ಹೈಕೋರ್ಟ್ ಆದೇಶ ಪಾಲಿಸದ ಶ್ವಾನ ಮಾಲೀಕರು: ಕಬ್ಬನ್‌ ಪಾರ್ಕ್‌ನಲ್ಲಿ 'ಉಗ್ರ' ನಾಯಿಗಳ ದರ್ಬಾರ್..!

ಕಬ್ಬನ್‌ ಪಾರ್ಕ್‌ಗೆ ಸಾಕು ನಾಯಿಗಳನ್ನು ಕರೆ ತರುವುದರಿಂದ ಉದ್ಯಾನಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ. ಉಗ್ರ ಸ್ವರೂಪದ ನಾಯಿಗಳು ಜನರ ಬಳಿಗೆ ಬರುವುದಲ್ಲದೆ, ಕಂಡ ಕಂಡಲ್ಲಿ ಮಲ, ಮೂತ್ರ ಮಾಡುತ್ತವೆ. ನಾಯಿಗಳ ಉಪಟಳ ಹೆಚ್ಚಾಗಿದೆ.

ಹೈಕೋರ್ಟ್ ಆದೇಶ ಪಾಲಿಸದ ಶ್ವಾನ ಮಾಲೀಕರು: ಕಬ್ಬನ್‌ ಪಾರ್ಕ್‌ನಲ್ಲಿ 'ಉಗ್ರ' ನಾಯಿಗಳ ದರ್ಬಾರ್..!
Linkup
: ಕಬ್ಬನ್‌ ಪಾರ್ಕ್‌ಗೆ ಉಗ್ರ ಸ್ವರೂಪದ ಸಾಕು ನಾಯಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದರೂ, ಮಾಲೀಕರು ನ್ಯಾಯಾಲಯದ ಆದೇಶವನ್ನಾಗಲೀ, ತೋಟಗಾರಿಕೆ ಇಲಾಖೆಯ ಮಾರ್ಗಸೂಚಿಗಳನ್ನಾಗಲೀ ಪಾಲಿಸುತ್ತಿಲ್ಲ. ಶುಕ್ರವಾರ ತೋಟಗಾರಿಕೆ ಇಲಾಖೆಯು ಸಾಕು ನಾಯಿಗಳ ಕುರಿತಂತೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಕಳೆದ ಶನಿವಾರ ಮತ್ತು ಭಾನುವಾರದಂದು ಕಬ್ಬನ್‌ ಉದ್ಯಾನದ ಸಿಬ್ಬಂದಿ ಮತ್ತು ಪೊಲೀಸ್‌ ಸಿಬ್ಬಂದಿಯ ಸಹಯೋಗದೊಂದಿಗೆ ಶ್ವಾನ ಮಾಲೀಕರಿಗೆ ಅರಿವು ಮೂಡಿಸಲಾಯಿತು. ಉದ್ಯಾನದ ಪ್ರವೇಶ ದ್ವಾರಗಳಲ್ಲಿ ರಾಜ್ಯ ತೋಟಗಾರಿಕೆ ಇಲಾಖೆ ವತಿಯಿಂದ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಶ್ವಾನ ಅದಾವುದನ್ನೂ ಪಾಲಿಸದೆ ಸೋಮವಾರ ಉದ್ಯಾನಕ್ಕೆ ಎಂದಿನಂತೆ ಉಗ್ರ ಸ್ವರೂಪದ ನಾಯಿಗಳನ್ನು ಹಿಡಿದುಕೊಂಡು ಬಂದರು. ನಾಯಿಯ ಜತೆಗೆ ಸ್ಕೂಪ್‌ ತರಲಿಲ್ಲ. ಆರು ಮೀಟರ್‌ಗೂ ಹೆಚ್ಚು ಉದ್ದದ ಚೈನ್‌ಗಳನ್ನು ಕೂಡ ಹಾಕಿ ಕರೆ ತರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮಂಗಳವಾರ ಕೂಡ ಇದೇ ರೀತಿ ಮುಂದುವರಿದಿತ್ತು. ಕಬ್ಬನ್‌ ಪಾರ್ಕ್‌ಗೆ ಸಾಕು ನಾಯಿಗಳನ್ನು ಕರೆ ತರುವುದರಿಂದ ಉದ್ಯಾನಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ. ಉಗ್ರ ಸ್ವರೂಪದ ನಾಯಿಗಳು ಜನರ ಬಳಿಗೆ ಬರುವುದಲ್ಲದೆ, ಕಂಡ ಕಂಡಲ್ಲಿ ಮಲ, ಮೂತ್ರ ಮಾಡುತ್ತವೆ. ನಾಯಿಗಳ ಉಪಟಳ ಹೆಚ್ಚಾಗಿದೆ ಎಂದು ಕಬ್ಬನ್‌ ಪಾರ್ಕ್ ನಡಿಗೆದಾರರ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ಕಬ್ಬನ್‌ ಪಾರ್ಕ್ ಒಳಗಡೆ ನಾಯಿಗಳ ಉಪಟಳ ತಡೆಯಲು ಬಿಬಿಎಂಪಿ ತಾನಾಗಿಯೇ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನ್ಯಾಯಾಲಯವೇ ನೋಟಿಸ್‌ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್‌ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯು ಕೆಲವು ಮಾರ್ಗ ಸೂಚಿಗಳನ್ನು ಹೊರಡಿಸಿತ್ತು. ಆದರೆ ಇದೀಗ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗುತ್ತಿದೆ. 'ಲಾಲ್‌ ಬಾಗ್‌ ಮತ್ತು ಕಬ್ಬನ್‌ ಪಾರ್ಕ್‌ಗಳು ಬೆಂಗಳೂರಿನ ಪ್ರಮುಖ ಉದ್ಯಾನಗಳು. ಇದರಲ್ಲಿ ತಾರತಮ್ಯವೇಕೆ? ಲಾಲ್‌ಬಾಗ್‌ಗೆ ಸಾಕು ನಾಯಿಗಳ ಪ್ರವೇಶವನ್ನು ನಿಷೇಧಿಸಿರುವ ತೋಟಗಾರಿಕೆ ಇಲಾಖೆ, ಕಬ್ಬನ್‌ಪಾರ್ಕ್‌ನಲ್ಲಿ ಏಕೆ ನಿಷೇಧಿಸಬಾರದು?' ಎಂದು ವಕೀಲರು ಹಾಗೂ ಕಬ್ಬನ್‌ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷ ಡಾ. ಎಸ್‌. ಉಮೇಶ್‌ ಆಗ್ರಹಿಸಿದ್ದಾರೆ. 'ಸಾಕು ನಾಯಿಗಳ ಮಾಲೀಕರು ಅನುಸರಿಸಬೇಕಾದ ಕ್ರಮಗಳ ಕುರಿತು ಕಬ್ಬನ್‌ ಪಾರ್ಕ್‌ ಪ್ರವೇಶ ದ್ವಾರಗಳು ಹಾಗೂ ಉದ್ಯಾನದ ಇತರೆ ಆಯ್ದ ಸ್ಥಳಗಳಲ್ಲಿ ಮಾಹಿತಿ ಫಲಕಗಳನ್ನು ಪ್ರದರ್ಶಿಸಲಾಗಿದೆ. ಒಂದು ವಾರ ಕಾಲ ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ನಂತರದ ವಾರದಿಂದ ನಿಯಮಗಳನ್ನು ಪಾಲಿಸದ ಶ್ವಾನಗಳನ್ನು ಒಳಗಡೆ ಬಿಡುವುದಿಲ್ಲ' ಎಂದು ರಾಜ್ಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಾಲ ಕೃಷ್ಣ ಮಾಹಿತಿ ನೀಡಿದ್ದಾರೆ.