ಧನ್ವೀರ್‌-ಶ್ರೀಲೀಲಾ ಜೋಡಿಯ 'ಬೈ ಟು ಲವ್‌' ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮಾ

ಹರಿ ಸಂತೋಷ್‌ ನಿರ್ದೇಶನದ 'ಬೈಟು ಲವ್‌' ಸಿನಿಮಾದಲ್ಲಿ ವಿಶೇಷ ಕಥೆಯನ್ನು ಹೇಳಲಾಗುತ್ತಿದ್ದು, ಅದರ ಬಗ್ಗೆ ನಿರ್ದೇಶಕರು ವಿಜಯ ಕರ್ನಾಟಕದ ಜತೆ ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ಧನ್ವೀರ್ ಮತ್ತು ಶ್ರೀಲೀಲಾ ನಟಿಸುತ್ತಿದ್ದಾರೆ.

ಧನ್ವೀರ್‌-ಶ್ರೀಲೀಲಾ ಜೋಡಿಯ 'ಬೈ ಟು ಲವ್‌' ಸಿನಿಮಾದಲ್ಲಿ ಫ್ಯಾಮಿಲಿ ಡ್ರಾಮಾ
Linkup
ಹರೀಶ್‌ ಬಸವರಾಜ್‌ ಮದುವೆ ಎಂಬುದು ಪ್ರತಿಯೊಬ್ಬರ ಬದುಕಿನಲ್ಲಿಯೂ ಬಹಳ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಅದರ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಅದರ ಮಹತ್ವ ಮತ್ತು ಸಂಬಂಧಗಳ ನಡುವಿನ ಕಥೆಯನ್ನು ರೊಮ್ಯಾಂಟಿಕ್‌ ಅಗಿ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ಹರಿಸಂತೋಷ್‌. 'ಕಾಲೇಜು ಕುಮಾರ' ಸಿನಿಮಾದಲ್ಲಿಅಪ್ಪ ಮಗನ ನಡುವಿನ ಬಾಂಧವ್ಯನ್ನು ತೋರಿಸಿ ಗೆದ್ದ ಸಂತೋಷ್‌ ಈ ಬಾರಿ ಲವ್‌ ಸ್ಟೋರಿಯ ಜತೆಗೆ ಮದುವೆ, ಅಪ್ಪ, ಅಮ್ಮ ಹೀಗೆ ನಾನಾ ಸಂಬಂಧಗಳ ಬಗ್ಗೆ ಹೇಳುತ್ತಿದ್ದಾರೆ. 'ಈ ಜನರೇಷನ್‌ನವರಲ್ಲಿ ಮದುವೆ, ಸಂಬಂಧದ ಬಗ್ಗೆ ಅಷ್ಟಾಗಿ ಒಲವಿಲ್ಲ. ಎಲ್ಲರೂ ಮೊಬೈಲ್‌ ಮತ್ತು ಸೋಶಿಯಲ್‌ ಮೀಡಿಯಾದ ಮೂಲಕ ಪ್ರೀತಿ ಮಾಡಿ ನಂತರ ಬಿಟ್ಟು ಹೋಗುತ್ತಿದ್ದಾರೆ. ಮಕ್ಕಳಾದರೆ ಅವುಗಳನ್ನು ಹೇಗೆ ಸಾಕುವುದು ಎಂದು ಅದರ ಬಗ್ಗೆಯೂ ಒಲವಿಲ್ಲ. ಮೊದಲೆಲ್ಲಾ ಎಷ್ಟೊಂದು ಮಕ್ಕಳನ್ನು ಬಹಳ ಚೆನ್ನಾಗಿ ಸಾಕುತ್ತಿದ್ದರು. ಅದೇ ಆಗಿನ ಸಂಸಾರ ಮತ್ತು ಒಟ್ಟು ಕುಟುಂಬದ ಗುಟ್ಟು. ಹಾಗಾಗಿ ನಾನು ಇಂದಿನ ಯೂತ್ಸ್‌ಗೆ ಮದುವೆ, ಮಕ್ಕಳು, ಅಪ್ಪ ಅಮ್ಮನ ಜತೆಗಿನ ಸಂಬಂಧ ಎಲ್ಲವನ್ನು ಹೇಳುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡುತ್ತಿದ್ದೇನೆ' ಎನ್ನುತ್ತಾರೆ ಹರಿ ಸಂತೋಷ್‌. 