2021-22ರಲ್ಲಿ ಭಾರತೀಯ ಐಟಿ ಕ್ಷೇತ್ರದ ಅದಾಯದಲ್ಲಿ ಎರಡಂಕಿಯ ಪ್ರಗತಿ - ಅಜೀಂ ಪ್ರೇಮ್‌ಜೀ ವಿಶ್ವಾಸ
2021-22ರಲ್ಲಿ ಭಾರತೀಯ ಐಟಿ ಕ್ಷೇತ್ರದ ಅದಾಯದಲ್ಲಿ ಎರಡಂಕಿಯ ಪ್ರಗತಿ - ಅಜೀಂ ಪ್ರೇಮ್‌ಜೀ ವಿಶ್ವಾಸ
ಭಾರತೀಯ ಮಾಹಿತಿ ತಂತ್ರಜ್ಞಾನ ವಲಯದ ಆದಾಯವು 2021-22ನೇ ಆರ್ಥಿಕ ವರ್ಷದಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸುವ ವಿಶ್ವಾಸ ಇದೆ ಎಂದು ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಮ್ ಪ್ರೇಮ್‌ಜೀ ಬುಧವಾರ ತಿಳಿಸಿದ್ದಾರೆ.
ಮುಂಬಯಿ: ಭಾರತೀಯ ಮಾಹಿತಿ ತಂತ್ರಜ್ಞಾನ ವಲಯದ ಆದಾಯವು 2021-22ರಲ್ಲಿ ಎರಡಂಕಿಯ ಬೆಳವಣಿಗೆ ದಾಖಲಿಸುವ ವಿಶ್ವಾಸ ಇದೆ ಎಂದು ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಮ್ ಪ್ರೇಮ್‌ಜೀ ತಿಳಿಸಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ನಿಯಂತ್ರಣಕ್ಕೆ ವಿಧಿಸಿರುವ ಲಾಕ್‌ಡೌನ್‌ನ ಪರಿಣಾಮಗಳಿಗೆ ಅನುಗುಣವಾಗಿ ಕ್ಷೇತ್ರವೂ ಬದಲಾಗಿದೆ ಎಂದು ಬಾಂಬೆ ಚಾರ್ಟರ್ಡ್ ಅಕೌಂಟ್ಸ್ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ತಿಳಿಸಿದರು.
ನಾಸ್ಕಾಮ್ ಪ್ರಕಾರ ಐಟಿ ಉದ್ದಿಮೆಯು 2020-21ರಲ್ಲಿ 194 ಶತಕೋಟಿ ಡಾಲರ್ ಆದಾಯ ಗಳಿಸಿತ್ತು. ಈ ವರ್ಷ ಉದ್ದಿಮೆಯು ಎರಡಂಕಿಯ ಬೆಳವಣಿಗೆ ಸಾಧಿಸಿದರೂ ಅಚ್ಚರಿ ಇಲ್ಲ. ಕೋವಿಡ್ ಹೊರತಾಗಿಯೂ 2020-21ರಲ್ಲಿ ಐಟಿ ವಲಯವು ಹೆಚ್ಚುವರಿಯಾಗಿ 1.58 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ತಿಳಿಸಿದರು.
ಕೋವಿಡ್ ಸಾಂಕ್ರಾಮಿಕ ರೋಗ ಹರಡಿದ ಕೆಲ ವಾರಗಳಲ್ಲಿಯೇ ಐಟಿ ಉದ್ದಿಮೆ ವರ್ಕ್ ಫ್ರಮ್ ಹೋಮ್ ಪದ್ಧತಿಗೆ ಹೊರಳಿತು. ಶೇ.90ರಷ್ಟು ಉದ್ಯೋಗಿಗಳು ಮನೆಯಿಂದಲೇ ಈಗಲೂ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹೈಬ್ರಿಡ್ ಮಾದರಿಯಲ್ಲಿ ಜನತೆ ಭಾಗಶಃ ಮನೆ ಅಥವಾ ಕಚೇರಿಯಿಂದ ಕೆಲಸ ಮಾಡುತ್ತಿದ್ದರೂ, ಪ್ರಸ್ತುತ ಅನುಕೂಲಕರವೆನಿಸಿದೆ ಎಂದು ಅಜೀಂ ಪ್ರೇಮ್‌ಜೀ ತಿಳಿಸಿದರು.
ವರ್ಕ್ ಫ್ರಮ್ ಹೋಮ್ ವ್ಯವಸ್ಥೆಯಿಂದ ದೇಶದ ಎಲ್ಲ ಭಾಗಗಳಿಂದಲೂ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮನೆಯಲ್ಲಿಯೇ ಮಹಿಳೆಯರಿಗೂ ತಮ್ಮ ಕರಿಯರ್ ಮುಂದುವರಿಸಲು ಅನುಕೂಲಕರ. ಇದು ಭಾರತವನ್ನು ಕೌಶಲಯುಕ್ತ ತಾಣವಾಗಿ ಅಭಿವೃದ್ಧಿಪಡಿಸಲು ಸುಸಂದರ್ಭ ಸೃಷ್ಟಿಸಿದೆ ಎಂದು ವಿವರಿಸಿದರು.
ಐಟಿ ಕ್ಷೇತ್ರ ಭಾರತದ ಭವಿಷ್ಯದ ಬೆಳವಣಿಗೆಗೆ ಬಹುಮುಖ್ಯವಾದ ಕೊಡುಗೆ ಸಲ್ಲಿಸಲಿದೆ. 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯಾಗಿಸಲು ಸಹಕರಿಸಲಿದೆ ಎಂದರು.