ತೈಲ ದರ ಏರಿಕೆ, ಕಚ್ಚಾ ವಸ್ತು ಕೊರತೆ ಸೈಡ್‌ ಎಫೆಕ್ಟ್: ಸ್ಟೀಲ್‌, ಸಿಮೆಂಟ್‌ ದುಬಾರಿ..!

ಸಿಮೆಂಟ್‌, ಸ್ಟೀಲ್‌ ಜತೆಗೆ ಮರಳು, ಜಲ್ಲಿ, ಎಂ ಸ್ಯಾಂಡ್‌, ಹಾರ್ಡ್‌ವೇರ್‌, ಎಲೆಕ್ಟ್ರಿಕಲ್‌ ವಸ್ತುಗಳ ಬೆಲೆಯೂ ಏರಿದೆ. ಲಾಕ್‌ಡೌನ್‌ ಅವಧಿಯಲ್ಲಿ ಉಂಟಾಗಿದ್ದ ನಷ್ಟವನ್ನು ಸರಿದೂಗಿಸಲು ಕಟ್ಟಡ ಸಾಮಗ್ರಿಗಳ ದರ ಏರಿಕೆ ಮಾಡಿರುವ ಆರೋಪ ಕೇಳಿಬಂದಿದೆ.

ತೈಲ ದರ ಏರಿಕೆ, ಕಚ್ಚಾ ವಸ್ತು ಕೊರತೆ ಸೈಡ್‌ ಎಫೆಕ್ಟ್: ಸ್ಟೀಲ್‌, ಸಿಮೆಂಟ್‌ ದುಬಾರಿ..!
Linkup
ನಾಗಪ್ಪ ನಾಗನಾಯಕನಹಳ್ಳಿ : ಪೆಟ್ರೋಲ್‌, ಡೀಸೆಲ್‌ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಸಿಮೆಂಟ್‌, ಸ್ಟೀಲ್‌ ಹಾಗೂ ಇತರ ಕಟ್ಟಡ ಸಾಮಗ್ರಿಗಳ ದರ ಹೆಚ್ಚಳದ ಬಿಸಿ ತಟ್ಟುತ್ತಿದೆ. ಸ್ವಂತಕ್ಕೊಂದು ಪುಟ್ಟ ಮನೆ ನಿರ್ಮಿಸಿಕೊಳ್ಳುವ ಕನಸು ಕಾಣುತ್ತಿರುವವರಿಗೆ ಸ್ಟೀಲ್‌ ಬೆಲೆ 'ಕಬ್ಬಿಣ'ದ ಕಡಲೆಯಾಗಿದೆ..! ಸ್ಟೀಲ್‌, ಸಿಮೆಂಟ್‌, ಇಟ್ಟಿಗೆ, ಮರಳು, ಎಂ ಸ್ಯಾಂಡ್‌, ಜಲ್ಲಿ, ಸೈಜುಗಲ್ಲು ಸೇರಿದಂತೆ ಕಾಮಗಾರಿಗೆ ಬಳಸುವ ಪ್ರತಿಯೊಂದು ಸಾಮಗ್ರಿಗಳೂ ತುಟ್ಟಿಯಾಗಿವೆ. ಈ ಪರಿಯ ಬೆಲೆ ಏರಿಕೆಗೆ ಜನಸಾಮಾನ್ಯರಷ್ಟೇ ಅಲ್ಲ, ಕಟ್ಟಡ ನಿರ್ಮಾಣವನ್ನೇ ವೃತ್ತಿಯಾಗಿಸಿಕೊಂಡಿರುವ ಬಿಲ್ಡರ್‌ಗಳು, ಗುತ್ತಿಗೆದಾರರು ಕೂಡ ತತ್ತರಿಸಿ ಹೋಗಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಸ್ಟೀಲ್‌ ದರವು ಟನ್‌ಗೆ 12 ಸಾವಿರದಿಂದ 22 ಸಾವಿರ ರೂ. ಜಾಸ್ತಿಯಾಗಿದೆ. ತೈಲ ಬೆಲೆ ಏರಿಕೆ ಮತ್ತು ಕಚ್ಚಾ ವಸ್ತುಗಳ ಅಭಾವದಿಂದಾಗಿ ಕಬ್ಬಿಣದ ದರ ಗಗನಮುಖಿಯಾಗಿದೆ. ಪೆಟ್ರೋಲ್‌, ಡೀಸೆಲ್‌ನಂತೆಯೇ ಸ್ಟೀಲ್‌ ಬೆಲೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಪರಿಣಾಮವಾಗಿ ಕಟ್ಟಡ ನಿರ್ಮಾಣ ವೆಚ್ಚದಲ್ಲಿ ಹೆಚ್ಚಳವಾಗುತ್ತಿದೆ. ಈ ದರ ಸಮರವು ಕಟ್ಟಡ ಮಾಲೀಕರು ಮತ್ತು ಗುತ್ತಿಗೆದಾರರ ನಡುವಿನ ಜಟಾಪಟಿಗೆ ಕಾರಣವಾಗಿದೆ. ಕೆ.