'ನೆಂಟರು, ಅಣ್ಣ, ತಮ್ಮ ಎಲ್ಲರ ಜತೆ ಬದುಕಿದಾಗ ಮಾತ್ರ ಜೀವನ ಸುಂದರವಾಗಿರುತ್ತದೆ ಎಂಬುದು ಈ ಸಿನಿಮಾದ ಒಟ್ಟು ಸಾರಾಂಶ. ಈ ಚಿತ್ರದಲ್ಲಿ ಧನ್ವೀರ್‌ ದಾವಣಗೆರೆಯಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಯುವಕನಾಗಿ ನಟಿಸಿದ್ದಾರೆ. ಎಲ್ಲವನ್ನು ತುಂಬಾ ಸುಲಭವಾಗಿ ಆರಾಮಾಗಿ ಬದುಕನ್ನು ಸಾಗಿಸುವ ಹುಡುಗ. ಶ್ರೀಲೀಲಾ ಮಲೆನಾಡಿನಿಂದ ಬಂದಿರುವ ಹುಡುಗಿ. ಎಲ್ಲವನ್ನೂ ಪ್ಲಾನಿಂಗ್‌ ಪ್ರಕಾರ ಮಾಡುತ್ತಿರುತ್ತಾಳೆ. ಇವರಿಬ್ಬರೂ ಒಂದಾದರೆ ಏನಾಗುತ್ತದೆ ಎಂಬುದೇ ಸಿನಿಮಾ' ಎನ್ನುವುದು ನಿರ್ದೇಶಕರ ಮಾತು. ತೆಲುಗಿಗೆ ಬೈ ಟು ಲವ್‌ ಈ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿಯೇ ತೆಲುಗಿಗೆ ರೀಮೇಕ್‌ ಆಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. 'ಈಗ' ಸಿನಿಮಾವನ್ನು ನಿರ್ಮಾಣ ಮಾಡಿದ್ದ ಸಾಯಿ ಕೊರ್ರಪಾಟಿ ಈ ಚಿತ್ರವನ್ನು ನಿರ್ಮಾಣ ಮಾಡಲು ಮುಂದೆ ಬಂದಿದ್ದಾರೆ. ಹರಿ ಸಂತೋಷ್‌ ಈಗಾಗಲೇ ಕಥೆಯನ್ನು ಸಹ ಹೇಳಿದ್ದಾರಂತೆ. ಖುಷಿಯಾಗಿರುವ ಸಾಯಿ ದೊಡ್ಡ ಸ್ಟಾರ್‌ ನಟರನ್ನು ಈ ಸಿನಿಮಾದಲ್ಲಿ ನಟಿಸುವಂತೆ ಮಾಡಲು ಪ್ಲಾನ್‌ ಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಫೈನಲ್‌ ಆಗಬೇಕಿತ್ತು. ಕೊರೊನಾದಿಂದ ಮುಂದಕ್ಕೆ ಹೋಗಿದೆ. ಹರಿ ಸಂತೋಷ್‌ ತಮ್ಮ 'ಕಾಲೇಜು ಕುಮಾರ' ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ರಿಮೇಕ್‌ ಮಾಡಿ ಯಶಸ್ವಿಯಾಗಿದ್ದರೆ. 'ಕಥೆಯ ಒನ್‌ ಲೈನ್‌ ಕೇಳಿ ಸಾಯಿ ಕೊರ್ರಪಾಟಿ ಅವರು ಖುಷಿಯಾಗಿದ್ದಾರೆ. ಇದು ಎಲ್ಲ ಚಿತ್ರರಂಗಕ್ಕೂ ಸಲ್ಲುವ ಸಿನಿಮಾ. ಹಾಗಾಗಿ ತೆಲುಗಿಗೆ ರೀಮೇಕ್‌ ಆಗುತ್ತದೆ. ಯೂತ್‌ಫುಲ್‌ ಸಬ್ಜೆಕ್ಟ್ ಮೂಲಕ ಕೌಟುಂಬಿಕ ಮತ್ತು ಸಾಂಸಾರಿಕ ಯಶಸ್ಸಿನ ಗುಟ್ಟನ್ನು ಹೇಳುವ ಪ್ರಯತ್ನ ಇದರಲ್ಲಿದೆ' ಎನ್ನುತ್ತಾರೆ ಹರಿ ಸಂತೋಷ್‌.