ಉದಿಯಂಡ ಜಯಂತಿ ಮಂದಣ್ಣ ಮಡಿಕೇರಿ
ಕುಸಿತದ ಹಾದಿಯಲ್ಲಿದ್ದ ಸಂಬಾರ ರಾಣಿ 4 ವರ್ಷಗಳ ಬಳಿಕ 500 ರೂ. ಗಡಿ ತಲುಪಿರುವುದು ಬೆಳೆಗಾರರಿಗೆ ಖುಷಿ ತಂದಿದೆ.
ವಿದೇಶದಿಂದ ಕಳಪೆ ಕಾಳುಮೆಣಸು ಆಮದು ಸೇರಿದಂತೆ ನಾನಾ ಕಾರಣದಿಂದ ಕಳೆದ ನಾಲ್ಕೈದು ವರ್ಷಗಳಿಂದ ಕರಿಮೆಣಸಿನ ಬೆಲೆ ನಿಂತ ನೀರಾಗಿತ್ತು. ಅಧಿಕ ನಿರ್ವಹಣಾ ವೆಚ್ಚ, ಕಾರ್ಮಿಕರ ಕೊರತೆ, ಕೂಲಿ ದರ ಏರಿಕೆ, ವಾತಾವರಣದ ವೈಪರಿತ್ಯ, ನಾನಾ ಬಗೆಯ ರೋಗ... ಕೊನೆಗೆ ಕೈಗೆ ಸಿಕ್ಕ ಫಸಲಿಗೆ ಸೂಕ್ತ ಬೆಲೆಯೂ ಇಲ್ಲದೇ ಪರದಾಡುತ್ತಿದ್ದ ಕಾಳುಮೆಣಸು ಬೆಳೆಗಾರರಿಗೆ ಪ್ರಸ್ತಕ ಸಾಲಿನಲ್ಲಿ ಕಾಳುಮೆಣಸು ಧಾರಣೆಯಲ್ಲಿ ಏರಿಕೆಯಾಗಿರುವುದು ತುಸು ಮಂದಹಾಸ ಮೂಡಿಸಿದೆ.
ವಿಪರೀತ ಮಳೆ ಕಾರಣ ಕಾಳುಮೆಣಸು ಎಲ್ಲೆಡೆ ಕಡಿಮೆಯಾಗಿರುವುದು, ಉತ್ತರ ಭಾರತದಲ್ಲಿ ಪ್ರಸ್ತುತ ಬೇಡಿಕೆ ಹೆಚ್ಚಾಗುತ್ತಿರುವುದು, ಚಳಿಗಾಲದಲ್ಲಿ ಕಾಳುಮೆಣಸು ಬಳಕೆ ಸಾಧಾರಣವಾಗಿ ತುಸು ಹೆಚ್ಚಳವಾಗುವುದು, ಇದರೊಂದಿಗೆ ಈ ತನಕ ಇದ್ದ ಕೊರೊನಾ ಲಾಕ್‌ಡೌನ್ ಪರಿಸ್ಥಿತಿ ತೆರವಾಗಿರುವುದೂ ಒಂದಷ್ಟು ಬೆಲೆ ಹೆಚ್ಚಳಕ್ಕೆ ಕಾರಣವೆನ್ನಲಾಗುತ್ತಿದೆ.
ಬೆಲೆ ಏರಿಕೆ: ಒಂದು ವಾರದಿಂದ ಕಾಳುಮೆಣಸಿನ ಬೆಲೆಯಲ್ಲಿ ನಿರಂತರ ಏರಿಕೆ ಕಂಡು ಬಂದಿದೆ. 410 ರೂ. ನಿಂದ ಆರಂಭವಾದ ಬೆಲೆ ಶನಿವಾರ 500 ರ ಗಡಿ ತಲುಪಿದೆ. ಏಳೆಂಟು ವರ್ಷಗಳ ಹಿಂದೆ ಕರಿಮೆಣಸು ಬೆಲೆ 750 ರೂ. ವರೆಗೆ ಏರಿತ್ತು. ಐದಾರು ವರ್ಷಗಳ ಕಾಲ ಉತ್ತಮ ಧಾರಣೆಯೂ ಇತ್ತು. ಆದರೆ ಹಠಾತ್ ಕುಸಿತದ ನಂತರ 2020ರಲ್ಲಿ ಕಾಳುಮೆಣಸಿನ ಬೆಲೆ 280 ರೂ.ಗೆ ಇಳಿದಿತ್ತು.
