ಹಬ್ಬದ ಋತುವಿನಲ್ಲಿ ಹೀರೋ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಮಾರಾಟ 100% ಏರಿಕೆ!

ಹೀರೋ ಎಲೆಕ್ಟ್ರಿಕ್‌ ಈ ವರ್ಷದ ಹಬ್ಬದ ಋತುವಿನಲ್ಲಿ 24,000 ವಾಹನಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷಕ್ಕಿಂತ ದುಪ್ಪಟ್ಟು ಹೆಚ್ಚಿನ ದ್ವಿಚಕ್ರ ವಾಹನಗಳನ್ನು ಈ ಬಾರಿ ಮಾರಾಟ ಮಾಡಿದೆ.

ಹಬ್ಬದ ಋತುವಿನಲ್ಲಿ ಹೀರೋ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಮಾರಾಟ 100% ಏರಿಕೆ!
Linkup
ಹೊಸದಿಲ್ಲಿ: ದೇಶದ ಪ್ರಮುಖ ಎಲೆಕ್ಟ್ರಿಕ್‌ ಉತ್ಪಾದನಾ ಸಂಸ್ಥೆ ಈ ವರ್ಷದ ಹಬ್ಬದ ಋತುವಿನಲ್ಲಿ 24,000 ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಂಪನಿಯ ದ್ವಿಚಕ್ರ ವಾಹನಗಳ ಮಾರಾಟ ಶೇ. 100ರಷ್ಟು ಏರಿಕೆಯಾಗಿದೆ. ಕಂಪನಿಯ ಮಾಹಿತಿಗಳ ಪ್ರಕಾರ ಕಳೆದ ವರ್ಷದ ಹಬ್ಬದ ಋತುವಿನಲ್ಲಿ ಹೀರೋ ಎಲೆಕ್ಟ್ರಿಕ್‌ 11,339 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ಆದರೆ ಈ ಬಾರಿ ಅಕ್ಟೋಬರ್‌ 1 ರಿಂದ ನವೆಂಬರ್‌ 15ರ ನಡುವಿನ ಅವಧಿಯಲ್ಲಿ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳ ಮಾರಾಟ ದುಪ್ಪಟ್ಟಿಗಿಂತ ಹೆಚ್ಚು ಏರಿಕೆಯಾಗಿದೆ. ಸರಕಾರದ ಇತ್ತೀಚಿನ ನೀತಿಗಳು ಮತ್ತು ಪೆಟ್ರೋಲ್‌ ದರ ಏರಿಕೆಯಾಗಿರುವುದು ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ ಎಂದು ಹೀರೋ ಎಲೆಕ್ಟ್ರಿಕ್‌ ವಿಶ್ಲೇಷಿಸಿದೆ. "ಈ ಬಾರಿಯ ಹಬ್ಬದ ಋತುವಿನಲ್ಲಿ ಗ್ರಾಹಕರು ಪೆಟ್ರೋಲ್‌ ವಾಹನಗಳ ಬದಲಿಗೆ ಹೀರೋ ಇ ಬೈಕ್‌ಗಳನ್ನು ಆಯ್ಕೆ ಮಾಡಿದ್ದನ್ನು ನಾವು ಸ್ಪಷ್ಟವಾಗಿ ನೋಡಿದ್ದೇವೆ," ಎಂದು ಹೀರೋ ಎಲೆಕ್ಟ್ರಿಕ್‌ ಸಿಇಒ ಮೊಹಿಂದರ್‌ ಗಿಲ್‌ ಹೇಳಿದ್ದಾರೆ. ಜತೆಗೆ ಈ ಬಾರಿ '30 ಡೇಸ್‌, 30 ಬೈಕ್ಸ್‌' ಎಂಬ ಹಬ್ಬದ ಆಫರ್‌ನ್ನೂ ಹೀರೋ ಎಲೆಕ್ಟ್ರಿಕ್‌ ಪರಿಚಯಿಸಿತ್ತು. ಈ ಅವಧಿಯಲ್ಲಿ ಹೀರೋ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಲ್ಲಿ ಒಬ್ಬರು ಅದೃಷ್ಟಶಾಲಿ ಗ್ರಾಹಕರಿಗೆ ವಾಹನವನ್ನು ಉಚಿತವಾಗಿ ಮನೆಗೆ ಕೊಂಡೊಯ್ಯುವ ಆಫರ್‌ನ್ನೂ ನೀಡಿತ್ತು. ಇದೂ ಕೂಡ ಗ್ರಾಹಕರನ್ನು ಸೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀರೋ ಎಲೆಕ್ಟ್ರಿಕ್‌ ದೇಶದ ಅತೀ ಹಳೆಯ ಮತ್ತು ಅತೀ ದೊಡ್ಡ ದ್ವಿಚಕ್ರ ಉತ್ಪಾದನಾ ಕಂಪನಿಯಾಗಿದ್ದು, ಲೂಧಿಯಾನದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಸದ್ಯ ದೇಶದಲ್ಲಿ ಸಂಸ್ಥೆ 700 ಮಾರಾಟ ಮತ್ತು ಸೇವಾ ಕೇಂದ್ರಗಳನ್ನು ಹೊಂದಿದ್ದು, ಈ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಕಳೆದ 14 ವರ್ಷಗಳಲ್ಲಿ ಹೀರೋ ಎಲೆಕ್ಟ್ರಿಕ್‌ ದೇಶದಲ್ಲಿ 4 ಲಕ್ಷ ವಾಹನಗಳನ್ನು ಮಾರಾಟ ಮಾಡಿದೆ.