Anil Ambani, ಸಿಬಿಐ ಮಾಜಿ ಮುಖ್ಯಸ್ಥ ಅಲೋಕ್ ವರ್ಮಾ ಮೇಲೆಯೂ ಇಸ್ರೇಲಿ ಸ್ಪೈವೇರ್ ಗೂಢಚಾರಿಕೆ!

ರಿಲಯನ್ಸ್ ಸಮೂಹದ ಉದ್ಯಮಿ ಅನಿಲ್ ಅಂಬಾನಿ, ಸಿಬಿಐ ಮಾಜಿ ಮುಖ್ಯಸ್ಥ ಅಲೋಕ್ ವರ್ಮಾ ಅವರೂ ಇಸ್ರೇಲಿ ಸ್ಪೈವೇರ್ ಪೆಗಾಸಸ್‌ನ ಕಣ್ಗಾವಲಿನ ಪಟ್ಟಿಯಲ್ಲಿ ಇದ್ದರು ಎಂದು ವರದಿಯಾಗಿದೆ.

Anil Ambani, ಸಿಬಿಐ ಮಾಜಿ ಮುಖ್ಯಸ್ಥ ಅಲೋಕ್ ವರ್ಮಾ ಮೇಲೆಯೂ ಇಸ್ರೇಲಿ ಸ್ಪೈವೇರ್ ಗೂಢಚಾರಿಕೆ!
Linkup
ಹೊಸದಿಲ್ಲಿ: ಇಸ್ರೇಲಿ ಸ್ಪೇವೇರ್ ಪೆಗಾಸಸ್ ಮೂಲಕ ಖ್ಯಾತ ಉದ್ಯಮಿ ಮತ್ತು ಏರೋಸ್ಪೇಸ್ ಉದ್ಯಮದ ಇತರೆ ಕೆಲವು ಪ್ರಮುಖ ಉದ್ಯಮಿಗಳ ಮೇಲೆಯೂ ಬೇಹುಗಾರಿಕೆ ನಡೆಸಲಾಗಿದೆ ಎಂದು 'ದಿ ವೈರ್' ವರದಿ ಮಾಡಿದೆ. 2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಡೀಲ್ ವಿಚಾರವು ಸಾರ್ವಜನಿಕ ಚರ್ಚೆಗೆ ಒಳಗಾದ ಸಂದರ್ಭದಲ್ಲಿ ಅನಿಲ್ ಅಂಬಾನಿ ಮತ್ತು ಸಮೂಹದ ಇತರೆ ಕೆಲವು ಅಧಿಕಾರಿಗಳ ಫೋನ್ ಸಂಖ್ಯೆಗಳ ಮೇಲೆ ನಿಗಾ ಇರಿಸಲಾಗಿತ್ತು ಎಂದು ವರದಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಿತಿ ಮೀರಿ ಬೆಲೆ ನಿಗದಿ ಮಾಡಿದ್ದ 36 ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದದಲ್ಲಿ ವಿಮಾನದ ಆಫ್‌ಸೆಟ್ ತಯಾರಿಕೆ ಕಾರ್ಯವು ಅನಿಲ್ ಅಂಬಾನಿ ಅವರ ಸಂಸ್ಥೆಗೆ ಸಿಗುವಂತೆ ಮಾಡಿದ್ದರು ಎಂದು ವಿರೋಧಪಕ್ಷ ಕಾಂಗ್ರೆಸ್ ಆರೋಪಿಸಿತ್ತು. ಭಾರತದಲ್ಲಿನ ಡಸಾಲ್ಟ್ ಏವಿಯೇಷನ್ ಪ್ರತಿನಿಧಿ ವೆಂಕಟ ರಾವ್ ಪೋಸಿನಾ, ಸಾಬ್ ಇಂಡಿಯಾದ ಮಾಜಿ ಮುಖ್ಯಸ್ಥ ಇಂದರ್ಜಿತ್ ಸಿಯಾಲ್ ಮತ್ತು ಬೋಯಿಂಗ್ ಇಂಡಿಯಾ ಮುಖ್ಯಸ್ಥ ಪ್ರತ್ಯುಷ್ ಕುಮಾರ್ ಕೂಡ ಈ ಪಟ್ಟಿಯಲ್ಲಿದ್ದರು. ಈ ಒಪ್ಪಂದವನ್ನು ವೆಂಕಟ ರಾವ್ ಅವರು ಸಮರ್ಥಿಸಿಕೊಂಡಿದ್ದರು. ಟ್ವಿಟ್ಟರ್‌ನಲ್ಲಿ ಟೀಕಾಕಾರರೊಂದಿಗೆ ಅವರು ವಾಕ್ಸಮರವನ್ನೂ ನಡೆಸಿದ್ದರು. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರ ಅಧಿಕೃತ ನಿಯೋಗವು ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅದರ ಸದಸ್ಯರಾಗಿದ್ದ, ಎನರ್ಜಿ ಇಡಿಎಫ್ ಫ್ರೆಂಚ್ ಸಂಸ್ಥೆಯ ಮುಖ್ಯಸ್ಥ ಹರ್ಮನ್‌ಜಿತ್ ನಾಗಿ ಅವರ ಫೋನ್ ಸಂಖ್ಯೆಯನ್ನೂ ನಿಗಾದಲ್ಲಿ ಇರಿಸಲಾಗಿತ್ತು ಎಂದು ವರದಿ ತಿಳಿಸಿದೆ. ಸಿಬಿಐ ಮುಖ್ಯಸ್ಥನ ಮೇಲೂ ಕಣ್ಣುಸಿಬಿಐ ಮುಖ್ಯಸ್ಥರಾಗಿದ್ದ ಅವರನ್ನು 2018ರಲ್ಲಿ ಅಧಿಕಾರದಿಂದ ಕಿತ್ತುಹಾಕಿದ ಕೆಲವೇ ಗಂಟೆಗಳಲ್ಲಿ ಅವರ ಫೋನ್ ಸಂಖ್ಯೆಯಲ್ಲಿ ಸ್ಪೈವೇರ್ ಪಟ್ಟಿಗೆ ಸೇರ್ಪಡೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನಾ ಮತ್ತು ಅಲೋಕ್ ವರ್ಮಾ ನಡುವೆ ತೀವ್ರ ಸಂಘರ್ಷ ನಡೆದಾಗ 2018ರ ಅಕ್ಟೋಬರ್ 23ರಂದು ಇಬ್ಬರನ್ನೂ ರಜೆಯ ಮೇಲೆ ಕಳುಹಿಸಿ ಎಂ. ನಾಗೇಶ್ವರ ರಾವ್ ಅವರನ್ನು ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ವರ್ಮಾ ಅವರ ಕುಟುಂಬದ ಸದಸ್ಯರು ಹಾಗೂ ಆಸ್ಥಾನಾ ಅವರ ಫೋನ್ ಸಂಖ್ಯೆಗಳನ್ನು ನಿಗಾಯೋಗ್ಯ ಗುರಿಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ವರ್ಮಾ ನಿವೃತ್ತರಾದ ಬಳಿಕ ಅವರಿಗೆ ಸಂಬಂಧಿಸಿದ ವ್ಯಕ್ತಿಗಳ ಮೇಲಿನ ನಿಗಾವನ್ನು ಪೆಗಾಸಸ್ ಸೃಷ್ಟಿಕರ್ತ ಎನ್‌ಎಸ್‌ಒ ಸಮೂಹ ನಿಲ್ಲಿಸಿತ್ತು ಎಂದು ವರದಿ ಹೇಳಿದೆ.