
ಹೊಸದಿಲ್ಲಿ: ದಿಲ್ಲಿಯ ದಂಡು ಪ್ರದೇಶದಲ್ಲಿ ಭಾನುವಾರ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ದಲಿತ ಬಾಲಕಿಯ ಮನೆಗೆ ಕಾಂಗ್ರೆಸ್ ಸಂಸದ ಬುಧವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
'ನಾನು ಕುಟುಂಬದವರೊಂದಿಗೆ ಮಾತನಾಡಿದ್ದೇನೆ. ಅವರು ನ್ಯಾಯ ಬಯಸಿದ್ದಾರೆಯೇ ವಿನಾ ಬೇರೇನೂ ಅಲ್ಲ. ನಮಗೆ ನ್ಯಾಯ ಸಿಗುತ್ತಿಲ್ಲ ಹಾಗೂ ತಮಗೆ ಸಹಾಯ ಬೇಕು ಎಂದು ಅವರು ಕೋರುತ್ತಿದ್ದಾರೆ. ನಾವು ಅದನ್ನು ಮಾಡುತ್ತೇವೆ. ನಾನು ನಿಮ್ಮ ಜತೆ ಇದ್ದೇನೆ ಎಂದು ಹೇಳಿದ್ದೇನೆ. ಅವರಿಗೆ ನ್ಯಾಯ ಸಿಗುವವರೆಗೂ ರಾಹುಲ್ ಗಾಂಧಿ ಅವರ ಜತೆಗೆ ಇರುತ್ತಾರೆ' ಎಂದು ರಾಹುಲ್ ಗಾಂಧಿ ಹೇಳಿದರು.
'ತಮ್ಮ ಮಗಳು, ಈ ದೇಶದ ಮಗಳು, ಆಕೆಗೆ ನ್ಯಾಯ ಸಿಗಬೇಕು ಎಂದು ಅವರ ಪೋಷಕರು ಕಣ್ಣೀರಿಡುತ್ತಾ ಒಂದೇ ಮಾತನ್ನು ಹೇಳಿದ್ದಾರೆ. ಈ ನ್ಯಾಯದ ಹಾದಿಯಲ್ಲಿ ನಾನು ಅವರೊಂದಿಗೆ ಇದ್ದೇನೆ' ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ದಿಲ್ಲಿಯ ಪುರಾನಾ ನಂಗಲ್ ಎಂಬಲ್ಲಿ ನಡೆದ ಈ ಭಯಾನಕ ಕೃತ್ಯ ಜನರ ಎದೆನಡುಗಿಸಿದೆ. ರಾಜಧಾನಿಯ ಬೀದಿಗಿಳಿದ ಜನರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಈ ಪುಟಾಣಿ ಬಾಲಕಿಗೆ ನ್ಯಾಯ ಒದಗಿಸಿ. ನಾಲ್ವರು ಆರೋಪಿಗಳಿಗೆ ಮರಣದಂಡನೆ ವಿಧಿಸಿ ಎಂದು ಆಗ್ರಹಿಸಿದ್ದಾರೆ.
ಏನಿದು ಘಟನೆ?ಸಂಜೆ ನೀರು ತರಲು ಹೋಗಿದ್ದ 9 ವರ್ಷದ ಬಾಲಕಿ, ತುಂಬಾ ಸಮಯವಾದರೂ ಮನೆಗೆ ಮರಳಿರಲಿಲ್ಲ. ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾಳೆ ಎಂದು ಮನೆಯವರಿಗೆ ಫೋನ್ ಕರೆ ಬಂದಿತ್ತು. ಪುರಾನಾ ನಂಗಲ್ ಪ್ರದೇಶದ ಚಿತಾಗಾರದ ಸಮೀಪ ಈ ಕುಟುಂಬ ವಾಸಿಸುತ್ತಿತ್ತು. ಸಂಜೆ 6 ಗಂಟೆಗೆ ಕರೆ ಮಾಡಿದ್ದ ಚಿತಾಗಾರದ ಪೂಜಾರಿ ಹಾಗೂ ಇತರೆ ಮೂವರು, ಬಾಲಕಿಯ ತಾಯಿಗೆ ಆಕೆಯ ಮೃತದೇಹ ತೋರಿಸಿದ್ದರು.
