ರಾಜ್ಯದಲ್ಲಿ ಕಳೆದ ನವೆಂಬರ್‌ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಲೀಟರ್‌ಗೆ ತಲಾ ಏಳು ರೂಪಾಯಿಯಷ್ಟು ಇಳಿಸಿದರೂ ಮಾರಾಟ ತೆರಿಗೆ ಆದಾಯ ಮಾತ್ರ ಹೆಚ್ಚಾಗಿದೆ!
ತೈಲ ತೆರಿಗೆ ಇಳಿಕೆಯಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 2100 ಕೋಟಿ ರೂ. ನಷ್ಟವಾಗಲಿದೆ ಎಂದು ಸ್ವತಃ ಸಿಎಂ ಹೇಳಿದ್ದರು. ಆದರೆ, ಮೊದಲ ತಿಂಗಳ ಅವಧಿಯಲ್ಲಿ 135 ಕೋಟಿ ರೂ. ಹೆಚ್ಚಳವಾಗಿದೆ!
ತೈಲ ಮಾರಾಟ ತೆರಿಗೆ ಅಕ್ಟೋಬರ್‌ನಲ್ಲಿ 1,739.25 ಕೋಟಿ ರೂ. ಇದ್ದರೆ ನವೆಂಬರ್‌ನಲ್ಲಿ ಅದು 1,924.07 ಕೋಟಿ ರೂ.ಗೆ ಜಿಗಿದಿದೆ. ರಾಜ್ಯದ ಗಡಿ ಭಾಗದ 12 ಜಿಲ್ಲೆಗಳಲ್ಲಿ ತೈಲ ಮಾರಾಟ ಪ್ರಮಾಣ ಶೇ. 20ರಷ್ಟು ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ನೆರೆ ರಾಜ್ಯಗಳಲ್ಲಿ ತೈಲ ತೆರಿಗೆ ಇಳಿಸದೆ ಇರುವುದರ ಲಾಭ ರಾಜ್ಯಕ್ಕೆ ಆಗಿದೆ.
ತೈಲ ಮಾರಾಟ ತೆರಿಗೆ ಏಪ್ರಿಲ್‌ನಲ್ಲಿ 1,885 ಕೋಟಿ ರೂ. ಸಂಗ್ರಹವಾಗಿದ್ದೇ ಈ ಆರ್ಥಿಕ ವರ್ಷದ ದಾಖಲೆಯಾಗಿತ್ತು. ಆದರೆ, ನವೆಂಬರ್ ಆದಾಯ ಅದನ್ನೂ ಮೀರಿಸಿದೆ.
ಇದರ ನಡುವೆ ನವೆಂಬರ್ ತಿಂಗಳಲ್ಲಿ ರಾಜ್ಯ ಸರಕಾರದ ನಾಲ್ಕು ಪ್ರಮುಖ ತೆರಿಗೆ ಮೂಲಗಳಾದ ಅಬಕಾರಿ, ಮಾರಾಟ ತೆರಿಗೆ, ಸಾರಿಗೆ, ಮುದ್ರಾಂಕ-ನೋಂದಣಿ ಶುಲ್ಕಗಳಿಂದ 12,000 ಕೋಟಿ ರೂ. ಆದಾಯ ಸಂಗ್ರಹವಾಗಿರುವುದು ಆರ್ಥಿಕತೆ ಸಹಜ ಸ್ಥಿತಿಗೆ ಮರಳುತ್ತಿರುವ ಭರವಸೆ ಮೂಡಿಸಿದೆ.
ತೆರಿಗೆ ಸಂಗ್ರಹ ಆಶಾದಾಯಕ
ಪ್ರಸಕ್ತ 2021-22ನೇ ಸಾಲಿನಲ್ಲಿ ಎಂಟು ತಿಂಗಳು ಪೂರ್ಣಗೊಂಡಿದ್ದು ತಿಂಗಳು ಕಳೆದಂತೆ ತೆರಿಗೆ ಆದಾಯ ಸಂಗ್ರಹ ಪ್ರಮಾಣದಲ್ಲಿ ಚೇತರಿಕೆ ಕಾಣುತ್ತಿದೆ. ರಾಜ್ಯ ಜಿಎಸ್‌ಟಿ, ಮಾರಾಟ ತೆರಿಗೆ, ವೃತ್ತಿ ತೆರಿಗೆ ಸೇರಿದಂತೆ ಒಟ್ಟಾರೆ ವಾಣಿಜ್ಯ ತೆರಿಗೆ ಮೂಲದಿಂದ 8,164.29 ಕೋಟಿ ರೂ. ಸಂಗ್ರಹವಾಗಿದೆ. ಆ ಮೂಲಕ ಜಿಎಸ್‌ಟಿ ಪರಿಹಾರವೂ ಸೇರಿದಂತೆ ಎಂಟು ತಿಂಗಳಲ್ಲಿ 68,618 ಕೋಟಿ ರೂ. ಸಂಗ್ರಹವಾದಂತಾಗಿದೆ.
ನವೆಂಬರ್ ತಿಂಗಳಲ್ಲಿ ಅಬಕಾರಿ ಸುಂಕದಿಂದ 2,146.72 ಕೋಟಿ ರೂ., ಮುದ್ರಾಂಕ ಮತ್ತು ನೋಂದಣಿ ಶುಲ್ಕದಿಂದ 1,091 ಕೋಟಿ ರೂ., ಸಾರಿಗೆ ತೆರಿಗೆ ರೂಪದಲ್ಲಿ ನವೆಂಬರ್‌ನಲ್ಲಿ 582 ಕೋಟಿ ರೂ. ಸಂಗ್ರಹವಾಗಿದೆ ಎಂದು ಮೂಲಗಳು ತಿಳಿಸಿವೆ.
ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ತೈಲ ಬೆಲೆ ತುಸು ಕಡಿಮೆಯಿರುವುದರಿಂದ ಗಡಿ ಭಾಗಗಳಲ್ಲಿ ತೈಲ ಮಾರಾಟ ಹೆಚ್ಚಳ, ರಾಜ್ಯದಲ್ಲೂ ಆಂತರಿಕ ಬಳಕೆ ಪ್ರಮಾಣ ಹೆಚ್ಚಾಗಿರುವ ಪರಿಣಾಮ ಮಾರಾಟ ತೆರಿಗೆ ಆದಾಯ ವೃದ್ಧಿಸಿರುವ ಸಾಧ್ಯತೆ ಇದೆ ಎಂದು ರಾಜ್ಯ ಜಿಎಸ್‌ಟಿ ಸಲಹಾ ಸಮಿತಿ ಸದಸ್ಯ ಬಿ.ಟಿ. ಮನೋಹರ್ ಅಭಿಪ್ರಾಯಪಟ್ಟಿದ್ದಾರೆ.
ಮಾರಾಟ ತೆರಿಗೆ ಆದಾಯ ವಿವರ
ಏಪ್ರಿಲ್ - 1885.76 ಕೋಟಿ ರೂ.
ಮೇ - 1620.63 ಕೋಟಿ ರೂ.
ಜೂನ್ - 1235.19 ಕೋಟಿ ರೂ.
ಜುಲೈ - 1458.48 ಕೋಟಿ ರೂ.
ಆಗಸ್ಟ್ - 1729.50 ಕೋಟಿ ರೂ.
ಸೆಪ್ಟೆಂಬರ್ - 1793.81 ಕೋಟಿ ರೂ.
ಅಕ್ಟೋಬರ್ - 1739.25 ಕೋಟಿ ರೂ.
ನವೆಂಬರ್ - 1924.07 ಕೋಟಿ ರೂ.
12 ಜಿಲ್ಲೆಗಳಲ್ಲಿ ಮಾರಾಟ ಜಿಗಿತ
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಇಳಿಕೆಯಾಗಿದ್ದರೂ ಪಕ್ಕದ ರಾಜ್ಯಗಳಲ್ಲಿ ತೆರಿಗೆ ಇಳಿಸಿಲ್ಲ. ಹೀಗಾಗಿ ರಾಜ್ಯಕ್ಕೆ ಹೋಲಿಸಿದರೆ ಆಂಧ್ರ ಪ್ರದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 9, 11 ರೂ., ಮಹಾರಾಷ್ಟ್ರದಲ್ಲಿ ಪೆಟ್ರೋಲ್ 9 ರೂ., ಡೀಸೆಲ್ 10 ರೂ., ಕೇರಳದಲ್ಲಿ ಪೆಟ್ರೋಲ್ 6 ರೂ., ಡೀಸೆಲ್ 9 ರೂ., ತಮಿಳುನಾಡಿನಲ್ಲಿ ಪೆಟ್ರೋಲ್ 1 ರೂ., ಡೀಸೆಲ್ 7 ರೂ.ನಷ್ಟು ಹೆಚ್ಚಿದೆ.
ಇದರಿಂದಾಗಿ ನೆರೆ ರಾಜ್ಯಗಳ ವಾಹನಗಳು ತೈಲ ತುಂಬಿಸಿಕೊಳ್ಳುವುದಕ್ಕಾಗಿ ರಾಜ್ಯದ ಗಡಿ ಭಾಗದ ಬಂಕ್‌ಗಳಿಗೆ ಬರುತ್ತಿವೆ. ಇದರ ಪರಿಣಾಮವಾಗಿ 12 ಗಡಿ ಜಿಲ್ಲೆಗಳಲ್ಲಿ ಮಾಸಿಕ ಸರಾಸರಿ ತೈಲ ಮಾರಾಟ ಪ್ರಮಾಣಕ್ಕಿಂತ ನವೆಂಬರ್‌ನಲ್ಲಿ ಶೇ. 20ರಷ್ಟು ಹೆಚ್ಚಾಗಿರುವುದು ವಿಶೇಷ!
ರಾಜ್ಯದ ಗಡಿ ಭಾಗದ ಬಂಕ್‌ಗಳಲ್ಲಿ ಸರಾಸರಿ ಮಾರಾಟಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ತೈಲ ಮಾರಾಟವಾಗಿದ್ದರೆ, ಇತರೆ ಜಿಲ್ಲೆಗಳಲ್ಲಿ ಮಾರಾಟ ಪ್ರಮಾಣ ತುಸು ಇಳಿಕೆಯಾಗಿದೆ. ಒಟ್ಟಾರೆ ಬಳಕೆಯಲ್ಲಿ ಹೆಚ್ಚಳವಾಗಿರುವ ಪರಿಣಾಮ ರಾಜ್ಯ ಸರಕಾರಕ್ಕೆ ಮಾರಾಟ ತೆರಿಗೆ ಆದಾಯ ಹೆಚ್ಚಾಗಿರಬಹುದು ಎಂದು ಅಖಿಲ ಕರ್ನಾಟಕ ಫೆಡರೇಷನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ಅಧ್ಯಕ್ಷ ಕೆ.ಎಂ. ಬಸವೇಗೌಡ ತಿಳಿಸಿದರು. ರಾಜ್ಯದ ಗಡಿ ಭಾಗದ ಜಿಲ್ಲೆಗಳಲ್ಲಿ ಸುಮಾರು 1000 ಬಂಕ್‌ಗಳಿವೆ.