ಆಫ್‌ಲೈನ್‌ ಮಾರಾಟಕ್ಕೂ ಬಿಗ್‌ಬಾಸ್ಕೆಟ್‌ ಎಂಟ್ರಿ, ಬೆಂಗಳೂರಿನಲ್ಲಿ ಮೊದಲ ಮಳಿಗೆ ಆರಂಭ

ಆನ್‌ಲೈನ್‌ ದಿನಸಿ ಮಾರಾಟಕ್ಕೆ ಹೆಸರಾದ ಬಿಗ್‌ ಬಾಸ್ಕೆಟ್‌ ಈಗ ಆಫ್‌ಲೈನ್‌ ಮಾರಾಟ ಮಾಡಲು ತನ್ನ ಮೊದಲ ಹೆಜ್ಜೆ ಇಟ್ಟಿದ್ದು, ಬೆಂಗಳೂರಿನಲ್ಲಿ ತನ್ನ ಮೊದಲ ಭೌತಿಕ ಮಳಿಗೆಯನ್ನು 'ಫ್ರೆಶೋ’ ಹೆಸರಿನಲ್ಲಿ ಆರಂಭಿಸಿದೆ.

ಆಫ್‌ಲೈನ್‌ ಮಾರಾಟಕ್ಕೂ ಬಿಗ್‌ಬಾಸ್ಕೆಟ್‌ ಎಂಟ್ರಿ, ಬೆಂಗಳೂರಿನಲ್ಲಿ ಮೊದಲ ಮಳಿಗೆ ಆರಂಭ
Linkup
ಬೆಂಗಳೂರು: ಆನ್‌ಲೈನ್‌ ದಿನಸಿ ಮಾರಾಟಕ್ಕೆ ಹೆಸರಾದ ಟಾಟಾ ಗ್ರೂಪ್‌ ಮಾಲಿಕತ್ವದ ಬಿಗ್‌ ಬಾಸ್ಕೆಟ್‌ ಈಗ ಆಫ್‌ಲೈನ್‌ ಮಾರಾಟ ಮಾಡಲು ತನ್ನ ಮೊದಲ ಹೆಜ್ಜೆ ಇಟ್ಟಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಮೊದಲ ಭೌತಿಕ ಮಳಿಗೆಯನ್ನು ಆರಂಭಿಸಿರುವ ಬಿಗ್‌ ಬಾಸ್ಕೆಟ್‌ ‘ಫ್ರೆಶೋ’ ಎಂಬ ಹೆಸರಿನ ಬ್ರ್ಯಾಂಡ್‌ ಮೂಲಕ ದಿನಸಿ ವಸ್ತುಗಳ ಮಾರಾಟಕ್ಕೆ ಮುಂದಾಗಿದೆ. ರಿಯಾಯಿತಿ ಮಾರ್ಗವನ್ನು ಬಿಗ್‌ ಬಾಸ್ಕೆಟ್‌ ಯಾವಾಗಲೂ ಅನುಸರಿಸುವುದಿಲ್ಲ. ಆದರೆ, ಸಾವಯವ ಪದಾರ್ಥಗಳನ್ನು, ಉತ್ಪನ್ನಗಳನ್ನು ಪ್ರಮಾಣಿತ ದರದಲ್ಲಿ ಮಾರಾಟ ಮಾಡುತ್ತಿದೆ. ಹೀಗಾಗಿ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಅ. 25 ರಂದು ಬಸವೇಶ್ವರ ನಗರದಲ್ಲಿ ಮಾರಾಟ ಮಳಿಗೆ ಆರಂಭವಾಗಿದೆ. ಬೆಳಗ್ಗೆ 8 ರಿಂದ ಸಂಜೆ 9ರ ವರೆಗೂ ಮಳಿಗೆ ಕಾರ್ಯನಿರ್ವಹಿಸಲಿದೆ ಎಂದು ಬಿಗ್‌ ಬಾಸ್ಕೆಟ್‌ ಸಹ ಸಂಸ್ಥಾಪಕ ವಿ.ಎಸ್‌. ಸುಧಾಕರ್‌ ತಿಳಿಸಿದ್ದಾರೆ. “ಹೊಸ ಮಳಿಗೆಯಲ್ಲಿ ಸ್ವಯಂ ತೂಕ, ಚೆಕ್‌ ಇನ್‌ - ಚೆಕ್‌ ಔಟ್‌, ಗ್ರಾಹಕರ ಡ್ರೈವ್‌, ಗ್ರಾಹಕರ ಅಭಿಪ್ರಾಯ, ಸಮಾಲೋಚನೆಯನ್ನು ಶೀಘ್ರದಲ್ಲಿ ಆರಂಭಿಸಲು ಬಯಸಿದ್ದೇವೆ. ಸೂಚನಾ ಫಲಕ ಹಾಕದೇ ಕಾರ್ಯಾರಂಭ ಮಾಡಲಾಗಿದ್ದರೂ ಪ್ರತಿನಿತ್ಯ 100 ಜನರು ಭೇಟಿ ನೀಡಿ, 80 ಜನರು ಖರೀದಿಸುತ್ತಿದ್ದಾರೆ,” ಎಂದು