ದೆಹಲಿ ಆಕ್ಸಿಜನ್ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಬೆಳಿಗ್ಗೆ 10.30ರ ಗಡುವು ನೀಡಿದ ಸುಪ್ರೀಂಕೋರ್ಟ್

ದೆಹಲಿಯಲ್ಲಿ ಉಂಟಾಗಿರುವ ಆಕ್ಸಿಜನ್ ಕೊರತೆಯನ್ನು ನೀಗಿಸಲು ಯಾವ ಯೋಜನೆಗಳನ್ನು ರೂಪಿಸಲಾಗಿದೆ ಎಂಬ ಬಗ್ಗೆ ಗುರುವಾರ ಬೆಳಿಗ್ಗೆ 10.30ರ ವೇಳೆಗೆ ವಿವರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಗಡುವು ನೀಡಿದೆ.

ದೆಹಲಿ ಆಕ್ಸಿಜನ್ ಬಿಕ್ಕಟ್ಟು: ಕೇಂದ್ರ ಸರ್ಕಾರಕ್ಕೆ ಬೆಳಿಗ್ಗೆ 10.30ರ ಗಡುವು ನೀಡಿದ ಸುಪ್ರೀಂಕೋರ್ಟ್
Linkup
ಹೊಸದಿಲ್ಲಿ: ಕೋವಿಡ್ ಸಾಂಕ್ರಾಮಿಕದ ವೇಳೆ ಬಿಕ್ಕಟ್ಟಿನ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಕ್ತಿ ಮೀರಿ ಕೆಲಸ ಮಾಡುತ್ತಿವೆ. ಇಂತಹ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆಗಾಗಿ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದೆ. ಹೈಕೋರ್ಟ್‌ನ ಆದೇಶದ ವಿರುದ್ಧ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಅದು ಈ ಹೇಳಿಕೆ ನೀಡಿದೆ. ಮುಂಬೈ ಮಾದರಿಯನ್ನು ಅನುಸರಿಸಿ ದೆಹಲಿಗೆ ಆಕ್ಸಿಜನ್ ಪೂರೈಕೆ ಮಾಡುವುದನ್ನು ನೋಡಿಕೊಳ್ಳುವಂತೆ ಕೂಡ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಶಿಫಾರಸು ಮಾಡಿದೆ. ಹಿಂದಿನ ಆದೇಶವನ್ನು ಸೂಕ್ತವಾಗಿ ಈಡೇರಿಸದೆ ಇದ್ದ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಬೆದರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಈ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣವನ್ನು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ ಮತ್ತು ಎಂಆರ್ ಶಾ ಅವರ ಪೀಠಕ್ಕೆ ವರ್ಗಾಯಿಸಿದರು. 'ಕೇಂದ್ರ ಮತ್ತು ರಾಜ್ಯಗಳ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವುದು ಅಥವಾ ನ್ಯಾಯಾಂಗ ನಿಂದನೆಗೆ ಒಳಪಡಿಸುವುದರಿಂದ ದೆಹಲಿಯ ಜನರಿಗೆ ಆಕ್ಸಿಜನ್ ಸಿಗುವುದಿಲ್ಲ. ನ್ಯಾಯಾಂಗ ನಿಂದನೆಯಿಂದ ಸಹಾಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. 'ನಾವು 700 ಮೆಟ್ರಿಕ್ ಟನ್‌ ಆಕ್ಸಿಜನ್‌ಗೆ ಆದೇಶ ಹೊರಡಿಸಿದ್ದೆವು. ನಾವು ಅದನ್ನು ಬಳಿಕ ಪರಾಮರ್ಶಿಸಬಹುದು. ನಾವು ದೆಹಲಿಯ ಜನತೆಗೆ ಉತ್ತರದಾಯಿಗಳಾಗಿದ್ದೇವೆ. ದೆಹಲಿಗೆ 700 ಟನ್ ಒದಗಿಸಲು ಸೂಕ್ತ ಮಾರ್ಗ ಯಾವುದು?' ಎಂದು ಪ್ರಶ್ನಿಸಿತು. ದೆಹಲಿಯು 500 ಟನ್ ಆಕ್ಸಿಜನ್‌ನೊಂದಿಗೆ ನಿರ್ವಹಣೆ ಮಾಡಬಹುದು ಎಂದು ಕೇಂದ್ರ ತಿಳಿಸಿತು. ಇದಕ್ಕೆ ಅಸಮ್ಮತಿ ಸೂಚಿಸಿದ ಕೋರ್ಟ್, ನಾವು ಆದೇಶಿಸಿದ್ದು 700 ಟನ್. ಈಗ ಸಿಗುತ್ತಿರುವ 550 ಟನ್ ಆಕ್ಸಿಜನ್ ನಗರದ ಸಮಸ್ಯೆಯನ್ನು ಬಗೆಹರಿಸಲಾರದು ಎಂದು ಹೇಳಿತು. 'ನಾವು ನಿಮಗೆ ಚಿಕ್ಕ ಆದೇಶವನ್ನು ನೀಡುತ್ತೇವೆ. ಸಂಜೆ 5 ಗಂಟೆಯವರೆಗೆ ಸಮಯ ಕೊಡುತ್ತೇವೆ. ನಿಮ್ಮ ಪೂರೈಕೆ ಮೂಲಗಳನ್ನು ಮತ್ತು ದೆಹಲಿಗೆ ಹೇಗೆ 700 ಮೆಟ್ರಿಕ್ ಟನ್ ಸಿಗುತ್ತದೆ ಎಂಬುದನ್ನು ನಾಳೆ ಬೆಳಿಗ್ಗೆ 10.30ರ ಒಳಗೆ ತಿಳಿಸಿ. ನಾವು ನ್ಯಾಯಾಂಗ ನಿಂದನೆ ಪ್ರಕ್ರಿಯೆ ನಡೆಸಲು ಬಯಸುವುದಿಲ್ಲ. ನಾವು ತಳಮಟ್ಟದ ಕೆಲಸ ಬಯಸುತ್ತೇವೆ' ಎಂದು ಸೂಚಿಸಿತು. 'ನಾವು 700 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸುವ ಪ್ರಕ್ರಿಯೆಯಲ್ಲಿದ್ದೇವೆ. ಮೇ 4ರಂದು 585 ಟನ್ ತಲುಪಲು ಸಾಧ್ಯವಾಗಿದೆ. 590 ಟನ್‌ವರೆಗೂ ಆಕ್ಸಿಜನ್‌ಅನ್ನು ದೆಹಲಿಗೆ ಹಂಚಿಕೆ ಮಾಡಲಾಗಿದೆ' ಎಂದು ಕೇಂದ್ರ ತಿಳಿಸಿತು. ಕೋವಿಡ್ ನಿರ್ವಹಣೆಯಲ್ಲಿ ಮುಂಬೈನ ನಗರ ಪಾಲಿಕೆ ಅತ್ಯುತ್ತಮ ಮಾದರಿ ಕೆಲಸ ಮಾಡುತ್ತಿದೆ. ಅದನ್ನು ದೆಹಲಿಯಲ್ಲಿಯೂ ಕೇಂದ್ರ ಸರ್ಕಾರ ಅನುಸರಿಸಬೇಕು ಎಂದು ನ್ಯಾಯಪೀಠ ಸಲಹೆ ನೀಡಿತು.