ಕೋವಿಡ್‌ನಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ನೆರವಾಗಿ: ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ

ದುರ್ಬಲ ಕುಟುಂಬಕ್ಕೆ ಸೇರಿದ ಕೋವಿಡ್‌ ಅನಾಥ ಮಕ್ಕಳಿಗೆ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಸಿಕ 2,000 ರೂ. ನೆರವು ನೀಡಲಾಗುತ್ತಿದ್ದು, ಈ ಬಗ್ಗೆಯೂ ವಿವರ ಒದಗಿಸುವಂತೆ ಕೋರ್ಟ್‌ ಸೂಚನೆ ನೀಡಿದೆ.

ಕೋವಿಡ್‌ನಿಂದ ಹೆತ್ತವರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ ನೆರವಾಗಿ: ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ
Linkup
: ಕೋವಿಡ್‌ ಸಾಂಕ್ರಾಮಿಕ ಹಾವಳಿಯಲ್ಲಿ ಅಪ್ಪ - ಅಮ್ಮನನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳನ್ನು ತ್ವರಿತವಾಗಿ ಗುರುತಿಸಿ, ಅವರಿಗೆ ನೆರವಿನ ಹಸ್ತ ಚಾಚುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ. 2020ರ ಮಾರ್ಚ್‌ನಿಂದ ಇದುವರೆಗೆ ಕೋವಿಡ್‌ನಿಂದ ಎಷ್ಟು ಅನಾಥರಾಗಿದ್ದಾರೆ ಎನ್ನುವ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ಎಲ್‌. ನಾಗೇಶ್ವರ ರಾವ್‌ ಮತ್ತು ಅನಿರುದ್ಧ ಬೋಸ್‌ ಅವರ ಪೀಠ, ಆದೇಶ ಮಾಡಿದೆ. ಮಕ್ಕಳನ್ನು ಗುರುತಿಸಲು ಪೊಲೀಸರು, ನಾಗರಿಕ ಸಂಸ್ಥೆಗಳು, ಗ್ರಾಮ ಪಂಚಾಯಿತಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಶ್ರಮಿಸುತ್ತಿದ್ದು, ಇವರಿಗೆ ಅಗತ್ಯ ನೆರವು ಒದಗಿಸಲು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ನ್ಯಾಯಪೀಠ ಆದೇಶ ಮಾಡಿತು. 'ಅನಾಥ ಮಕ್ಕಳನ್ನು ಗುರುತಿಸುವ ಕಾರ್ಯದಲ್ಲಿ ಇನ್ನಷ್ಟು ವಿಳಂಬ ಮಾಡುವುದು ಬೇಡ' ಎಂದ ನ್ಯಾಯಪೀಠ, ಸಂಗ್ರಹಗೊಂಡ ಮಾಹಿತಿಯನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗದ 'ಬಾಲ ಸ್ವರಾಜ್‌' ಪೋರ್ಟಲ್‌ಗೆ ಅಪ್‌ಲೋಡ್‌ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿತು. ದುರ್ಬಲ ಕುಟುಂಬಕ್ಕೆ ಸೇರಿದ ಕೋವಿಡ್‌ ಅನಾಥ ಮಕ್ಕಳಿಗೆ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮಾಸಿಕ 2,000 ರೂ. ನೆರವು ನೀಡಲಾಗುತ್ತಿದ್ದು, ಈ ಬಗ್ಗೆಯೂ ವಿವರ ಒದಗಿಸುವಂತೆ ಕೋರ್ಟ್‌ ಸೂಚನೆ ನೀಡಿದೆ. ಅಂತಹ ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ಕಾಳಜಿ ವಹಿಸುವ ಅಗತ್ಯ ಇದೆ ಎಂದು ತಿಳಿಸಿದೆ. ಭಿಕ್ಷಾಟನೆ ನಿಷೇಧಿಸಿ ಆದೇಶವಿಲ್ಲ: ಭಿಕ್ಷಾಟನೆ ನಿರ್ಮೂಲನೆ ವಿಚಾರದಲ್ಲಿ ಆತುರದ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಭಿಕ್ಷಾಟನೆ ನಿಷೇಧಿಸಿ ಆದೇಶ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. 'ಬಡತನ ಇಲ್ಲದಿದ್ದರೆ ಯಾರಾದರೂ ಭಿಕ್ಷೆ ಬೇಡುತ್ತಾರೇನು? ಸಾರ್ವಜನಿಕ ಸ್ಥಳಗಳು, ಟ್ರಾಫಿಕ್‌ ಜಂಕ್ಷನ್‌ಗಳಿಂದ ಭಿಕ್ಷಕರನ್ನು ಓಡಿಸಲು ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿಗಳಾದ ಡಿ. ವೈ. ಚಂದ್ರಚೂಡ್‌ ಮತ್ತು ಎಂ. ಆರ್‌. ಶಾ ಅವರನ್ನು ಒಳಗೊಂಡ ಪೀಠ ಹೇಳಿದೆ. ಕೊರೊನಾ ಹಿನ್ನೆಲೆಯಲ್ಲಿ ನಗರಗಳ ಟ್ರಾಫಿಕ್‌ ಸಿಗ್ನಲ್‌, ಪ್ರಮುಖ ಪ್ರದೇಶಗಳಲ್ಲಿ ಭಿಕ್ಷಾಟನೆ ನಿಷೇಧಿಸಬೇಕು ಎಂದು ಕೋರಿದ್ದ ಅರ್ಜಿಯನ್ನು ಪೀಠ ವಜಾ ಮಾಡಿದೆ.