ಬೆಂಗಳೂರು ಬೆಂಕಿ ಅವಘಡ : ಸಿಲಿಂಡರ್‌ ಬ್ಲಾಸ್ಟ್‌ ಆಗಿಲ್ಲ, ದೇವರ ಮನೆ ದೀಪದಿಂದ ಬೆಂಕಿ?

ಅನಾಹುತ ನಡೆದ ಫ್ಲ್ಯಾಟ್‌ನಲ್ಲಿ ಎರಡು ಸಿಲಿಂಡರ್‌ ಇತ್ತು. ಒಂದು ಸಿಲಿಂಡರ್‌ ಸಂಪೂರ್ಣ ಭರ್ತಿಯಾಗಿದ್ದರೆ, ಮತ್ತೊಂದರಲ್ಲಿ ಸುಮಾರು 4 ಕೆ.ಜಿ.ಯಷ್ಟು ಎಲ್‌ಪಿಜಿ ಇತ್ತು. ಸಿಲಿಂಡರ್‌ ಬ್ಲಾಸ್ಟ್‌ ಆಗಿರುವುದು ಕಂಡು ಬಂದಿಲ್ಲ. ಸಿಲಿಂಡರ್‌ನ ರೆಗ್ಯುಲೇಟರ್‌ ವಾಲ್‌ಗೆ ಹಾನಿಯಾಗಿರುವುದು ಕಂಡು ಬಂದಿದೆ. ಇದರಿಂದ ಗ್ಯಾಸ್‌ ಸೋರಿಕೆ ಆಗಿ, ಬೆಂಕಿಯ ತೀವ್ರತೆ ಹೆಚ್ಚಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಬೆಂಗಳೂರು ಬೆಂಕಿ ಅವಘಡ : ಸಿಲಿಂಡರ್‌ ಬ್ಲಾಸ್ಟ್‌ ಆಗಿಲ್ಲ, ದೇವರ ಮನೆ ದೀಪದಿಂದ ಬೆಂಕಿ?
Linkup
ದಕ್ಷಿಣ: ನಗರದ ದೇವರಚಿಕ್ಕನಹಳ್ಳಿಯ 'ಆಶ್ರಿತ್‌ ಆಸ್ಪೈರ್‌' ಅಪಾರ್ಟ್‌ಮೆಂಟ್‌ನಲ್ಲಿ ತಾಯಿ, ಮಗಳನ್ನು ಬಲಿಪಡೆದ ಅಗ್ನಿ ಅನಾಹುತಕ್ಕೆ ದೇವರ ಮನೆಯಲ್ಲಿ ಹಚ್ಚಿದ ದೀಪದಿಂದ ಬೆಂಕಿ ಹೊತ್ತಿಕೊಂಡು ಮನೆಯ ಒಳಾಂಗಣ ಅಲಂಕಾರಕ್ಕೆ ಬಳಸಿದ್ದ ಪ್ಲೈವುಡ್‌ ಶೀಟ್‌ಗಳಿಗೆ ತಗುಲಿ ಬಹುಬೇಗನೆ ವ್ಯಾಪಿಸಿದ್ದೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಅನಾಹುತ ನಡೆದಿರುವ ಫ್ಲ್ಯಾಟ್‌ ನಂಬರ್‌ 210 ಆರು ತಿಂಗಳಿನಿಂದ ಖಾಲಿ ಇತ್ತು. ಭಾಗ್ಯರೇಖಾ ಅವರು ಅಮೆರಿಕದಲ್ಲಿದ್ದ ಪುತ್ರಿ ಮನೆಗೆ ತೆರಳಿ ಅನಾಹುತ ಸಂಭವಿಸುವ ಹಿಂದಿನ ದಿನವಷ್ಟೇ ಬೆಂಗಳೂರಿಗೆ ವಾಪಸ್‌ ಆಗಿದ್ದರು. ಮಗಳು ಪ್ರೀತಿ ಹಾಗೂ ಅಳಿಯ ಸಂದೀಪ್‌ಗೆ ಸೇರಿದ ಫ್ಲ್ಯಾಟ್‌ ನಂ.211ರಲ್ಲಿ ಮಂಗಳವಾರ ಮಧ್ಯಾಹ್ನ ಊಟ ಮುಗಿಸಿ ಭಾಗ್ಯರೇಖಾ, ತಾಯಿ ಲಕ್ಷ್ಮೇದೇವಿ ಜತೆ 210 ನಂಬರಿನ ಫ್ಲ್ಯಾಟ್‌ಗೆ ಬಂದಿದ್ದರು. ಮನೆಯೊಳಗೆ ಬಂದವರೇ ದೇವರಿಗೆ ದೀಪ ಹಚ್ಚಿಟ್ಟು ನಿದ್ದೆ ಮಾಡಿರಬಹುದು. ದೇವರ ದೀಪ ಉರುಳಿದ್ದರಿಂದ ಅಥವಾ ಇತರೆ ವಸ್ತುಗಳಿಗೆ ತಗಲಿ ಪ್ಲೈವುಡ್‌ಗೆ ಬೆಂಕಿ ಹೊತ್ತಿಕೊಂಡಿರಬಹುದು. ಬೆಂಕಿ ಆವರಿಸಿಕೊಂಡ ನಂತರ ಎಚ್ಚರವಾಗಿರಬಹುದು. ಅಷ್ಟು ಹೊತ್ತಿಗಾಗಲೇ ಪರಿಸ್ಥಿತಿ ಕೈಮೀರಿರುವ ಸಾಧ್ಯತೆ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಹಾಲ್‌ನಲ್ಲಿ ದೇವರ ದೀಪಗಳು ಕಂಡು ಬಂದಿವೆ. ಬೆಂಕಿ ಬಿದ್ದಿರುವುದು ಗಮನಕ್ಕೆ ಬಂದ ತಕ್ಷಣ ಭಾಗ್ಯರೇಖಾ, ಅಳಿಯ ಸಂದೀಪ್‌ಗೆ ಕರೆ ಮಾಡಿದ್ದಾರೆ. ಹಾಲ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದಿದ್ದರು. ತಕ್ಷಣ ಸಂದೀಪ್‌ ಹಾಗೂ ಭಾಗ್ಯರೇಖಾ ಅವರ ಪತಿ ಭೀಮಸೇನರಾವ್‌ ನೆರವಿಗೆ ಧಾವಿಸಲು ಮುಂದಾಗಿದ್ದಾರೆ. ಅಷ್ಟರಲ್ಲಾಗಲೇ ಬೆಂಕಿಯ ಆರ್ಭಟ ಹಿಡಿತಕ್ಕೆ ಬಾರದಂತೆ ಜೋರಾಗಿತ್ತು. ರಕ್ಷಣೆ ಮಾಡಲು ಬಾಗಿಲು ತೆರೆದಾಗ ಬೆಂಕಿ ಅಪ್ಪಳಿಸುವಂತೆ ಹೊರಚಾಚುತ್ತಿತ್ತು. ನಮಗೆ ಮನೆಯೊಳಗೆ ಹೋಗಲು ಸಾಧ್ಯವಾಗದಷ್ಟು ಬೆಂಕಿಯ ಕೆನ್ನಾಲಿಗೆ ನುಗ್ಗಿ ಬಂತು ಎಂದು ಅಳಿಯ ಸಂದೀಪ್‌ ಮಾಹಿತಿ ನೀಡಿದ್ದಾರೆ. ಒಳಾಂಗಣ ಅಲಂಕಾರಕ್ಕೆ ದುಬಾರಿ ಖರ್ಚು : ನೆರೆ ಮನೆಯವರು ಹೇಳುವ ಪ್ರಕಾರ, ಮನೆಯಲ್ಲಿ ಮರದ ಪೀಠೋಪಕರಣಗಳು ಹೆಚ್ಚಿದ್ದವು. ಭಾರಿ ಖರ್ಚು ಮಾಡಿ ಒಳಾಂಗಣ ವಿನ್ಯಾಸ ಮಾಡಿಸಲಾಗಿತ್ತು. ಪ್ರತಿ ಗೋಡೆಗಳಿಗೂ ಪ್ಲೈವುಡ್‌ ಬಳಸಿ ವಾರ್ಡ್‌ರೋಬ್‌ ನಿರ್ಮಿಸಲಾಗಿತ್ತು. ಪ್ಲೈವುಡ್‌, ಮರದ ಸಾಮಗ್ರಿಗಳಿಂದಾಗಿ ಬೆಂಕಿ ನಿಯಂತ್ರಣಕ್ಕೆ ತರಲಾಗದಷ್ಟು ವ್ಯಾಪಿಸಿರಬಹುದು. ಜತೆಗೆ ಸಿಲಿಂಡರ್‌ನಿಂದ ಗ್ಯಾಸ್‌ ಸೋರಿಕೆಯೂ ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿರಬಹುದು ಎಂದು ಅನುಮಾನಿಸಲಾಗಿದೆ. ಸಿಲಿಂಡರ್‌ ಸ್ಫೋಟವಾಗಿಲ್ಲ: ಅನಾಹುತ ನಡೆದ ಫ್ಲ್ಯಾಟ್‌ನಲ್ಲಿ ಎರಡು ಸಿಲಿಂಡರ್‌ ಇತ್ತು. ಒಂದು ಸಿಲಿಂಡರ್‌ ಸಂಪೂರ್ಣ ಭರ್ತಿಯಾಗಿದ್ದರೆ, ಮತ್ತೊಂದರಲ್ಲಿ ಸುಮಾರು 4 ಕೆ.