ದಿಲ್ಲಿಯಲ್ಲಿ 'ಸೆಂಟ್ರಲ್ ವಿಸ್ತಾ'ಗೆ ಕಾಂಗ್ರೆಸ್ ವಿರೋಧ: ರಾಜಸ್ಥಾನದಲ್ಲಿ ಶಾಸಕರಿಗೆ ಐಶಾರಾಮಿ ಫ್ಲ್ಯಾಟ್..!

ಜೈಪುರದ ಜ್ಯೋತಿ ನಗರದಲ್ಲಿ ಶಾಸಕರಿಗಾಗಿ 160 ವೈಭವೋಪೇತ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಕೊರೊನಾ 2ನೇ ಅಲೆ ಅಬ್ಬರಿಸುತ್ತಿರುವ ವೇಳೆಯಲ್ಲೇ ಮೇ 20ರಂದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ದಿಲ್ಲಿಯಲ್ಲಿ 'ಸೆಂಟ್ರಲ್ ವಿಸ್ತಾ'ಗೆ ಕಾಂಗ್ರೆಸ್ ವಿರೋಧ: ರಾಜಸ್ಥಾನದಲ್ಲಿ ಶಾಸಕರಿಗೆ ಐಶಾರಾಮಿ ಫ್ಲ್ಯಾಟ್..!
Linkup
ಜೈಪುರ (ರಾಜಸ್ಥಾನ): ಕೊರೊನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದಾಗಿ ದೇಶದ ಜನರು ಸಂಕಷ್ಟದಲ್ಲಿ ಇರುವ ಸನ್ನಿವೇಶದಲ್ಲಿ ನೂತನ ಸಂಸತ್‌ ಭವನ ಹಾಗೂ ಪ್ರಧಾನಿ ನಿವಾಸದ ಕಾಮಗಾರಿ ಬೇಕಾ ಎಂದು ಪಕ್ಷ ಪ್ರಶ್ನಿಸುತ್ತಿದೆ. ಆದ್ರೆ, ಇದೇ ಸಮಯದಲ್ಲಿ ರಾಜಸ್ಥಾನ ರಾಜ್ಯದ ಕಾಂಗ್ರೆಸ್ ಸರ್ಕಾರ, ತನ್ನ ಶಾಸಕರಿಗಾಗಿ ಭವ್ಯವಾದ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿದೆ..! ಜೈಪುರದ ಜ್ಯೋತಿ ನಗರದಲ್ಲಿ ಶಾಸಕರಿಗಾಗಿ 160 ವೈಭವೋಪೇತ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಕೊರೊನಾ 2ನೇ ಅಲೆ ಅಬ್ಬರಿಸುತ್ತಿರುವ ವೇಳೆಯಲ್ಲೇ ಮೇ 20ರಂದು ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ರಾಜಸ್ಥಾನ ಗೃಹ ನಿರ್ಮಾಣ ಮಂಡಳಿ (ಆರ್‌ಎಚ್‌ಬಿ) ಈ ನಿರ್ಮಾಣ ಕಾಮಗಾರಿಯ ನೇತೃತ್ವ ವಹಿಸಿದೆ. ಬೃಹತ್ ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲಾ ಶಾಸಕರಿಗೂ ಪ್ರತ್ಯೇಕ ಫ್ಲ್ಯಾಟ್‌ ಇರಲಿದೆ. ರಾಜಸ್ಥಾನದ ವಿಧಾನಸಭೆಯಲ್ಲಿ ಒಟ್ಟು 200 ಶಾಸಕರು ಇದ್ದಾರೆ. ಆದ್ರೆ, ಫ್ಲ್ಯಾಟ್‌ಗಳು ಮಾತ್ರ 160 ನಿರ್ಮಾಣ ಆಗುತ್ತಿವೆ. ಪ್ರತಿ ಫ್ಲ್ಯಾಟ್‌ 3,200 ಚದರ ಅಡಿ ಇರಲಿದೆ. ಪ್ರತಿ ಫ್ಲ್ಯಾಟ್‌ನಲ್ಲೂ 4 ಬೆಡ್‌ ರೂಂಗಳು ಇರಲಿವೆ ಎಂದು ರಾಜಸ್ಥಾನ ಗೃಹ ನಿರ್ಮಾಣ ಮಂಡಳಿ ತಿಳಿಸಿದೆ. ಮೂಲಗಳ ಪ್ರಕಾರ, ಈ ಕಾಮಗಾರಿಗೆ 266 ಕೋಟಿ ರೂ. ವೆಚ್ಚವಾಗಲಿದೆ. ರಾಜಸ್ಥಾನ ವಿಧಾನಸಭೆ ಎದುರಲ್ಲೇ ಈ ಅಪಾರ್ಟ್‌ಮೆಂಟ್ ಇರಲಿದೆ. ಪ್ರತಿ ಫ್ಲ್ಯಾಟ್‌ಗೂ ಪ್ರತ್ಯೇಕ ಪಾರ್ಕಿಂಗ್ ಸೌಲಭ್ಯವೂ ಇದೆ. ಆರಂಭದಲ್ಲಿ ಜೈಪುರ ಅಭಿವೃದ್ಧಿ ಪ್ರಾಧಿಕಾರ 176 ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಪ್ರಸ್ತಾಪ ಮಂಡಿಸಿತ್ತು. ಕೊನೆಗೆ ರಾಜಸ್ಥಾನ ಗೃಹ ನಿರ್ಮಾಣ ಮಂಡಳಿಯು ಈ ಸಂಖ್ಯೆಯನ್ನು 160ಕ್ಕೆ ಇಳಿಸಿತು ಎಂದು ತಿಳಿದುಬಂದಿದೆ. 30 ತಿಂಗಳ ಒಳಗೆ ಕಾಮಗಾರಿ ಮುಗಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷವು ಕಾನೂನಿನ ಅನ್ವಯವೇ ಕಾಮಗಾರಿ ನಡೆಯುತ್ತಿದೆ ಎಂದು ಸ್ಪಷ್ಟನೆ ನೀಡಿದೆ.