ಬದುಕಲ್ಲಿ ಅಂಧಕಾರ ತರದಿರಲಿ ಪಟಾಕಿ; ತುರ್ತು ಚಿಕಿತ್ಸೆಗೆ ಮಿಂಟೋದಲ್ಲಿ ನಡೆದಿದೆ ಸಿದ್ಧತೆ!

ಹಸಿರು ಪಟಾಕಿ ಮಾಲಿನ್ಯ ಕಡಿಮೆ ಮಾಡುತ್ತದೆಯೇ ಹೊರತು ಅಪಾಯವನ್ನು ಕಡಿಮೆ ಮಾಡದು. ಹಾಗಾಗಿ, ಪಟಾಕಿ ಹೊಡೆಯುವಾಗ ಎಚ್ಚರಿಕೆ ಬಹಳ ಮುಖ್ಯ. ಪಟಾಕಿ ಹೊಡೆಯದೇ ದೀಪಾವಳಿ ಆಚರಿಸುವುದು ಒಳ್ಳೆಯದು. ಒಂದು ವೇಳೆ ಪಟಾಕಿ ಸಿಡಿಸಲೇ ಬೇಕೆನ್ನುವವರು ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳುವುದು ಮರೆಯಬಾರದು.

ಬದುಕಲ್ಲಿ ಅಂಧಕಾರ ತರದಿರಲಿ ಪಟಾಕಿ; ತುರ್ತು ಚಿಕಿತ್ಸೆಗೆ ಮಿಂಟೋದಲ್ಲಿ ನಡೆದಿದೆ ಸಿದ್ಧತೆ!
Linkup
ಬೆಂಗಳೂರು: ಕೇವಲ ದೀಪಗಳ ಹಬ್ಬವಲ್ಲ, ಸಿಡಿಸಿ ಸಂಭ್ರಮಿಸುವ ಹಬ್ಬ ಕೂಡ. ಪಟಾಕಿ, ಎಷ್ಟೋ ಜನರ ಬದುಕನ್ನೆ ಕತ್ತಲೆಯಾಗಿಸಿದೆ. ಪಟಾಕಿ ಸಿಡಿತದಿಂದ ಕೈ ಕಾಲಿಗೆ ಗಾಯವಾಗುವ ಪ್ರಕರಣಗಳಷ್ಟೇ ಅಲ್ಲ, ಶಾಶ್ವತವಾಗಿ ಕಣ್ಣು ಕಳೆದುಕೊಂಡವರು ಇದ್ದಾರೆ. ಪಟಾಕಿ ಹೊಡೆಯದೇ ದೀಪಾವಳಿ ಆಚರಿಸುವುದು ಒಳ್ಳೆಯದು. ಒಂದು ವೇಳೆ ಪಟಾಕಿ ಸಿಡಿಸಲೇ ಬೇಕೆನ್ನುವವರು ಅಗತ್ಯ ಮುಂಜಾಗ್ರತೆ ತೆಗೆದುಕೊಳ್ಳುವುದು ಮರೆಯಬಾರದು. ಪಟಾಕಿಯಿಂದ ಹೆಚ್ಚು ಹಾನಿಯಾಗುವುದು ಕಣ್ಣಿಗೆ. ಪ್ರತಿ ವರ್ಷ ನೂರಾರು ಮಕ್ಕಳು ದೀಪಾವಳಿ ಸಂದರ್ಭದಲ್ಲಿ ಕಣ್ಣಿಗೆ ಹಾನಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಾರೆ. ಬೆಂಗಳೂರು ನಗರದಲ್ಲಿ ಈ ಸಂಖ್ಯೆ ತುಸು ಹೆಚ್ಚು. ಈ ಹಿನ್ನೆಲೆಯಲ್ಲಿ ನಗರದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಗಳು ಮಕ್ಕಳ ಚಿಕಿತ್ಸೆಗೆ ಸಕಲ ರೀತಿಯಲ್ಲಿ ಸಜ್ಜಾಗಿವೆ. ''ಪ್ರತಿ ವರ್ಷ ದೀಪಾವಳಿಯಲ್ಲಿ ಸರಾಸರಿ 50 ರಿಂದ 60 ಮಂದಿ ಚಿಕಿತ್ಸೆಗಾಗಿ ನಗರದ ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಾಗುತ್ತಾರೆ. ಆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತಹ ಗಾಯಾಳುಗಳಿಗೆ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಆಸ್ಪತ್ರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಪಟಾಕಿಯಿಂದ ಸಂಭವಿಸುವ ಗಾಯಗಳಿಗೆ 24/7 ನೀಡಲಾಗುತ್ತದೆ'' ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ.ಸುಜಾತ ರಾಥೋಡ್‌ ತಿಳಿಸಿದಧಿರು. ''ಆಸ್ಪತ್ರೆಯಲ್ಲಿ ಗಾಯಾಳುಗಳಿಗಾಗಿ ಹೆಚ್ಚುವರಿ ಕೊಠಡಿ, ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿ ಮತ್ತು ಚಿಕಿತ್ಸಾ ವೈದ್ಯರ ತಂಡ ರಚಿಸಿದ್ದು, ಮೂರು ಪಾಳಿಗಳಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಇದರೊಂದಿಗೆ ಗಾಯಾಳುಗಳಿಗೆ ಅಗತ್ಯ ಔಷಧಿಗಳ ದಾಸ್ತಾನು ಮಾಡಲಾಗಿದೆ'' ಎಂದು ಅವರು ಹೇಳಿದರು. ''ಪಟಾಕಿ ಅನಾಹುತದಲ್ಲಿ ಶೇ.40ರಷ್ಟು ಗಾಯಾಳುಗಳು 14 ವರ್ಷದ ಒಳಗಿನವರು. ಹಾಗಾಗಿ, ಮಕ್ಕಳು ಪಟಾಕಿ ಹಚ್ಚುವಾಗುವ ಹೆಚ್ಚು ಎಚ್ಚರಿಕೆಯಿಂದ ಇರಬೇಕು'' ಎಂದು ಅವರು ಸಲಹೆ ಮಾಡಿದರು. ''ಕೋವಿಡ್‌ ಸಮಯದಲ್ಲಿ ಪಟಾಕಿ ಅನಾಹುತಗಳು ತುಸು ತಗ್ಗಿವೆ. 2019ರಲ್ಲಿ 48 ಜನರು ಆಸ್ಪತ್ರೆಗೆ ದಾಖಲಾಗಿದ್ದರೆ, 2020ರಲ್ಲಿ 23 ಜನರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವರ್ಷ ಎಲ್ಲವೂ ಸಹಜ ಸ್ಥಿತಿಯಲ್ಲಿರುವ ಹಿನ್ನೆಯಲ್ಲಿ ಪಟಾಕಿ ಅನಾಹುತ ಹೆಚ್ಚಾಗುವ ಸಾಧ್ಯತೆ ಇದೆ'' ಎನ್ನುತ್ತಾರೆ ಡಾ. ಸುಜಾತ. ಏನೇನು ಮುನ್ನೆಚ್ಚರಿಕೆ ಅಗತ್ಯ
  • ಐಎಸ್‌ಐ ಗುರುತಿರುವ ಹಸಿರು ಪಟಾಕಿಗಳನ್ನು ಮಾತ್ರ ಖರೀದಿಸಿ.
  • ಪಟಾಕಿ ಹೊಡೆಯುವಾಗ ಉದ್ದನೆಯ ಕಡ್ಡಿ ಬಳಸಿ.
  • ಪಟಾಕಿ ಬಾಕ್ಸ್‌ ಮೇಲೆ ಇರುವ ಎಚ್ಚರಿಕೆಗಳನ್ನು ಓದಿಕೊಳ್ಳಿ.
  • ಮಕ್ಕಳು ಪಟಾಕಿ ಹಚ್ಚುವಾಗ ದೊಡ್ಡವರು ಮಾರ್ಗದರ್ಶನ ಮಾಡಬೇಕು.
  • ಸಿಂಥಟಿಕ್‌ ಅಥವಾ ಬೇಗನೆ ಸುಡುವ ಸಡಿಲ ಬಟ್ಟೆ ಧರಿಸಿ ಪಟಾಕಿಗಳನ್ನು ಹಚ್ಚಬೇಡಿ. ಕಾಟನ್‌ ಬಟ್ಟೆ ಬಳಸುವುದು ಒಳ್ಳೆಯದು.
  • ಪಕ್ಕದಲ್ಲಿ ಒಂದು ಬಕೆಟ್‌ ನೀರನ್ನು ಇಟ್ಟುಕೊಂಡಿರಿ.
  • ಕೈಯಲ್ಲಿ, ಮುಚ್ಚಿದ ಪೆಟ್ಟಿಗೆಗಳು ಅಥವಾ ಬಾಟಲಿಗಳ ಒಳಗೆ ಪಟಾಕಿಗಳನ್ನು ಸುಡಬೇಡಿ.
  • ಅರೆಬರೆ ಸುಟ್ಟ ಪಟಾಕಿಯನ್ನು ಕೈಯಲ್ಲಾಗಲಿ, ಕಾಲಲ್ಲಾಗಲಿ ನಂದಿಸುವ ಪ್ರಯತ್ನ ಮಾಡಬೇಡಿ.
  • ಗುಡಿಸಲುಗಳು ಮತ್ತು ಮನೆಗಳಿಂದ ದೂರದಲ್ಲಿರುವ ತೆರೆದ ಸ್ಥಳಗಳಲ್ಲಿ ಮಾತ್ರ ಹಗುರವಾದ 'ರಾಕೆಟ್‌' ಪಟಾಕಿಗಳನ್ನು ಹಚ್ಚಿ.