ಜಿ.ಯಷ್ಟು ಎಲ್‌ಪಿಜಿ ಇತ್ತು. ಸಿಲಿಂಡರ್‌ ಬ್ಲಾಸ್ಟ್‌ ಆಗಿರುವುದು ಕಂಡು ಬಂದಿಲ್ಲ. ಸಿಲಿಂಡರ್‌ನ ರೆಗ್ಯುಲೇಟರ್‌ ವಾಲ್‌ಗೆ ಹಾನಿಯಾಗಿರುವುದು ಕಂಡು ಬಂದಿದೆ. ಇದರಿಂದ ಗ್ಯಾಸ್‌ ಸೋರಿಕೆ ಆಗಿ, ಬೆಂಕಿಯ ತೀವ್ರತೆ ಹೆಚ್ಚಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಎಫ್‌ಎಸ್‌ಎಲ್‌ ತಂಡ ಶೋಧನೆಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಫ್‌ಎಸ್‌ಎಲ್‌ ತಂಡ, ಸುಟ್ಟು ಕರಕಲಾಗಿದ್ದ ಫ್ಲ್ಯಾಟ್‌ನಲ್ಲಿ ಸಾಕಷ್ಟು ಮಾಹಿತಿ ಕಲೆ ಹಾಕಿದೆ. ಸುಮಾರು 20ಕ್ಕೂ ಹೆಚ್ಚು ವಿವಿಧ ಪ್ರಕಾರದ ವಸ್ತುಗಳನ್ನು ತಂಡ ವಶಕ್ಕೆ ಪಡೆದಿದೆ. ಮೂವರು ತಂತ್ರಜ್ಞರ ತಂಡ ಎರಡೂ ಫ್ಲ್ಯಾಟ್‌ಗಳಲ್ಲಿ ಪರಿಶೀಲನೆ ನಡೆಸಿದೆ. ಟಿವಿ, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌ನಂತಹ ಎಲೆಕ್ಟ್ರಾನಿಕ್‌ ವಸ್ತುಗಳಿಂದ ಅನಾಹುತ ಸಂಭವಿಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಅವುಗಳನ್ನು ಪ್ಲಗ್‌ಗೆ ಸಂಪರ್ಕಿಸಿದ ಕಡೆ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಗ್ಯಾಸ್‌ ಸಿಲಿಂಡರ್‌ ರೆಗ್ಯುಲೇಟರ್‌ ಹಾನಿಯಾಗಿರುವುದರಿಂದ ಅದನ್ನೂ ವಶಕ್ಕೆ ಪಡೆಯಲಾಗಿದೆ. ವಿದ್ಯುತ್‌ ಸಂಪರ್ಕ ನೀಡಲು ಪರಿಶೀಲನೆಬೆಸ್ಕಾಂ ಸಿಬ್ಬಂದಿ ಕೂಡ ಅಪಾರ್ಟ್‌ಮೆಂಟ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಬೆಂಕಿ ಅನಾಹುತದಿಂದ ಹಾನಿಗೀಡಾಗಿರುವ ಎರಡು ಮನೆಗಳನ್ನು ಹೊರತುಪಡಿಸಿ ಉಳಿದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಆವರಣದಲ್ಲಿ ಮೌನಅನಾಹುತಕ್ಕೀಡಾದ ಅಪಾರ್ಟ್‌ಮೆಂಟ್‌ ಆವರಣದಲ್ಲಿ ಮೌನ ಆವರಿಸಿದೆ. ಸುರಕ್ಷತೆಯ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್‌ನ ಎಲ್ಲ ಫ್ಲ್ಯಾಟ್‌ಗಳ ನಿವಾಸಿಗಳನ್ನು ತಾತ್ಕಾಲಿಕವಾಗಿ ಬೇರೆಡೆಗೆ ತೆರಳುವಂತೆ ಸೂಚಿಸಲಾಗಿದೆ. ಹೆಚ್ಚಿನವರು ಸಂಬಂಧಿಕರ ಮನೆ, ಹೋಟೆಲ್‌ಗಳಲ್ಲಿಉಳಿದುಕೊಂಡಿದ್ದಾರೆ. ಒಂದೆರೆಡು ಕುಟುಂಬಗಳು ಮಾತ್ರ ಪಕ್ಕದ ಜಾಹ್ನವಿ ಎನ್‌ಕ್ಲೇವ್‌ನ ಕ್ಲಬ್‌ಹೌಸ್‌ನಲ್ಲಿ ಆಶ್ರಯ ಪಡೆದಿವೆ. ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನು ಕೊಂಡೊಯ್ಯಲು ಅವಕಾಶ ಮಾಡಿಕೊಡಲಾಗಿತ್ತು.ಹೀಗಾಗಿ ಕೆಲ ನಿವಾಸಿಗಳು ಬುಧವಾರ ಫ್ಲ್ಯಾಟ್‌ಗಳಿಗೆ ಬಂದು ಅಗತ್ಯ ವಸ್ತುಗಳನ್ನು ಕೊಂಡೊಯ್ದರು. ಸುಟ್ಟು ಕರಕಲಾದ ವಸ್ತುಗಳು 210ನೇ ನಂಬರಿನ ಫ್ಲ್ಯಾಟ್‌ನಲ್ಲಿ ಯಾವೊಂದು ವಸ್ತುವೂ ಬಳಕೆಗೆ ಸಾಧ್ಯವಾಗದಷ್ಟು ಸುಟ್ಟು ಕರಕಲಾಗಿದೆ. ಮರದ ಪೀಠೋಪಕರಣ, ಹಾಸಿಗೆ, ವಾರ್ಡ್‌ರೋಬ್‌, ಕಿಚನ್‌ ಕ್ಯಾಬಿನೆಟ್‌ಗೆ ಬಳಸಿದ್ದ ಪ್ಲೈವುಡ್‌ಗಳು, ಎಲೆಕ್ಟ್ರಾನಿಕ್‌ ವಸ್ತುಗಳು ಎಲ್ಲವೂ ಬೆಂಕಿಗೆ ಆಹುತಿಯಾಗಿವೆ. ಕಬ್ಬಿಣದ ಅಲ್ಮೆರಾ ಕೂಡ ಉರುಳಿ ಬಿದ್ದಿರುವುದು ಕಂಡು ಬಂದಿದೆ. 211ನೇ ನಂಬರಿನ ಫ್ಲ್ಯಾಟ್‌ನಲ್ಲೂ ಬೆಂಕಿ ಕಾಣಿಸಿಕೊಂಡಿದ್ದು, ಚಾವಣಿಗೆ ಒಂದಷ್ಟು ಹಾನಿಯಾಗಿದೆ. ಅಪಾರ್ಟ್‌ಮೆಂಟ್‌ ವಾಸಿಗಳು ಎಚ್ಚರ ವಹಿಸುವುದು ಅಗತ್ಯ! ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವರು ಅನಾಹುತಗಳಾದಂತೆ ಹೆಚ್ಚು ಎಚ್ಚರ ವಹಿಸುವುದು ಅಗತ್ಯ. ಏಕೆಂದರೆ, ಯಾವುದಾದರೊಂದು ಮನೆಯಲ್ಲಿ ಅನಾಹುತ ಸಂಭವಿಸಿದರೂ ನೂರಾರು ನಿವಾಸಿಗಳಿಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಬೆಂಕಿಯಂತ ಅವಘಡ ಸಂಭವಿಸಿದಲ್ಲಿ ಪಕ್ಕಪಕ್ಕದ ಫ್ಲ್ಯಾಟ್‌ಗಳಿಗೆ ಹರಡುವ ಎಲ್ಲಸಾಧ್ಯತೆ ಇರುತ್ತದೆ. ಇಡೀ ಕಟ್ಟಡಕ್ಕೆ ಧಕ್ಕೆಯಾಗಬಹುದು. ಜೀವ ಹಾನಿಯಾಗಬಹುದು. ಅನಾಹುತ ಸಂಭವಿಸಿದಲ್ಲಿ ನೆರೆಯವರ ನೆಮ್ಮದಿಯ ಬದುಕಿಗೂ ಸಂಚಕಾರ ತರಬಹುದು. ವಸತಿ ಸಮುಚ್ಛಯದ ನಿವಾಸಿಗಳ ಹಿತದೃಷ್ಟಿಯಿಂದ ಎಲ್ಲರೂ ಬಹಳ ಎಚ್ಚರಿಕೆ ವಹಿಸಬೇಕು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅವಘಡ ತಡೆಗೆ ಮುನ್ನೆಚ್ಚರಿಕೆ ಏನೇನು ? * ಮನೆಯಲ್ಲಿ ದೇವರಿಗೆ ದೀಪ ಹಚ್ಚಿದಾಗ ಇತರೆ ವಸ್ತುಗಳಿಗೆ, ಬಾಗಿಲಿಗೆ ತಗಲದಂತೆ ಎಚ್ಚರವಹಿಸಿ. ದೀಪದ ಪಕ್ಕದಲ್ಲಿ ಹೊತ್ತಿಕೊಳ್ಳುವಂತಹ ಹತ್ತಿ, ಕರ್ಪೂರ ಇತ್ಯಾದಿ ವಸ್ತುಗಳನ್ನು ಇಡದಿರಿ. * ಮರ, ಪ್ಲೈವುಡ್‌ನ ಪೀಠೋಪಕರಣ, ವಾರ್ಡ್‌ರೋಬ್‌, ಒಳಾಂಗಣ ಅಲಂಕಾರ ಇತಿಮಿತಿಯಲ್ಲಿ ಇರಲಿ. * ಮನೆಯಿಂದ ಹೊರಹೋಗುವಾಗ ಅಡುಗೆ ಮನೆಯ ಹಾಗೂ ಗ್ಯಾಸ್‌ ಗೀಸರ್‌ ಸಿಲಿಂಡರ್‌ ರೆಗ್ಯುಲೇಟರ್‌ ಆಫ್‌ ಮಾಡಿ. * ಸ್ನಾನದ ಮನೆಯಲ್ಲಿ ಗಾಳಿಯಾಡುವಂತೆ ಇದ್ದರೆ ಮಾತ್ರ ಗ್ಯಾಸ್‌ ಗೀಸರ್‌ ಬಳಸಿ. * ಮನೆ ನಿರ್ಮಾಣದ ವೇಳೆ ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್‌ ವೈರ್‌ಗಳನ್ನು ಬಳಸಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇಲ್ಲದಿದ್ದಲ್ಲಿ ಬದಲಿಸಿ. * ಶಾರ್ಟ್‌ ಸಕ್ರ್ಯುಟ್‌ ಆದಲ್ಲಿ ವಿದ್ಯುತ್‌ ಸಂಪರ್ಕ ಕಡಿತವಾಗುವಂತೆ ಫ್ಯೂಸ್‌ ಅಳವಡಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಿ. * ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಬಳಕೆ ಮಾಡಬೇಡಿ.