ಜಿಗೆ 22 ರೂ. ಹೆಚ್ಚಳ: ಕಟ್ಟಡ ನಿರ್ಮಾಣ ಕಾರ್ಯಕ್ಕೆ ಸ್ಟೀಲ್‌ ಮತ್ತು ಸಿಮೆಂಟ್‌ ಬಹಳ ಮುಖ್ಯ. ಕೊರೊನಾ ಸೋಂಕು, ಲಾಕ್‌ಡೌನ್‌ನಿಂದ ಕಟ್ಟಡ ನಿರ್ಮಾಣ ಕಾರ್ಯವನ್ನು ಮುಂದೂಡಿದ್ದವರಿಗೆ ಬೆಲೆ ಏರಿಕೆಯ ಬಿಸಿ ಸುಡಲಾರಂಭಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಕಬ್ಬಿಣದ ದರವು ಕೆ.ಜಿಗೆ 12 ರೂ.ನಿಂದ 22 ರೂ.ವರೆಗೆ ಏರಿಕೆಯಾಗಿದೆ. ಸಿಮೆಂಟ್‌ ದರವೂ ಚೀಲಕ್ಕೆ 80-100 ರೂ. ಜಾಸ್ತಿಯಾಗಿದೆ. ಇದರಿಂದ ನಿರ್ಮಾಣ ವೆಚ್ಚವು ಶೇ 50ರಷ್ಟು ಹೆಚ್ಚಾಗಲಿದೆ. ಸಿಮೆಂಟ್‌ ದರ 80-100 ರೂ. ಏರಿಕೆ: ಕಚ್ಚಾ ವಸ್ತುಗಳ ಕೊರತೆ ಮತ್ತು ತೈಲ ದರ ಹೆಚ್ಚಳದ ನೆಪವೊಡ್ಡಿ ಕಂಪನಿಗಳು ಸಿಮೆಂಟ್‌ ದರವನ್ನೂ ಜಾಸ್ತಿ ಮಾಡಿವೆ. ರಾಮ್ಕೊ ಸಿಮೆಂಟ್‌ ದರವು ಚೀಲಕ್ಕೆ 430 ರೂ. ಹಾಗೂ ಬಿರ್ಲಾ ದರವು 450 ರೂ. ಇದೆ. ಈ ಮೊದಲು 310 ರೂ.ಗಳಿಗೆ ದೊರಕುತ್ತಿತ್ತು. ಸಿಮೆಂಟ್‌, ಸ್ಟೀಲ್‌ ಜತೆಗೆ ಮರಳು, ಜಲ್ಲಿ, ಎಂ ಸ್ಯಾಂಡ್‌, ಹಾರ್ಡ್‌ವೇರ್‌, ಎಲೆಕ್ಟ್ರಿಕಲ್‌ ವಸ್ತುಗಳ ಬೆಲೆಯೂ ಏರಿದೆ. ಲಾಕ್‌ಡೌನ್‌ ಅವಧಿಯಲ್ಲಿ ಉಂಟಾಗಿದ್ದ ನಷ್ಟವನ್ನು ಸರಿದೂಗಿಸಲು ಕಟ್ಟಡ ಸಾಮಗ್ರಿಗಳ ದರ ಏರಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಎಂ ಸ್ಯಾಂಡ್‌ ದರವು ಟನ್‌ಗೆ 700 ರೂ. ನಿಂದ 800 ರೂ., ಜಲ್ಲಿ ಟನ್‌ಗೆ 650 ರೂ. ನಿಂದ 750 ರೂ.ಗಳಿಗೆ ಹೆಚ್ಚಳಗೊಂಡಿದೆ. ಸಿಮೆಂಟ್‌ ಇಟ್ಟಿಗೆ ದರವು 30 ರೂ. ನಿಂದ 33 ರೂ.ಗಳಿಗೆ ಏರಿದೆ. ಚೀನಾದಿಂದ ಕಡಿಮೆ ಪ್ರಮಾಣದಲ್ಲಿ ಸ್ಟೀಲ್‌ ಆಮದಾಗುತ್ತಿದೆ. ಸ್ಟೀಲ್‌ ತಯಾರಿಕೆಗೆ ಕಚ್ಚಾ ವಸ್ತುಗಳ ಕೊರತೆ ಉಂಟಾಗಿದೆ. ಇದು ದರ ಏರಿಕೆಗೆ ಕಾರಣವಾಗಿದೆ. ದೇಶದಲ್ಲಿ ತಿಂಗಳಿಗೆ 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗುತ್ತಿತ್ತು. ಕಳೆದ ವರ್ಷ 1.40 ಲಕ್ಷ ಕೋಟಿ ರೂ. ವಸೂಲಾಗಿದೆ. ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದ ಜಿಎಸ್‌ಟಿ ಸಂಗ್ರಹವೂ ಹೆಚ್ಚಾಗಿದೆ. ಹಾಗಾಗಿ ಸರಕಾರ ಸ್ಟೀಲ್‌, ಸಿಮೆಂಟ್‌ ಇತ್ಯಾದಿ ವಸ್ತುಗಳ ದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕರ್ನಾಟಕ ಡೆವಲಪರ್ಸ್ ಅಸೋಸಿಯೇಷನ್‌ ಅಧ್ಯಕ್ಷ ದಯಾನಂದ ರೆಡ್ಡಿ ಹೇಳಿದ್ದಾರೆ.