾಗಿಸಿಕೊಂಡಿದ್ದು, ಸ್ಪಷ್ಟವಾಗಿದೆ. ಬುಧವಾರವಷ್ಟೇ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮುಂಬೈನಲ್ಲಿ ರಾಹುಲ್‌ ಗಾಂಧಿ ವಿರುದ್ಧ ಕಿಡಿಕಾರಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ರಾಜಕಾರಣದ ಶೈಲಿ ಕುರಿತು ಹರಿಹಾಯ್ದಿದ್ದ ದೀದಿ, ವರ್ಷದಲ್ಲಿ 6 ತಿಂಗಳು ವಿದೇಶದಲ್ಲಿಯೇ ಇದ್ದರೆ ರಾಜಕಾರಣ ಹೇಗೆ ಮಾಡಲು ಸಾಧ್ಯವಾಗುತ್ತದೆ ಎಂದು ಪ್ರಶ್ನಿಸಿದ್ದರು. ಅದಲ್ಲದೇ ಎನ್ಸಿಪಿ ನಾಯಕ ಶರದ್ ಪವಾರ್ ಕೂಡ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ಬೆಂಬಲಿಸಿದರು. ಜನರ ನಡುವೆ ನಿಂತು ಕೆಲಸ ಮಾಡುವವರು ನಾಯಕತ್ವ ವಹಿಸಿಕೊಳ್ಳಬೇಕು. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಹೀಗೆಯೇ ನಡೆದುಕೊಂಡು ತೋರಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕತ್ವವನ್ನು ಪರೋಕ್ಷವಾಗಿ ವಿರೋಧಿಸಿದ್ದರು. ಇನ್ನು, ಮುಂದಿನ ದಿನಗಳಲ್ಲಿ ಯುಪಿಎ ಎನ್ನುವುದು ಇರುವುದಿಲ್ಲ. ಯುಪಿಎ ಎನ್ನುವುದು ಇತಿಹಾಸವಾಗಿದೆ. ಯುಪಿಎ ಎಂದರೇನು..? ಯುಪಿಎ ಎಲ್ಲಿದೆ ಎಂದು ಪ್ರಶ್ನಿಸಿದ ಮಮತಾ ಬ್ಯಾನರ್ಜಿ, ಬಿಜೆಪಿ ವಿರುದ್ಧ ಹೋರಾಟ ನಡೆಸಲು ಪರ್ಯಾಯ ವ್ಯವಸ್ಥೆ ಬೇಕು. ಹೋರಾಟ ಮಾಡದ ಪಕ್ಷಕ್ಕೆ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಮಮತಾ ಬ್ಯಾನರ್ಜಿ ಹೇಳಿಕೆ ಬೆನ್ನಲ್ಲಿಯೇ ವಿರೋಧ ಪಕ್ಷದ ನಾಯಕತ್ವದ ಚರ್ಚೆ ಜೋರಾಗಿತ್ತು. ಹಲವು ಕಾಂಗ್ರೆಸ್‌ ನಾಯಕರು ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಹೇಳಿಕೆಯನ್ನು ವಿರೋಧಿಸಿದ್ದರು. 'ಕಾಂಗ್ರೆಸ್ ಇಲ್ಲದ ಯುಪಿಎ, ಆತ್ಮವಿಲ್ಲದ ದೇಹವಿದ್ದಂತೆ. ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುವ ಸಮಯವಿದು ಎಂದು ಪಕ್ಷದ ಹಿರಿಯ ನಾಯಕ ಕಪಿಲ್ ಸಿಬಲ್ ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ತನ್ನ ಸಾಮರ್ಥ್ಯ ತೋರಿಸಿದ ವಿವಿಧ ಸಮಾಜೋ-ರಾಜಕೀಯ ವಿಚಾರಗಳಲ್ಲಿ ಟಿಎಂಸಿಯನ್ನು ಸೇರಿಸಿಕೊಳ್ಳಲು ನಾವು ಪ್ರಯತ್ನಿಸಿದ್ದೇವೆ. ವಿಪಕ್ಷಗಳು ತಮ್ಮ ನಡುವೆ ಹೊಡೆದಾಡಿಕೊಳ್ಳಬಾರದು ಮತ್ತು ವಿಭಜನೆಯಾಗಬಾರದು. ನಾವು ಜತೆಗೂಡಿ ಬಿಜೆಪಿ ವಿರುದ್ಧ ಹೋರಾಟ ನಡೆಸಬೇಕು' ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದರೆ, ಬಿಜೆಪಿ ವಿರುದ್ಧದ ಹೋರಾಟವನ್ನು ಒಗ್ಗಟ್ಟಿನಿಂದ ಮಾಡಬೇಕು. ನಮ್ಮ ಅಹಂಗಳನ್ನು ಪಕ್ಕಕ್ಕಿರಿಸಬೇಕು. ಬಿಜೆಪಿಗೆ ಕಾಂಗ್ರೆಸ್ ಮಾತ್ರವೇ ಪರ್ಯಾಯ ಶಕ್ತಿ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ.