ಲಸಿಕೆ ಕಡ್ಡಾಯದ ಬಿಬಿಎಂಪಿ ಆದೇಶ ಪ್ರಶ್ನಿಸಿದ್ದಕ್ಕೆ ಹೈಕೋರ್ಟ್‌ ಆಕ್ಷೇಪ: ಅರ್ಜಿ ವಾಪಸ್‌

'ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಕೇವಲ ಪ್ರಚಾರ ಗಳಿಸುವ ಉದ್ದೇಶದಿಂದ ಸಲ್ಲಿಸಿರುವ ಅರ್ಜಿ ಎಂದೆನಿಸುತ್ತದೆ. ಅರ್ಜಿ ಹಿಂಪಡೆಯುವ ಅವಕಾಶ ನೀಡಲಿದೆ' - ಅರ್ಜಿದಾರನಿಗೆ ಹೈಕೋರ್ಟ್ ಚಾಟಿ

ಲಸಿಕೆ ಕಡ್ಡಾಯದ ಬಿಬಿಎಂಪಿ ಆದೇಶ ಪ್ರಶ್ನಿಸಿದ್ದಕ್ಕೆ ಹೈಕೋರ್ಟ್‌ ಆಕ್ಷೇಪ: ಅರ್ಜಿ ವಾಪಸ್‌
Linkup
: ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿಗೆ ಕಡ್ಡಾಯಗೊಳಿಸಿ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ, ಅರ್ಜಿದಾರರಿಗೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಅರ್ಜಿದಾರರು ಪಿಐಎಲ್‌ ಹಿಂಪಡೆದರು. ವಕೀಲ ಸೈಯದ್‌ ಶುಜತ್‌ ಮೆಹ್ದಿ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು. 'ಕೋವಿಡ್‌ ಲಸಿಕೆ ವಿರುದ್ಧ ಅರ್ಜಿ ಸಲ್ಲಿಸಿರುವ ನೀವು ಸಾರ್ವಜನಿಕರ ಹಾದಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ. ಭಾರಿ ದಂಡ ವಿಧಿಸಿ ಅರ್ಜಿ ವಜಾ ಮಾಡಬೇಕಾಗುತ್ತದೆ' ಎಂದು ನ್ಯಾಯಪೀಠ ಎಚ್ಚರಿಕೆ ನೀಡಿತು. ಈ ವೇಳೆ ಉತ್ತರಿಸಿದ ಅರ್ಜಿದಾರ ಸೈಯದ್‌ ಶುಜತ್‌ ಮೆಹ್ದಿ, 'ಖುದ್ದು ನಾನೂ ಸಹ ಸ್ವಪ್ರೇರಣೆಯಿಂದ ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದಿದ್ದೇನೆ. ಲಸಿಕೆಯ ವಿರುದ್ಧ ಅಥವಾ ಲಸಿಕೆಯ ಸಾಮರ್ಥ್ಯ ಪ್ರಶ್ನಿಸಿ ಅರ್ಜಿ ಸಲ್ಲಿಸಿಲ್ಲ. ಆದರೆ, ಲಸಿಕೆ ನೀಡುವ ವಿಚಾರದಲ್ಲಿ ಪಾಲಿಕೆ ಅನುಸರಿಸುತ್ತಿರುವ ಕಾರ್ಯ ವಿಧಾನವನ್ನಷ್ಟೇ ಪ್ರಶ್ನಿಸಲಾಗಿದೆ. ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಕಡ್ಡಾಯಗೊಳಿಸಿದೆ. ಲಸಿಕಾ ಅಭಿಯಾನವೇ ಬೇರೆ, ಉದ್ಯೋಗವೇ ಬೇರೆ. ಆದರೆ, ಪಾಲಿಕೆ ಇವೆರಡಕ್ಕೂ ಸಂಪರ್ಕ ಕಲ್ಪಿಸುತ್ತಿದೆ. ಇದು ಜೀವಿಸುವ ಹಕ್ಕಿನ ಉಲ್ಲಂಘನೆಯಾಗಿದೆ' ಎಂದರು. ಅದಕ್ಕೆ ನ್ಯಾಯಪೀಠ, 'ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದಲೇ ಲಸಿಕೆ ನೀಡಲಾಗುತ್ತಿದೆ. ನೀವೂ ಈಗಾಗಲೇ ಲಸಿಕೆ ಪಡೆದಿದ್ದೀರಿ. ಹಾಗಾಗಿ ಆಕ್ಷೇಪವೆತ್ತಲು ಯಾವುದೇ ಹಕ್ಕಿಲ್ಲ. ನಿಜಕ್ಕೂ ಇದರಿಂದ ಯಾರಿಗೆ ತೊಂದರೆಯಾಗುತ್ತಿದೆಯೋ ಅವರು ಮುಂದೆ ಬಂದು, ನಮಗೆ ವ್ಯಾಕ್ಸಿನ್‌ ಬೇಡ ಎಂದು ಹೇಳಲಿ. ಮತ್ತೊಬ್ಬರ ವಿಚಾರದಲ್ಲಿ ಆಕ್ಷೇಪವೆತ್ತಲು ನೀವ್ಯಾರು' ಎಂದು ಪ್ರಶ್ನಿಸಿತು. 'ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಕೇವಲ ಪ್ರಚಾರ ಗಳಿಸುವ ಉದ್ದೇಶದಿಂದ ಸಲ್ಲಿಸಿರುವ ಅರ್ಜಿ ಎಂದೆನಿಸುತ್ತದೆ. ಅರ್ಜಿ ಹಿಂಪಡೆಯುವ ಅವಕಾಶ ನೀಡಲಿದೆ. ಇಲ್ಲವಾದರೆ, ಭಾರಿ ದಂಡ ವಿಧಿಸಿ ಅರ್ಜಿ ವಜಾಗೊಳಿಸಲಾಗುತ್ತದೆ' ಎಂದು ನ್ಯಾಯಪೀಠ ಎಚ್ಚರಿಸಿತು. ಆಗ ಅರ್ಜಿದಾರರು ಪಿಐಎಲ್‌ ಹಿಂಪಡೆಯುವುದಾಗಿ ತಿಳಿಸಿದರು.