'ವೀರ ಚಕ್ರ' ಪ್ರಶಸ್ತಿ ಸ್ವೀಕರಿಸಿದ ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ವರ್ಧಮಾನ್‌

ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಪಾಕಿಸ್ತಾನದ ಜತೆಗಿನ ವೈಮಾನಿಕ ಘರ್ಷಣೆ ಸಂದರ್ಭದಲ್ಲಿ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್‌ ವರ್ಧಮಾನ್‌ ರಾಷ್ಟ್ರಪತಿಯವರಿಂದ ವೀರ ಚಕ್ರ ಪುರಸ್ಕಾರ ಸ್ವೀಕರಿಸಿದ್ದಾರೆ.

'ವೀರ ಚಕ್ರ' ಪ್ರಶಸ್ತಿ ಸ್ವೀಕರಿಸಿದ ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ವರ್ಧಮಾನ್‌
Linkup
ಹೊಸದಿಲ್ಲಿ: ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನ ಹೊಡೆದುರುಳಿಸಿದ್ದ ಭಾರತದ ವಾಯುಸೇನೆಯ ಅಭಿನಂದನ್‌ ವರ್ಧಮಾನ್‌ ಸೋಮವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಂದ ಪುರಸ್ಕಾರ ಸ್ವೀಕರಿಸಿದರು. ಬಾಲಾಕೋಟ್‌ ಸರ್ಜಿಕಲ್‌ ಸ್ಟ್ರೈಕ್‌ ಬಳಿಕ ಪಾಕಿಸ್ತಾನದ ಮೇಲೆ ನಡೆದ ವೈಮಾನಿಕ ದಾಳಿ ಸಂದರ್ಭದಲ್ಲಿ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಇದಕ್ಕಾಗಿ ಅವರಿಗೆ ಭಾರತ ಸರಕಾರ ವೀರ ಚಕ್ರ ಪುರಸ್ಕಾರ ಘೋಷಿಸಿತ್ತು. ಇದೀಗ ಸೋಮವಾರ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಮೂರು ವರ್ಷಗಳ ಹಿಂದೆ 2019ರ ಫೆಬ್ರವರಿಯಲ್ಲಿ ಸರ್ಜಿಕಲ್‌ ದಾಳಿ ಬಳಿಕ ಪಾಕಿಸ್ತಾನ ವಾಯುಪಡೆಯು ಎಫ್‌ - 16 ಯುದ್ಧ ವಿಮಾನಗಳ ಮೂಲಕ ಗಡಿ ದಾಟಿಕೊಂಡು ಪ್ರತೀಕಾರಕ್ಕಾಗಿ ದೇಶದ ಮೇಲೆ ಎರಗಿತ್ತು. ಇದಕ್ಕೆ ತಿರುಗೇಟು ನೀಡಲು ಮಿಗ್‌-21 ಯುದ್ಧ ವಿಮಾನಗಳ ಮೂಲಕ ಅಭಿನಂದನ್‌ ವರ್ಧಮಾನ್‌ ನೇತೃತ್ವದ ಐಎಎಫ್‌ ತಂಡಕ್ಕೆ ಮುನ್ನುಗ್ಗಿತ್ತು. ಒಂದು ಎಫ್‌ - 16 ವಿಮಾನವನ್ನೂ ಕೂಡ ಅಭಿನಂದನ್‌ ವರ್ಧಮಾನ್‌ ಹೊಡೆದುರುಳಿಸಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ಪಾಕಿಸ್ತಾನ ಆಕ್ರಮಿಕ ಕಾಶ್ಮೀರದ ಮೇಲೆ ಹಾರಾಟ ನಡೆಸುತ್ತಿದ್ದಾಗ ಅವರ ಮಿಗ್‌-21 ವಿಮಾನವೂ ವಾಯುದಾಳಿಗೆ ಗುರಿಯಾಗಿ ಅವರು ವಿಮಾನದಿಂದ ಹೊರಗೆ ಬರಬೇಕಾಯಿತು. ಈ ಸಂದರ್ಭದಲ್ಲಿ ಪಾಕಿಸ್ತಾನದ ಸೇನೆಯ ಕೈಗೆ ಅವರು ಸಿಕ್ಕಿ ಬಿದ್ದಿದ್ದರು. ನಂತರ ಭಾರತದ ಪ್ರಬಲ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರ ಕೆಲವೇ ಗಂಟೆಗಳಲ್ಲಿ ಅಭಿನಂದನ್‌ ವರ್ಧಮಾನ್‌ ಅವರನ್ನು ಭಾರತಕ್ಕೆ ಹಸ್ತಾಂತರಿಸಿತ್ತು. ಈ ಘಟನೆ ನಡೆಯುವಾಗ ಅವರು ಶ್ರೀನಗದ ಮೂಲದ 51 ಸ್ಕ್ವಾಡ್ರನ್‌ನ ಭಾಗವಾಗಿದ್ದರು. ಈ ಸಂದರ್ಭದಲ್ಲಿ ಅವರು ಪೈಲಟ್‌ ವಿಂಗ್‌ ಕಮಾಂಡರ್‌ ಶ್ರೇಣಿಯ ಅಧಿಕಾರಿಯಾಗಿದ್ದರು. ಇತ್ತೀಚೆಗೆ ಅವರಿಗೆ 'ಗ್ರೂಪ್‌ ಕ್ಯಾಪ್ಟನ್‌' ದರ್ಜೆಗೆ ಬಡ್ತಿ ನೀಡಲಾಗಿತ್ತು. ಇದು ಭಾರತೀಯ ಭೂ ಸೇನಾಪಡೆ ಕರ್ನಲ್‌ ಶ್ರೇಣಿಗೆ ಸಮನಾದ ಹುದ್ದೆಯಾಗಿದೆ.