ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆ: ವಿವಾದಾತ್ಮಕ ಆದೇಶವನ್ನು ಹಿಂದಕ್ಕೆ ಪಡೆದ ಪಂಜಾಬ್ ಸರ್ಕಾರ

ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ 19 ಲಸಿಕೆ ಡೋಸ್‌ಗಳನ್ನು ರವಾನಿಸಬೇಕೆಂಬ ವಿವಾದಾತ್ಮಕ ಆದೇಶವು ತೀವ್ರ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ಪಂಜಾಬ್ ಸರ್ಕಾರ ಅದನ್ನು ಹಿಂದಕ್ಕೆ ಪಡೆದುಕೊಂಡಿದೆ.

ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆ: ವಿವಾದಾತ್ಮಕ ಆದೇಶವನ್ನು ಹಿಂದಕ್ಕೆ ಪಡೆದ ಪಂಜಾಬ್ ಸರ್ಕಾರ
Linkup
ಚಂಡೀಗಡ: ಖಾಸಗಿ ಆಸ್ಪತ್ರೆಗಳ ಮೂಲಕ 18-44 ವಯೋಮಾನದ ಜನ ಸಮೂಹಕ್ಕೆ ಒಂದು ಸಮಯದ ಸೀಮಿತ ಲಸಿಕೆಗಳನ್ನು ನೀಡುವ ವಿವಾದಾತ್ಮಕ ಆದೇಶವನ್ನು ಸರ್ಕಾರ ಶುಕ್ರವಾರ ಹಿಂದಕ್ಕೆ ಪಡೆದುಕೊಂಡಿದೆ. ರಾಜ್ಯ ಉಸ್ತುವಾರಿ ವಿಕಾಸ್ ಗರ್ಗ್ ಅವರ ಸಹಿಯಿರುವ ಪತ್ರವನ್ನು ಖಾಸಗಿ ಆಸ್ಪತ್ರೆಗಳಿಗೆ ರವಾನಿಸಿರುವ ಪಂಜಾಬ್ ಸರ್ಕಾರ, ತಮ್ಮ ಬಳಿ ಲಭ್ಯವಿರುವ ಎಲ್ಲ ಲಸಿಕೆ ಡೋಸ್‌ಗಳನ್ನೂ ಹಿಂದಿರುಗಿಸುವಂತೆ ಸೂಚಿಸಿದೆ. 'ಖಾಸಗಿ ಆಸ್ಪತ್ರೆಗಳ ಮುಖಾಂತರ 18-44 ವಮೋಮಿತಿಯ ಜನರಿಗೆ ಒಂದು ಸಮಯದ ಸೀಮಿತ ಲಸಿಕೆ ಒದಗಿಸುವ ಆದೇಶವನ್ನು ಹಿಂಪಡೆಯಲಾಗಿದೆ. ತಮ್ಮ ಬಳಿ ಲಭ್ಯವಿರುವ ಎಲ್ಲ ಲಸಿಕೆ ಡೋಸ್‌ಗಳನ್ನೂ ಮರಳಿಸಬೇಕು' ಎಂದು ಆದೇಶ ತಿಳಿಸಿದೆ. 'ಜತೆಗೆ, ಖಾಸಗಿ ಆಸ್ಪತ್ರೆಗಳು ತಮ್ಮ ಬಳಿ ಲಭ್ಯವಿರುವ ಎಲ್ಲ ಲಸಿಕೆ ಡೋಸ್‌ಗಳನ್ನೂ ವಿಳಂಬವಿಲ್ಲದೆ ಹಿಂದಿರುಗಿಸಬೇಕು ಎಂದು ನಿರ್ಧರಿಸಲಾಗಿದೆ. ಉತ್ಪಾದಕರಿಂದ ಲಸಿಕೆಗಳು ಸರಬರಾಜಾದ ಕೂಡಲೇ, ಈವರೆಗೂ ಅವರು ಉಪಯೋಗಿಸಿದ ಡೋಸ್‌ಗಳನ್ನು ಕೂಡ ಮರಳಿಸಬೇಕು' ಎಂದು ಆದೇಶಿಸಲಾಗಿದೆ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಕೋವಿಡ್ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಭಾರಿ ಬೆಲೆಗೆ 'ತಿರುಗಿಸುತ್ತಿದೆ' ಎಂದು ಶಿರೋಮಣಿ ಅಕಾಲಿ ದಳ ಆರೋಪಿಸಿತ್ತು. ರಾಜ್ಯದಲ್ಲಿ ಕೋವಿಡ್ ಲಸಿಕೆ ಡೋಸ್‌ಗಳು ಲಭ್ಯವಾಗುತ್ತಿಲ್ಲ. ಆದರೆ ಜನಸಾಮಾನ್ಯರಿಗೆ ಉಚಿತವಾಗಿ ನೀಡಬೇಕಾದ ಲಸಿಕೆಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಅಕಾಲಿದಳ ಆರೋಪಿಸಿತ್ತು. ಲಸಿಕೆ ನಿರ್ವಹಣೆ ವಿಚಾರದಲ್ಲಿ ತಮಗೆ ಯಾವ ಅಧಿಕಾರವೂ ಇಲ್ಲ ಎಂದು ಪಂಜಾಬ್ ಆರೋಗ್ಯ ಸಚಿವ ಬಿಎಸ್ ಸಿಧು ಹೇಳಿದ್ದರು. 'ನಾನು ಚಿಕಿತ್ಸೆ, ಪರೀಕ್ಷೆ, ಮಾದರಿ ಸಂಗ್ರಹ ಮತ್ತು ಲಸಿಕೆ ಶಿಬಿರಗಳ ಹೊಣೆಗಳನ್ನು ನೋಡಿಕೊಳ್ಳುತ್ತಿದ್ದೇನಷ್ಟೇ. ಲಸಿಕೆ ನಿರ್ವಹಣೆಯು ಮಖ್ಯ ಕಾರ್ಯದರ್ಶಿ ಹಾಗೂ ಇತರೆ ಅಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ. ನಾವು ಖಂಡಿತಾ ಈ ಬಗ್ಗೆ ತನಿಖೆ ನಡೆಸುತ್ತೇವೆ. ನಾನೇ ಖುದ್ದು ತನಿಖೆ ಮಾಡಬಹುದು' ಎಂದು ಅವರು ತಿಳಿಸಿದ್ದರು.