ಝೀ - ಸೋನಿ ವಿಲೀನಕ್ಕೆ ವೇದಿಕೆ ಸಿದ್ಧ, ಬುಧವಾರ ಕಂಪನಿಗಳಿಂದ ಒಪ್ಪಂದಕ್ಕೆ ಸಹಿ ನಿರೀಕ್ಷೆ

ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಮತ್ತು ಸೋನಿ ಪಿಕ್ಚರ್ಸ್‌ ನೆಟ್ವರ್ಕ್ಸ್‌ ಇಂಡಿಯಾ ವಿಲೀನಕ್ಕೆ ಸಿದ್ಧವಾಗಿದ್ದು, ಈ ಸಂಬಂಧ ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕುವ ಹಂತ ಸಮೀಪಿಸಿವೆ.

ಝೀ - ಸೋನಿ ವಿಲೀನಕ್ಕೆ ವೇದಿಕೆ ಸಿದ್ಧ, ಬುಧವಾರ ಕಂಪನಿಗಳಿಂದ ಒಪ್ಪಂದಕ್ಕೆ ಸಹಿ ನಿರೀಕ್ಷೆ
Linkup
ದೇಶದ ಪ್ರಮುಖ ಮನರಂಜನಾ ಸಂಸ್ಥೆ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ (ಝಡ್‌ಇಇ) ಮತ್ತು ಸೋನಿ ಪಿಕ್ಚರ್ಸ್‌ ನೆಟ್ವರ್ಕ್ಸ್‌ ಇಂಡಿಯಾ (ಎಸ್‌ಪಿಎನ್‌) ವಿಲೀನಕ್ಕೆ ಸಿದ್ಧವಾಗಿದ್ದು, ಈ ಸಂಬಂಧ ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕುವ ಹಂತ ಸಮೀಪಿಸಿವೆ. ಎಸ್‌ಪಿಎನ್‌ ಸೋನಿ ಕಾರ್ಪ್‌ನ ಅಂಗ ಸಂಸ್ಥೆ ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ (ಎಸ್‌ಪಿಇ)ನ ಭಾರತೀಯ ವಿಭಾಗವಾಗಿದೆ. ಎರಡು ಕಂಪನಿಗಳ ನಡುವೆ ಅಂತಿಮ ಮಾತುಕತೆಗಳು ಪೂರ್ಣಗೊಂಡಿವೆ ಮತ್ತು ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಬಹುದು ಎಂದು ಮೂಲಗಳು ದೃಢಪಡಿಸಿವೆ, ಡಿಸೆಂಬರ್ 22ರ ಬುಧವಾರದ ಮುಂಜಾನೆ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆ ಇದೆ. ಡಿಸೆಂಬರ್‌ 3ರಂದೇ 'ಎಕನಾಮಿಕ್‌ ಟೈಮ್ಸ್‌' ಎರಡೂ ಕಂಪನಿಗಳು ಕ್ರಿಸ್‌ಮಸ್‌ಗೂ ಮುನ್ನವೇ ವಿಲೀನ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧವಾಗಿವೆ ಎಂದು ವರದಿ ಮಾಡಿತ್ತು. ಅದೀಗ ನಿಜವಾಗುವ ಘಳಿಗೆ ಸಮೀಪಿಸಿದೆ. ಝೀ ಸಂಸ್ಥೆ ಕಂಪನಿಯ ನಿಯಂತ್ರಣದ ಮೇಲೆ ಅತಿದೊಡ್ಡ ಷೇರುದಾರರಾದ ಇನ್ವೆಸ್ಕೊ ಜೊತೆ ಕಾನೂನು ಹೋರಾಟದಲ್ಲಿ ಸಿಲುಕಿರುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿದೆ. ಅಂತಿಮ ಒಪ್ಪಂದದ ವಿವರಗಳನ್ನು ಇನ್ನೂ ಬಹಿರಂಗಪಡಿಸಬೇಕಾಗಿದ್ದರೂ, ಮೂರು ತಿಂಗಳ ಹಿಂದೆ ಟರ್ಮ್ ಶೀಟ್‌ಗೆ ಸಹಿ ಮಾಡುವ ಸಮಯದಲ್ಲಿ, ಎರಡು ಕಂಪನಿಗಳು ವಿಲೀನಗೊಂಡ ಸ್ಥಾಪನೆಯಾಗುವ ಹೊಸ ಕಂಪನಿಯಲ್ಲಿ ಎಸ್‌ಪಿಎನ್ ಹೆಚ್ಚಿನ ಪಾಲನ್ನು ಹೊಂದಲಿದ್ದು, ಅದನ್ನು ಭಾರತದಲ್ಲಿ ಸಾರ್ವಜನಿಕವಾಗಿ ಪಟ್ಟಿ ಮಾಡಲಾಗುವುದು ಎಂದು ಘೋಷಿಸಿದ್ದವು. ಅಂದರೆ ಷೇರು ಪೇಟೆ ಪ್ರವೇಶಿಸುವುದಾಗಿ ಹೇಳಿದ್ದವು. ಎಲ್ಲವೂ ಅಂದುಕೊಂಡಂತೆ ನಡೆದರೆ ವಿಲೀನದ ಬಳಿಕ ಆದಾಯದ ಲೆಕ್ಕದಲ್ಲಿ ಭಾರತದ ಎರಡನೇ ಅತಿದೊಡ್ಡ ಮನರಂಜನಾ ಸಂಸ್ಥೆ ಸ್ಥಾಪನೆಯಾಗಲಿದೆ. 75 ಟಿವಿ ಚಾನೆಲ್‌ಗಳು, ಎರಡು ವಿಡಿಯೋ ಸ್ಟ್ರೀಮಿಂಗ್ ಸೇವೆಗಳು (ಝೀ5 ಮತ್ತು ಸೋನಿ ಲಿವ್‌), ಎರಡು ಫಿಲ್ಮ್ ಸ್ಟುಡಿಯೋಗಳು (ಝೀ ಸ್ಟುಡಿಯೋಸ್ ಮತ್ತು ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ) ಹೊಂದಿರುವ ಘಟಕ ಇದಾಗಲಿದೆ. ಡಿಜಿಟಲ್ ಕಂಟೆಂಟ್ ಸ್ಟುಡಿಯೋ (ಸ್ಟುಡಿಯೋ ಎನ್‌ಎಕ್ಸ್‌ಟಿ), ಮತ್ತು ಪ್ರೋಗ್ರಾಂ ಲೈಬ್ರರಿಗಳೂ ಇದರಲ್ಲಿ ಇರಲಿವೆ. ಝೀಯಲ್ಲಿ ಸಂಸ್ಥಾಪಕರು ಕೇವಲ ಶೇ. 3.99 ಪಾಲನ್ನು ಹೊಂದಿರುವುದರಿಂದ, ಒಪ್ಪಂದದ ಯಶಸ್ಸು ಷೇರುದಾರರ ಬೆಂಬಲದ ಮೇಲೆ ಅವಲಂಬಿತವಾಗಿರುತ್ತದೆ. ಏಕೆಂದರೆ ವಿಲೀನವನ್ನು ಅನುಮೋದಿಸಲು ನಾಲ್ಕನೇ ಮೂರು ಬಹುಮತದ ಅಗತ್ಯವಿರುತ್ತದೆ. 12,000 ಕೋಟಿ ರೂ. ಹೂಡಿಕೆ! ಝೀಯಲ್ಲಿ ಶೇ. 17.88 ರಷ್ಟು ಷೇರುಗಳನ್ನು ಹೊಂದಿರುವ ಇನ್ವೆಸ್ಕೋ, ಮಂಡಳಿಯಿಂದ ಎಂಡಿ ಮತ್ತು ಸಿಇಒ ಪುನೀತ್ ಗೋಯೆಂಕಾ ಅವರನ್ನು ತೆಗೆದುಹಾಕುವ ಕುರಿತು ಮತ ಚಲಾಯಿಸಲು ಷೇರುದಾರರ ಅಸಾಮಾನ್ಯ ಸಾಮಾನ್ಯ ಸಭೆ (ಇಜಿಎಂ) ನಡೆಸಲು ಮಂಡಳಿಯನ್ನು ಕೇಳಿಕೊಂಡಿತ್ತು. ಆದರೆ ಝೀ ಆಡಳಿತ ಮಂಡಳಿಯು ಬೇಡಿಕೆಯನ್ನು ತಿರಸ್ಕರಿಸಿದ್ದಲ್ಲದೆ, ಬಾಂಬೆ ಹೈಕೋರ್ಟ್‌ನಿಂದ ವಿದೇಶಿ ಹೂಡಿಕೆದಾರರ ವಿರುದ್ಧ ತಡೆಯಾಜ್ಞೆಯನ್ನೂ ಪಡೆದುಕೊಂಡಿದೆ. ಇನ್ವೆಸ್ಕೊ ಈ ಆದೇಶವನ್ನು ವಿಭಾಗೀಯ ಪೀಠದ ಮುಂದೆ ಪ್ರಶ್ನಿಸಿದೆ. ಆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಇದೇ ವೇಳೆ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಝೀ ವಿರುದ್ಧ ಇನ್ವೆಸ್ಕೊ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದೆ. ಪ್ರಸ್ತಾವಿತ ವಿಲೀನದ ಭಾಗವಾಗಿ, ವಿಲೀನಗೊಂಡ ಕಂಪನಿಯಲ್ಲಿ ಸೋನಿ ಪಿಕ್ಚರ್ಸ್‌ನ ಪ್ರವರ್ತಕರು 1.575 ಶತಕೋಟಿ ಡಾಲರ್‌ (ಸುಮಾರು 12,000 ಕೋಟಿ ರೂ.) ಹೂಡಿಕೆ ಮಾಡಲಿದ್ದಾರೆ ಎಂದು ಎರಡೂ ಕಂಪನಿಗಳು ಹೇಳಿದ್ದವು. ವಿಲೀನಗೊಂಡ ಕಂಪನಿಯಲ್ಲಿ ಬಹುಪಾಲು ಷೇರನ್ನು ಹೊಂದಲು ಸೋನಿ ಈ ಪ್ರಮಾಣದ ಹಣವನ್ನು ಹೊಸದಾಗಿ ಹೂಡಿಕೆ ಮಾಡಬೇಕಿದೆ. ವಿಲೀನವು ಪ್ರಗತಿಯಲ್ಲಿದೆ ಮತ್ತು ಸೋನಿಯ ಹೂಡಿಕೆಯಿಂದ ವಿಲೀನಗೊಂಡ ಕಂಪನಿಗೆ ಕ್ರೀಡಾ ಹಕ್ಕುಗಳನ್ನು ಪಡೆದುಕೊಳ್ಳಲು ಅವಕಾಶ ಸಿಗಲಿದೆ ಎಂದು ಗೋಯೆಂಕಾ ಕಳೆದ ತಿಂಗಳು ಹೇಳಿದ್ದರು. ಸೋನಿ ಪ್ರವರ್ತಕರು ವಿಲೀನಗೊಂಡ ಕಂಪನಿಯಲ್ಲಿನ ತಮ್ಮ ಪಾಲಿನಲ್ಲಿ ಶೇ. 2ರಷ್ಟನ್ನು ಝೀ ಪ್ರವರ್ತಕರಿಗೆ ವರ್ಗಾಯಿಸಲಿದ್ದಾರೆ ಎಂದು ಟರ್ಮ್ ಶೀಟ್‌ನಲ್ಲಿ ಹೇಳಲಾಗಿದೆ. ಪರಿಣಾಮ ಹೊಸ ಕಂಪನಿಯಲ್ಲಿಯೂ ಗೋಯೆಂಕಾ ಶೇ. 4ರಷ್ಟು ಪಾಲು ಹೊಂದಿರಲಿದ್ದಾರೆ. ಅಷ್ಟೇ ಅಲ್ಲದೆ ಝೀ ಪ್ರಮೋಟರ್‌ಗಳಿಗೆ ತಮ್ಮ ಪಾಲನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಶೇ. 20ಕ್ಕೆ ಹೆಚ್ಚಿಸಲು ಸಹ ಅನುಮತಿ ಇದೆ. ಈ ಎರಡೂ ವ್ಯವಸ್ಥೆಗಳಿಗೆ ಇನ್ವೆಸ್ಕೊ ಆಕ್ಷೇಪ ವ್ಯಕ್ತಪಡಿಸಿದೆ. ಹೊಸ ಕಂಪನಿಯ ಎಂಡಿ ಮತ್ತು ಸಿಇಒ ಆಗಿ ಗೋಯೆಂಕಾ ಅವರೇ ಮುಂದುವರಿಯುವ ಸಾಧ್ಯತೆ ಇದೆ. ಆದರೆ ಟರ್ಮ್ ಶೀಟ್ ಪ್ರಕಾರ ಸೋನಿ ಗ್ರೂಪ್ ನಿರ್ದೇಶಕರ ಮಂಡಳಿಯ ಹೆಚ್ಚಿನ ಸದಸ್ಯರನ್ನು ನಾಮನಿರ್ದೇಶನ ಮಾಡುತ್ತದೆ. ಪ್ರಸ್ತುತ ಎಸ್‌ಪಿಎನ್‌ನ ಎಂಡಿ ಮತ್ತು ಸಿಇಒ ಆಗಿರುವ ಎನ್‌ಪಿ ಸಿಂಗ್ ಅವರು ವಿಲೀನಗೊಂಡ ಕಂಪನಿಯ ಮಂಡಳಿಗೆ ಸೇರುವ ನಿರೀಕ್ಷೆಯಿದೆ. ಮಂಗಳವಾರ ಪತ್ರಿಕಾ ಸಮಯದವರೆಗೂ ಝೀ ಮತ್ತು ಎಸ್‌ಪಿಎನ್‌ ‘ಇಟಿ’ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಝೀ ಷೇರುಗಳು ಮಂಗಳವಾರ ಬಿಎಸ್ಇನಲ್ಲಿ ಶೇ. 5.26ರಷ್ಟು ಏರಿಕೆ ಕಂಡಿದ್ದು 349 ರೂ.ಗೆ ಮೌಲ್ಯ ಹೆಚ್ಚಿಸಿಕೊಂಡಿವೆ. ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.