ಸುಧಾಕರ್‌ ತಿಳಿಸಿದ್ದಾರೆ. ಕಂಪನಿಯ ಕಾರ್ಯತಂತ್ರದಲ್ಲಿ ಇದು ನಿರ್ಣಾಯಕ ಎಂದು ಸುಧಾಕರ್‌ ಅವರು ಕಂಪನಿಯ ಎಲ್ಲ ಉದ್ಯೋಗಿ­ಗಳಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ತಿಳಿಸಿದ್ದಾರೆ. ಈ ವರ್ಷದ ಆದಿಯಲ್ಲಿ ಟಾಟಾ ಸನ್ಸ್‌ ಮಾಲಿಕತ್ವದ ಬಿಗ್‌ ಬಾಸ್ಕೆಟ್‌ನಲ್ಲಿ ಬಹುಪಾಲು ಷೇರು­ಗಳನ್ನು ಖರೀದಿಸಿತ್ತು. ಮುಂಬರುವ ದಿನಗಳಲ್ಲಿ ಇತರ ನಗರಗಳಲ್ಲಿಯೂ ಇದೇ ರೀತಿಯಲ್ಲಿ ಹೊಸ ಮಳಿಗೆಗಳನ್ನು ಬಿಗ್‌ ಬಾಸ್ಕೆಟ್‌ ತೆರೆಯುವ ನಿರೀಕ್ಷೆ ಇದೆ. ಈಗಾಗಲೇ ಸ್ವಿಗ್ಗಿ ಮತ್ತು ಡುಂಜೊದಂತಹ ಆಪ್‌ ಮೂಲಕ ದಿನಸಿ ಪದಾರ್ಥಗಳನ್ನು ಮಾರಾಟ- ವಿತರಣೆ ಮಾಡುವ ಸಂಸ್ಥೆಗಳು ಸ್ಥಳೀಯ ಮಟ್ಟದಲ್ಲಿ ಕಿರಾಣಿ ವಸ್ತುಗಳ ಪೂರೈಕೆಗಾಗಿ ಈ ರೀತಿ ಡಾರ್ಕ್ ಸ್ಟೋರ್‌ಗಳನ್ನು ತೆರೆಯುವ ಮೂಲಕ ಉತ್ತುಂಗಕ್ಕೇರುತ್ತಿವೆ. ಸಮಯದಲ್ಲಿಯೇ ಕೂಡ ಇದೇ ಹಾದಿಯಲ್ಲಿ ಹೆಜ್ಜೆ ಇಟ್ಟಿದೆ. ಡಾರ್ಕ್ ಸ್ಟೋರ್ ಎನ್ನುವುದು ಆನ್‌ಲೈನ್ ಆರ್ಡರ್‌ಗಳನ್ನು ಪೂರೈಸಲು ಇ-ಕಾಮರ್ಸ್ ಕಂಪನಿಯಿಂದ ನಿರ್ವಹಿಸಲ್ಪಡುವ ಸ್ಥಳೀಯ ಅಂಗಡಿಯಾಗಿದೆ. ಜಿಯೋಮಾರ್ಟ್ ಅನ್ನು ನಿರ್ವಹಿಸುವ ರಿಲಯನ್ಸ್ ರಿಟೇಲ್ ಕೂಡ ತನ್ನ ಪ್ರೀಮಿಯಂ ಕಿರಾಣಿ ಅಂಗಡಿಯ ಸ್ವರೂಪವಾದ 'ಫ್ರೆಶ್‌ಪಿಕ್' ಅನ್ನು ಈ ತಿಂಗಳ ಆರಂಭದಲ್ಲಿ ಮುಂಬೈನಲ್ಲಿ ಅನಾವರಣಗೊಳಿಸಿತ್ತು. ತನ್ನ ಫ್ರೆಶೋ ಬಗ್ಗೆ ಬಿಗ್‌ಬಾಸ್ಕೆಟ್‌ ಸಂಪೂರ್ಣ ವಿವರಣೆಯನ್ನು ನೀಡಿಲ್ಲವಾದರೂ, ಈ ಮಳಿಗೆಗಳನ್ನು ಆಫ್‌ಲೈನ್‌ ಮಾರಾಟದ ಜತೆಗೆ ಆನ್‌ಲೈನ್‌ ಆರ್ಡರ್‌ಗಳ ಡೆಲಿವರಿಗಳಿಗೂ ಬಳಕೆ ಮಾಡುವ ಸಾಧ್ಯತೆ ಇದೆ. ಇನ್ನೂ ಕೆಲವು ವರ್ಷಗಳ ಮಟ್ಟಿಗೆ ಭಾರತದ ಇ-ಗ್ರೋಸರಿ ಮಾರುಕಟ್ಟೆ ಆಕರ್ಷಕವಾಗಿ ಇರಲಿದೆ ಎಂದು ಕಿಯಾರ್ನಿ ವರದಿ ಹೇಳಿದ್ದು, ದಿನದಿಂದ ದಿನಕ್ಕೆ ಹೊಸ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಜತೆಗೆ ಈ ವಲಯದಲ್ಲಿ ಸ್ಪರ್ಧೆಯೂ ಹೆಚ್ಚುತ್ತಿದೆ