ಬಾಲಕಿಯ ಮುಂಗೈ, ಮೊಣಕೈಗಳ ಮೇಲೆ ಸುಟ್ಟ ಗಾಯಗಳನ್ನು ತೋರಿಸಿದ್ದರು. ಆಕೆಯ ತುಟಿ ನೀಲಿಗಟ್ಟಿತ್ತು. ಈ ಸಾವಿನ ಬಗ್ಗೆ ಪೊಲೀಸರಿಗೆ ತಿಳಿಸುವುದು ಬೇಡ ಎಂದು ನಾಲ್ವರೂ, ಬಾಲಕಿಯ ತಾಯಿಗೆ ಹೇಳಿದ್ದರು. ಪೊಲೀಸರಿಗೆ ದೂರು ನೀಡಿದರೆ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವೈದ್ಯರು ಆಕೆಯ ಅಂಗಗಳನ್ನು ಮಾರಾಟ ಮಾಡುತ್ತಾರೆ ಎಂದು ನಂಬಿಸಿ, ಮೃತದೇಹಕ್ಕೆ ಅಂತ್ಯಸಂಸ್ಕಾರ ಮಾಡಿದ್ದರು.
ಅನುಮಾನ ವ್ಯಕ್ತಪಡಿಸಿದ ಜನರುಆದರೆ, ಇದರ ಬಗ್ಗೆ ಗುಮಾನಿ ವ್ಯಕ್ತಪಡಿಸಿದ ಜನರು ಭಾನುವಾರ ರಾತ್ರಿ ಚಿತಾಗಾರದ ಮುಂದೆ ಪ್ರತಿಭಟನೆ ನಡೆಸಿ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಪೊಲೀಸರಿಗೆ ರಾತ್ರಿ 10.30ರ ವೇಳೆಗೆ ಮಾಹಿತಿ ನೀಡಲಾಗಿತ್ತು. ನಾಲ್ವರು ಆರೋಪಿಗಳಾದ ರಾಧೆ ಶ್ಯಾಮ್, ಕುಲದೀಪ್, ಲಕ್ಷ್ಮಿನಾರಾಯಣ ಮತ್ತು ಸಲೀಂ ಅವರನ್ನು ಸೋಮವಾರ ಬಂಧಿಸಲಾಗಿತ್ತು. ರಾಧೆ ಶ್ಯಾಮ್ ಅಲ್ಲಿನ ಪೂಜಾರಿಯಾಗಿದ್ದರೆ, ಉಳಿದ ಮೂವರು ಬಾಲಕಿಯ ತಾಯಿಗೆ ಪರಿಚಿತರಾಗಿದ್ದರು.
ವಿದ್ಯುತ್ ಸ್ಪರ್ಶದಿಂದ ಆಕೆ ಮೃತಪಟ್ಟಿದ್ದರೆ, ಮರಣೋತ್ತರ ಪರೀಕ್ಷೆಗೆ ಕಳಿಸಲು ಅಥವಾ ಪೊಲೀಸರಿಗೆ ಮಾಹಿತಿ ನೀಡಲು ಅವರು ಏಕೆ ಮುಂದಾಗಲಿಲ್ಲ. ಸಂಜೆ 6 ಗಂಟೆಯ ಬಳಿಕ ಅಂತ್ಯಸಂಸ್ಕಾರ ನಡೆಸಲು ಅವಕಾಶವಿಲ್ಲದೆ ಇದ್ದರೂ ತರಾತುರಿಯಲ್ಲಿ ಆಕೆಯ ದೇಹವನ್ನು ಸುಟ್ಟಿದ್ದು ಏಕೆ? ಅದೂ ಬಾಲಕಿಯ ಪೋಷಕರ ಅನುಮತಿ ಇಲ್ಲದೆ ಹೇಗೆ ನಡೆಸಿದರು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದರು.