44 ಕೋಟಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಡೋಸ್‌ಗಳಿಗಾಗಿ ಬೇಡಿಕೆ ಇರಿಸಿದ ಕೇಂದ್ರ

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಘೋಷಣೆ ಮಾಡಿದ ಬೆನ್ನಲ್ಲೇ ಕೇಂದ್ರ ಸರಕಾರ ಒಟ್ಟು 44 ಕೋಟಿ ಡೋಸ್‌ಗಳಷ್ಟು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗೆ ಹೊಸದಾಗಿ ಬೇಡಿಕೆ ಇರಿಸಿದೆ.

44 ಕೋಟಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಡೋಸ್‌ಗಳಿಗಾಗಿ ಬೇಡಿಕೆ ಇರಿಸಿದ ಕೇಂದ್ರ
Linkup
ಹೊಸದಿಲ್ಲಿ: 18 ವರ್ಷ ಮೇಲಿನ ಎಲ್ಲರಿಗೂ ಕೇಂದ್ರ ಸರಕಾರದಿಂದಲೇ ನೀಡುವ ಘೋಷಣೆ ಮಾಡಿದ ಬೆನ್ನಲ್ಲೇ, ಆರೋಗ್ಯ ಸಚಿವಾಲಯವು ದೇಶದ ಲಸಿಕೆ ಉತ್ಪಾದನಾ ಕಂಪೆನಿಗಳಿಂದ ಲಸಿಕೆಗಳಿಗಾಗಿ ಹೊಸ ಬೇಡಿಕೆಗಳನ್ನು ಇರಿಸಿದೆ. ಕೋವಿಶೀಲ್ಡ್‌ ಲಸಿಕೆಯ 25 ಕೋಟಿ ಡೋಸ್‌ಗಳಷ್ಟು ಹಾಗೂ ಕೋವ್ಯಾಕ್ಸಿನ್ ಕಂಪೆನಿಯ 19 ಕೋಟಿ ಡೋಸ್ ಲಸಿಕೆಗಳಿಗೆ ಬೇಡಿಕೆ ಇರಿಸಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಈಗಿನಿಂದ ಡಿಸೆಂಬರ್ 2021ರವರೆಗೆ ಈ ಎರಡೂ ಕಂಪೆನಿಗಳ ಒಟ್ಟು 44 ಕೋಟಿ ಡೋಸ್ ಲಸಿಕೆ ಲಭ್ಯವಾಗಲಿದೆ. ಈ ಎರಡೂ ಲಸಿಕೆಗಳ ಖರೀದಿಗಾಗಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹಾಗೂ ಭಾರತ್ ಬಯೋಟೆಕ್ ಕಂಪೆನಿಗಳಿಗೆ ಶೇ 30ರಷ್ಟು ಮುಂಗಡ ಪಾವತಿಸಲಾಗಿದೆ ಎಂದು ಹೇಳಿದೆ. ಕೆಲವು ದಿನಗಳ ಹಿಂದಷ್ಟೇ ಸರಕಾರವು ಹೈದರಾಬಾದ್ ಮೂಲದ ಬಯಾಲಾಜಿಕಲ್-ಇ ಕಂಪೆನಿಯೊಂದಿಗೆ 30 ಕೋಟಿ ಡೋಸ್ ಲಸಿಕೆಯ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕಾಗಿ 1500 ಕೋಟಿ ರೂ ಮುಂಗಡ ಪಾವತಿ ಮಾಡಿತ್ತು. ಖಾಸಗಿ ಆಸ್ಪತ್ರೆಗಳಿಗೆ ನೀಡಲಾಗುವ ಲಸಿಕೆಗಳ ದರವನ್ನು ಲಸಿಕೆ ಉತ್ಪಾದಕರು ನಿರ್ಧರಿಸಲಿದ್ದಾರೆ. ಖಾಸಗಿ ವಲಯದ ಬೇಡಿಕೆಗಳನ್ನು ರಾಜ್ಯ ಸರಕಾರಗಳು ನೋಡಿಕೊಳ್ಳಲಿವೆ. ಹಣ ಪಾವತಿಸುವ ಸಾಮರ್ಥ್ಯವುಳ್ಳವರು ತಮಗೆ ಆಸಕ್ತಿಯಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಪಡೆದುಕೊಳ್ಳಬಹುದು ಎಂದು ನೀತಿ ಆಯೋಗದ ಸದಸ್ಯ ಡಾ. ವಿಕೆ ಪಾಲ್ ತಿಳಿಸಿದ್ದಾರೆ. 'ನಾವು ಸುಪ್ರೀಂಕೋರ್ಟ್‌ನ ಕಾಳಜಿಯನ್ನು ಗೌರವಿಸುತ್ತೇವೆ. ಆದರೆ ಮೇ 1ರಿಂದಲೂ ವಿಕೇಂದ್ರೀಕೃತ ಮಾದರಿಯ ಕುರಿತು ಪರಾಮರ್ಶೆ ನಡೆಸುತ್ತಿತ್ತು. ವಿಶ್ಲೇಷಣೆಗಳು ಹಾಗೂ ಸಲಹೆಗಳ ಆಧಾರದಲ್ಲಿ ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ' ಎಂದು ಹೇಳಿದ್ದಾರೆ. ಬಯಾಲಾಜಿಕಲ್-ಇ ಕಂಪೆನಿಯ ಲಸಿಕೆ ಫಲಿತಾಂಶಗಳು ಬಹಳ ಭರವಸೆದಾಯಕವಾಗಿವೆ. ಮೇ 15 ಮತ್ತು ಮೇ 21ರಂದು ಪ್ರಧಾನಿ ಜತೆ ನಾವು ಎರಡು ಉನ್ನತ ಮಟ್ಟದ ಸಭೆ ನಡೆಸಿದ್ದೆವು. ಪರ್ಯಾಯ ಮಾದರಿಗಳೊಂದಿಗೆ ಕೆಲಸ ಮಾಡುವಂತೆ ಅವರು ನಮಗೆ ನಿರ್ದೇಶಿಸಿದ್ದರು ಎಂದು ಅವರು ತಿಳಿಸಿದ್ದಾರೆ.