ನಕಲಿ ನಂದಿನಿ ತುಪ್ಪ ಜಾಲ ಪತ್ತೆ: ಮೈಸೂರು ಬಳಿಕ ಬೆಂಗಳೂರಿನಲ್ಲೂ ದಂಧೆ

ಕೆಎಂಎಫ್‌ ಜಾಗೃತ ದಳದ ಅಕಾರಿಗಳು ಹಾಗೂ ಮಾದನಾಯಕನಹಳ್ಳಿ ಪೊಲೀಸರು ಮಂಗಳವಾರ ದಾಳಿ ನಡೆಸಿದಾಗ ನಕಲಿ ಉತ್ಪನದ ಭಾರಿ ಸಂಗ್ರಹ ಕಂಡುಬಂದಿದೆ. ತುಪ್ಪದ ಪ್ಯಾಕೆಟ್‌ಗಳು ಅಸಲಿ ನಂದಿನಿ ತುಪ್ಪದ ಪ್ಯಾಕೆಟ್‌ ರೀತಿಯೇ ಇದ್ದು, ಪರಿಶೀಲನೆಯಲ್ಲಿ ನಕಲಿ ಎಂಬುದು ಖಾತರಿಯಾಗಿದೆ.

ನಕಲಿ ನಂದಿನಿ ತುಪ್ಪ ಜಾಲ ಪತ್ತೆ: ಮೈಸೂರು ಬಳಿಕ ಬೆಂಗಳೂರಿನಲ್ಲೂ ದಂಧೆ
Linkup
ಬೆಂಗಳೂರು/ಪೀಣ್ಯ ದಾಸರಹಳ್ಳಿ ಗ್ರಾಹಕರೇ, ಖರೀದಿಸುವ ಮುನ್ನ ಎಚ್ಚರವಹಿಸಿ. ಏಕೆಂದರೆ, ನಕಲಿ ನಂದಿನಿ ತುಪ್ಪ ಎಲ್ಲೆಡೆ ಹಾಸು ಹೊಕ್ಕಾಗಿದೆ. ನೆಲಮಂಗಲ ಬಳಿಯ ಗೋದಾಮಿನಲ್ಲಿ 270 ಕೇಸ್‌ ಹಾಗೂ ಹನುಮಂತನಗರದ ಎರಡು ಕಿರಾಣಿ ಅಂಗಡಿಗಳಲ್ಲಿ 161 ಲೀಟರ್‌ ನಕಲಿ ನಂದಿನಿ ತುಪ್ಪವನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನಲ್ಲಿಇತ್ತೀಚೆಗೆ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ನಗರದಲ್ಲಿ ಅಲ್ಲಲ್ಲಿ ನಕಲಿ ತುಪ್ಪ ಸಂಗ್ರಹಿಸಿರುವುದು ಕಂಡು ಬಂದಿದೆ. ನೆಲಮಂಗಲ ಮಾಕಳಿಯ ಗೋದಾಮಿನ ಮೇಲೆ ಆಹಾರ ಸಂರಕ್ಷಣಾ ಇಲಾಖೆ, ಜಾಗೃತ ದಳದ ಅಕಾರಿಗಳು ಹಾಗೂ ಮಾದನಾಯಕನಹಳ್ಳಿ ಪೊಲೀಸರು ಮಂಗಳವಾರ ದಾಳಿ ನಡೆಸಿದಾಗ ನಕಲಿ ಉತ್ಪನದ ಭಾರಿ ಸಂಗ್ರಹ ಕಂಡುಬಂದಿದೆ. ತುಪ್ಪದ ಪ್ಯಾಕೆಟ್‌ಗಳು ಅಸಲಿ ನಂದಿನಿ ತುಪ್ಪದ ಪ್ಯಾಕೆಟ್‌ ರೀತಿಯೇ ಇದ್ದು, ಪರಿಶೀಲನೆಯಲ್ಲಿ ನಕಲಿ ಎಂಬುದು ಖಾತರಿಯಾಗಿದೆ. 15 ಲಕ್ಷ ರೂ. ಮೌಲ್ಯದ ನಕಲಿ ನಂದಿನಿ ತುಪ್ಪ ವಶಪಡಿಸಿಕೊಳ್ಳಲಾಗಿದೆ. ಆನ್‌ಲೈನ್‌ ಡೆಲಿವರಿ ಆ್ಯಪ್‌ 'ಡೀಲ್‌ಶೇರ್‌'ಗೆ ಸೇರಿದ ಗೋದಾಮಿನಲ್ಲಿ ನಕಲಿ ಉತ್ಪನ್ನ ಪತ್ತೆಯಾಗಿದೆ. ಡೀಲ್‌ಶೇರ್‌ ಸಂಸ್ಥೆಗೆ ಮಾಕಳಿಯ ಬಾಲಾಜಿ ಡಿಪಾರ್ಟ್‌ಮೆಂಟಲ್‌ ಸ್ಟೋರ್‌ನಿಂದ ನಕಲಿ ಉತ್ಪನ್ನ ಪೂರೈಕೆಯಾಗಿದೆ ಎಂದು ಹೇಳಲಾಗಿದೆ. ಸೋಮವಾರ ಹೊಸಕೋಟೆಯಲ್ಲಿ 7 ಕೇಸ್‌ ಹಾಗೂ ವೈಟ್‌ಫೀಲ್ಡ್‌ನಲ್ಲಿ 70 ಕೇಸ್‌ ನಕಲಿ ಉತ್ಪನ್ನ ಕಂಡು ಬಂದಿದೆ ಎಂದು ಅಕಾರಿಗಳ ತಂಡ ಮಾಹಿತಿ ನೀಡಿದೆ. ಕಿರಾಣಿ ಅಂಗಡಿಯಲ್ಲೂ ನಕಲಿ ಉತ್ಪನ್ನ ಹನುಮಂತನಗರದ ಗೋಪಾಲಕೃಷ್ಟ ಸ್ಟೋರ್‌ ಹಾಗೂ ಎಆರ್‌ಸಿ ಸ್ಟೋರ್‌ ಎಂಬ ಎರಡು ಅಂಗಡಿಗಳಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ಕೆಎಂಎಫ್‌ ಜಾಗೃತ ದಳ ತಿಳಿಸಿದೆ. ನಂಟು? ಮಾಕಳಿಯ ಗೋದಾಮಿನಲ್ಲಿ ಪತ್ತೆಯಾದ ನಕಲಿ ನಂದಿನಿ ತುಪ್ಪದ ಪ್ಯಾಕೆಟ್‌ ಮೇಲೆ ಮೈಸೂರು ಸಹಕಾರಿ ಹಾಲು ಒಕ್ಕೂಟ ಎಂದೇ ನಮೂದಾಗಿದೆ. ಹೀಗಾಗಿ ಮೈಸೂರಿನಲ್ಲಿ ತಯಾರಾದ ನಕಲಿ ಉತ್ಪನ್ನ ಇದಾಗಿರಬಹುದು ಎಂದು ಶಂಕಿಸಲಾಗಿದೆ. ಅಧಿಕಾರಿಗಳ ಭೇಟಿ ಮೈಸೂರು ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಮತ್ತು ಅಧಿಕಾರಿಗಳು ಮಂಗಳವಾರ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಹೊಸಹುಂಡಿ ಗ್ರಾಮದ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ''ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ನಂದಿನಿ ತುಪ್ಪ ಕಲಬೆರಕೆಗೆ ಬಳಸುತ್ತಿದ್ದ ಡಾಲ್ಡಾ, ತಾಳೆ ಎಣ್ಣೆ, ಬಣ್ಣ, ಫ್ಲೇವರ್‌, ನಕಲಿ ಸ್ಟಿಕ್ಕರ್‌, ಪ್ಯಾಕಿಂಗ್‌ ಯಂತ್ರಗಳನ್ನು ಜಪ್ತಿ ಮಾಡಲಾಗಿದೆ'' ಎಂದು ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಗೋದಾಮಿನಲ್ಲಿ ಡಾಲ್ಡಾ, ತಾಳೆ ಎಣ್ಣೆಯನ್ನು ಬಳಸಿ ಅಸಲಿ ತುಪ್ಪಕ್ಕೆ ಕಲಬೆರಕೆ ಮಾಡಲಾಗುತ್ತಿತ್ತು. ನಂದಿನಿ ಪ್ಯಾಕೆಟನ್ನೇ ಹೋಲುವಂತೆ ನಕಲಿ ಸ್ಟಿಕ್ಕರ್‌, ಪ್ಯಾಕೆಟ್‌ಗಳನ್ನು ಸಿದ್ಧಪಡಿಸಿಕೊಂಡಿರುವುದು ಪತ್ತೆಯಾಗಿತ್ತು. ನಕಲಿ ತಡೆಯಲು ಹಾಲೋಗ್ರಾಮ್‌ ಒಳಗೊಂಡ ಕವರ್‌ ಶೀಘ್ರ ನಂದಿನಿ ತುಪ್ಪದ ಪ್ಯಾಕೆಟ್‌ ನಕಲಿ ಮಾಡುವುದನ್ನು ತಡೆಯಲು ಹಾಲೊಗ್ರಾಮ್‌ ಆಧಾರಿತ ಪ್ಯಾಕಿಂಗ್‌ ಕವರ್‌ಗಳನ್ನು ಪರಿಚಯಿಸಲು ಕೆಎಂಎಫ್‌ ನಿರ್ಧರಿಸಿದೆ. ''ನಕಲಿ ತುಪ್ಪ ಜಾಲದಿಂದ ವಹಿವಾಟಿಗೆ ಯಾವುದೇ ರೀತಿ ಧಕ್ಕೆಯಾಗಿಲ್ಲ. ಪ್ರತಿ ತಿಂಗಳು 1,500 ಟನ್‌ ಮಾರಾಟವಾಗುತ್ತಿದ್ದುದು, ಈಗಲೂ ಅಷ್ಟೇ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಸಣ್ಣ ಪುಟ್ಟ ಮಾರಾಟ ಮಳಿಗೆಗಳಿಗಿಂತ ಕೆಎಂಎಫ್‌ ಔಟ್‌ಲೆಟ್‌ಗಳಲ್ಲಿ ತುಪ್ಪ ಹೆಚ್ಚಾಗಿ ಮಾರಲ್ಪಡುತ್ತದೆ. ಮನೆಗಳಿಗೆ ಖರೀದಿಸುವ ಗ್ರಾಹಕರು ನಕಲಿ/ ಅಸಲಿ ಯಾವುದು ಎಂಬುದನ್ನು ಸುಲಭವಾಗಿ ಪತ್ತೆ ಹೆಚ್ಚುತ್ತಾರೆ. ಕೇಟರರ್ಸ್ ಇತರರು ನಕಲಿ ತುಪ್ಪವನ್ನು ಬಳಸಿರುವ ಸಾಧ್ಯತೆ ಇದೆ'' ಎಂದು ಕೆಎಂಎಫ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.