  • ಜನದಟ್ಟಣೆಯ ಪ್ರದೇಶ, ಪಟಾಕಿ ಅಂಗಡಿಗಳ ಮುಂದೆ, ಆಸ್ಪತ್ರೆಗಳ ಬಳಿ, ವೃದ್ಧಾಶ್ರಮಗಳು, ಪೆಟ್ರೋಲ್‌ ಬಂಕ್‌ ಬಳಿ ಪಟಾಕಿ ಸಿಡಿಸಬೇಡಿ.
ಪ್ರಥಮ ಚಿಕಿತ್ಸೆ
  • ಕಣ್ಣಿಗೆ ಗಾಯವಾದಾಗ ಕಣ್ಣುಗಳನ್ನು ಉಜ್ಜಿಕೊಳ್ಳಬೇಡಿ.
  • ಪಟಾಕಿಯ ದೊಡ್ಡ ಕಣವೇನಾದರೂ ಒಳಗೆ ಸಿಕ್ಕಿಹಾಕಿಕೊಂಡಿದ್ದರೆ ಬಲವಂತವಾಗಿ ಎಳೆದು ತೆಗೆಯಲು ಹೋಗಬೇಡಿ.
  • ಕಣ್ಣುಗಳನ್ನು ಮುಚ್ಚಿಸಿ ಕೂಡಲೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ.
  • ಗಾಯದ ಜಾಗವನ್ನು ಸ್ವಚ್ಛಗೊಳಿಸಿ ನೀರಿನಲ್ಲಿ ಮುಳುಗಿಸಿ. ಆದರೆ ಐಸ್‌ ನೀರು ಬಳಸಬೇಡಿ, ಗಾಯದ ಸ್ಥಳ ಒಣಗಲು ಬಿಡಿ. ಶುದ್ಧವಾದ ಬಟ್ಟೆಯಿಂದ ಗಾಯ ಮುಚ್ಚಿ.
ಸಹಾಯವಾಣಿ ಪಟಾಕಿ ಅನಾಹುತದಿಂದ ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ಒದಗಿಸುವ ನಿಟ್ಟಿನಲ್ಲಿ ಮಿಂಟೋ ಆಸ್ಪತ್ರೆ ಸಹಾಯವಾಣಿ ಸ್ಥಾಪಿಸಿದೆ. 9480832430 ಹಸಿರು ಪಟಾಕಿ ಮಾಲಿನ್ಯ ಕಡಿಮೆ ಮಾಡುತ್ತದೆಯೇ ಹೊರತು ಅಪಾಯವನ್ನು ಕಡಿಮೆ ಮಾಡದು. ಹಾಗಾಗಿ, ಪಟಾಕಿ ಹೊಡೆಯುವಾಗ ಎಚ್ಚರಿಕೆ ಬಹಳ ಮುಖ್ಯ. ಮಕ್ಕಳು ಪಟಾಕಿ ಹೊಡೆಯುವಾಗ ಹಿರಿಯರೊಬ್ಬರು ಹತ್ತಿರ ಇದ್ದು ಮಾರ್ಗದರ್ಶನ ಮಾಡಬೇಕು. ಪಟಾಕಿ ಹೊಡೆಯಲೇಬೇಕು ಎನ್ನುವವರು ದೇಹಕ್ಕೆ ಅಪಾಯವಿಲ್ಲದ ಪಟಾಕಿ ಹೊಡೆಯುವುದು ಒಳಿತು. ಡಾ.ಸುಜಾತ ರಾಥೋಡ್‌, ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ನಗರದಲ್ಲಿಈಗಿನ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯವನ್ನೇ ತಡೆದುಕೊಳ್ಳಲಾಗುತ್ತಿಲ್ಲ. ಹಾಗಾಗಿ ಪಟಾಕಿ ಹೊಡೆಯದೇ ದೀಪಾವಳಿ ಆಚರಿಸುವುದು ಒಳ್ಳೆಯದು. ಒಂದು ವೇಳೆ ಪಟಾಕಿ ಹೊಡೆಯಲೇಬೇಕೆಂದರೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿ. ಪಟಾಕಿಯಿಂದ ಕಣ್ಣಿಗೆ ಚಿಕ್ಕ ಗಾಯವಾದರೂ ತಕ್ಷಣ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೋರಿಸುವುದು ಒಳ್ಳೆಯದು. ತಡವಾದಷ್ಟೂ ಅಪಾಯ ಹೆಚ್ಚು . ಡಾ.ಭುಜಂಗ ಶೆಟ್ಟಿ, ಮುಖ್ಯಸ್ಥರು, ನಾರಾಯಣ ನೇತ್ರಾಲಯ