ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಅರುಣ್ ಮಿಶ್ರಾ ಈಗ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನೂತನ ಅಧ್ಯಕ್ಷರಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರುಣ್ ಮಿಶ್ರಾ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ. ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗಿದ್ದರು.

ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಅರುಣ್ ಮಿಶ್ರಾ ಈಗ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ
Linkup
ಹೊಸದಿಲ್ಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಸಿಆರ್) ಅಧ್ಯಕ್ಷರಾಗಿ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬುಧವಾರ ಅಧಿಕಾರ ಸ್ವೀಕರಿಸಿದರು. ಅವರು ಕಳೆದ ಸೆಪ್ಟೆಂಬರ್ 3ರಂದು ನಿವೃತ್ತರಾಗಿದ್ದರು. 1978ರಲ್ಲಿ ವಕೀಲರಾಗಿ ನೋಂದಾಯಿತರಾಗಿದ್ದ ಅರುಣ್ ಮಿಶ್ರಾ, 1998-99ರಲ್ಲಿ ಬಾರ್‌ ಕೌನ್ಸಿಲ್‌ನ ಅತ್ಯಂತ ಕಿರಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಬಳಿಕ ರಾಜಸ್ಥಾನ ಹೈಕೋರ್ಟ್ ಹಾಗೂ ಕಲ್ಕತ್ತಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು. 2014ರ ಜುಲೈ 7ರಂದು ಸುಪ್ರೀಂಕೋರ್ಟ್‌ಗೆ ಪದೋನ್ನತಿ ಪಡೆದಿದ್ದರು. ಎನ್‌ಎಚ್‌ಸಿಆರ್‌ನ ಅಧ್ಯಕ್ಷರಾಗಿ ಅವರು ಐದು ವರ್ಷಗಳವರೆಗೆ ಅಥವಾ ತಮಗೆ 70 ವರ್ಷ ತುಂಬುವವರೆಗೆ ಅಧಿಕಾರದಲ್ಲಿ ಇರಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಜ್ಯಸಭೆಯ ಉಪಾಧ್ಯಕ್ಷರು ಹರಿವಂಶ್, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಳಗೊಂಡ ಉನ್ನತ ಅಧಿಕಾರದ ಸಮಿತಿ ಅಧ್ಯಕ್ಷರ ನೇಮಕ ಮಾಡಿದೆ. ಆದರೆ ಮಿಶ್ರಾ ಅವರ ನೇಮಕಕ್ಕೆ ಖರ್ಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಧ್ಯಕ್ಷ ಅಥವಾ ಸದಸ್ಯ ಸ್ಥಾನಕ್ಕೆ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ವ್ಯಕ್ತಿಯನ್ನು ನೇಮಕ ಮಾಡಬೇಕು ಎಂದು ಖರ್ಗೆ ಮನವಿ ಮಾಡಿದ್ದರು. ನ್ಯಾ. ಅರುಣ್ ಮಿಶ್ರಾ ಅವರು ಲೋಯಾ ಪ್ರಕರಣ, ಪ್ರಶಾಂತ್ ಭೂಷಣ್ ನ್ಯಾಯಾಂಗ ನಿಂದನೆ ಪ್ರಕರಣಗಳಂತಹ ವಿವಾದಾತ್ಮಕ ಪ್ರಕರಣಗಳನ್ನು ನಿಭಾಯಿಸಿದ್ದರು. ಪ್ರಧಾನಿ ಮೋದಿ ಅವರನ್ನು ಬಹುಮುಖ ಪ್ರತಿಭೆ ಎಂದು ಕೊಂಡಾಡಿದ್ದು ವಿವಾದ ಸೃಷ್ಟಿಸಿತ್ತು.