ನಂತರದಲ್ಲಿ ಬಹಳಷ್ಟು ಸಮಯ 380 ರ ಅಸುಪಾಸಿನಲ್ಲಿಯೇ ಇದ್ದ ಮೆಣಸಿನ ದರ ಸದ್ಯ ಏರಿಕೆ ಕಂಡಿದೆ. ಇದು ಫಸಲಿನ ಸಮಯವಲ್ಲವಾದರೂ ಮೆಣಸು ಸಂಗ್ರಹವಿಟ್ಟುಕೊಂಡಿದ್ದವರಿಗೆ ಈಗಿನ ಬೆಲೆಯಿಂದಾಗಿ ಆಶಾದಾಯಕವಾಗಿದೆ. ಇದು ಹೀಗೆಯೇ ಮುಂದುವರಿಯಲಿದೆಯೇ ಅಥವಾ ಇನ್ನಷ್ಟು ಹೆಚ್ಚಳವಾಗಲಿದೆಯೇ ಎಂಬುದನ್ನು ಖಚಿತವಾಗಿ ಹೇಳಲು ಸಾಧ್ಯವಾಗದು ಎನ್ನುತ್ತಾರೆ ಹಲವು ವ್ಯಾಪಾರಸ್ಥರು.
ಅಕಾಲಿಕ ಮಳೆ-ಆತಂಕ : ಕೊಡಗಿನಿಂದ ಹೆಚ್ಚಾಗಿ ಹೈದಾರಬಾದ್, ಕೊಚ್ಚಿನ್‌ಗೆ ಕರಿಮೆಣಸು ರಫ್ತು ಮಾಡಲಾಗುತ್ತದೆ. ಕಳೆದ ವರ್ಷವೂ ವಿಪರೀತ ಮಳೆಯಿಂದ ಕಾಳುಮೆಣಸಿನ ಇಳುವರಿ ಕಡಿಮೆಯಿದೆ. ಪ್ರಸ್ತಕ ಸಾಲಿನಲ್ಲಿಯೂ ಹವಾಮಾನದ ವೈಪರೀತ್ಯದಿಂದ ಫಸಲೂ ನಾಶವಾಗಿದೆ. ಹಲವೆಡೆ ಮೆಣಸಿನ ಬಳ್ಳಿ ಹಳದಿ ಬಣ್ಣಕ್ಕೆ ತಿರುಗಿದೆ. ಇದರಿಂದ ಮುಂದಿನ ಸಾಲಿನಲ್ಲಿಯೂ ಫಸಲು ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಬೆಲೆ ಸ್ಥಿರತೆ ಬಗ್ಗೆ ನಿತ್ಯದ ಮಾರುಕಟ್ಟೆಯ ಆಧಾರದಲ್ಲಿ ಏನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ಮಡಿಕೇರಿಯ ವ್ಯಾಪಾರಸ್ಥ ಅಬ್ದುಲ್ ರಜಾಕ್.
ಶೇಖರಣೆ ಸುಲಭ : ಕೊಯ್ಲಿನ ನಂತರ ಕರಿಮೆಣಸನ್ನು ಚೆನ್ನಾಗಿ ಒಣಗಿಸಿ ಪ್ಯಾಕ್ ಮಾಡಿ ಶೇಖರಿಸಿದರೆ ಸುಮಾರು ಹತ್ತು ವರ್ಷಗಳವರೆಗೆ ಇಡಬಹುದು. ಕೃಷಿಕರು ಕಾಳುಮೆಣಸು ಹಾಳಾಗುತ್ತದೆ ಎಂದು ಭಯಪಡಬೇಕಿಲ್ಲ. ಮಾರುಕಟ್ಟೆಯಲ್ಲಿ ಧಾರಣೆಯಿಲ್ಲ ಎಂದು ಯಾರೂ ತರಾತುರಿಯಲ್ಲಿ ಮಾರಲು ಮುಂದಾಗುವುದು ಇಲ್ಲ. ಇದರೊಂದಿಗೆ ಕರಿಮೆಣಸು ಎಷ್ಟು ಹಳೆಯದಾಗುತ್ತದೋ ಅಷ್ಟೇ ಒಳ್ಳೆಯದು, ದೊಡ್ಡ ದೊಡ್ಡ ಬೆಳೆಗಾರರು 5,6 ವರ್ಷದ ಮೆಣಸನ್ನು ಶೇಖರಿಸಿಟ್ಟುಕೊಂಡು ಉತ್ತಮ ಧಾರಣೆ ಬಂದಾಗ ಮಾತ್ರ ಮಾರಾಟಕ್ಕೆ ಮುಂದಾಗುತ್ತಾರೆ.
ಹೆಚ್ಚಿದ ಉತ್ಪನ್ನ
ಕೊಡಗು ಜಿಲ್ಲೆಯಲ್ಲಿ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಕಾಳುಮೆಣಸು ಬೆಳೆಯಲಾಗುತ್ತಿದೆ. 2019 ರಲ್ಲಿ6697.30 ಮೆಟ್ರಿಕ್ ಟನ್, 2020 ರಲ್ಲಿ 6650.80 ಮೆಟ್ರಿಕ್ ಟನ್, 2021 ರಲ್ಲಿ 7054.60 ಮೆಟ್ರಿಕ್ ಟನ್ ಮೆಣಸು ಉತ್ಪಾದಿಸಲಾಗಿದೆ. ಜಿಲ್ಲೆಯಲ್ಲಿ ಒಂದು ಲಕ್ಷದ ಹತ್ತು ಸಾವಿರ ಹೆಕ್ಟೇರ್‌ನಷ್ಟು ಕಾಫಿ ಪ್ರದೇಶವಿದ್ದು, ಅದರಲ್ಲಿ ಅಂತರ್‌ಬೆಳೆಯಾಗಿ ಕಾಳುಮೆಣಸನ್ನು ಬೆಳೆಯಲಾಗುತ್ತಿದೆ.
ನಾಲ್ಕೈದು ವರ್ಷಗಳ ನಂತರ ಕಾಳುಮೆಣಸು ದರ ಹೆಚ್ಚಾಗಿರುವುದು ಖುಷಿ ತಂದಿದೆ. ಭಾರತದಲ್ಲಿ ಉತ್ತಮ ಕಾಳುಮೆಣಸು ಲಭ್ಯವಿದೆ. ವಿದೇಶದಿಂದ ಆಮದಾಗುವ ಕಾಳುಮೆಣಸಿನ ಅವಲಂಬನೆ ಕಡಿಮೆಯಾದರೆ ಮೆಣಸಿನ ಧಾರಣೆ ಇನ್ನಷ್ಟು ಹೆಚ್ಚಾಗಬಹುದು. ವಿದೇಶದಿಂದ ಆಮದಾಗುವ ಮೆಣಸಿನ ಮೇಲೆ ಸರಕಾರ ಕಟ್ಟುನಿಟ್ಟಿನ ಕ್ರಮ ವಹಿಸಬೇಕು.
-ದೇವಣಿರ ಎಂ. ಕುಮಾರ್, ರೈತ ಹಾಕತ್ತೂರು.
ಕಳೆದ ಎರಡು ಮೂರು ವರ್ಷಗಳಿಂದ ವಿಪರೀತ ಮಳೆಯ ಕಾರಣದಿಂದ ಮೆಣಸು ಫಸಲು ಕಡಿಮೆ ಇದೆ ಎಂದು ರೈತರು ಹೇಳುತ್ತಾರೆ. ಸದ್ಯ ಕಾಳುಮೆಣಸು 500 ರೂ. ದರವಿದೆ. ಕಲಬೆರಕೆ ಬಂದರೆ ಕಷ್ಟ. ಬೆಲೆ ಸ್ಥಿರತೆ ಬಗ್ಗೆ ನಿತ್ಯದ ಮಾರುಕಟ್ಟೆ ಆಧಾರದಲ್ಲಿ ಏನೂ ಹೇಳಲು ಸಾಧ್ಯವಿಲ್ಲ.
-ಅಬ್ದುಲ್ ರಜಾಕ್, ವ್ಯಾಪಾರಸ್ಥ. ಮಡಿಕೇರಿ