ಕೊರೊನಾರ್ಭಟಕ್ಕೆ ಬೆಂಗಳೂರಿನ ಆಸ್ಪತ್ರೆಗಳೆಲ್ಲಾ ಹೌಸ್‌ ಫುಲ್: ಒಂದು ವಾರ ಬೆಡ್‌ ಸಿಗಲ್ಲ..!

'ನಮ್ಮ ಸಿಬ್ಬಂದಿಗೆ ಕೊರೊನಾ ಬಂದರೂ ದಾಖಲಿಸಲು ನಮ್ಮ ಆಸ್ಪತ್ರೆಯಲ್ಲೇ ಬೆಡ್‌ ಸಿಗುತ್ತಿಲ್ಲ. ಮನೆಯಲ್ಲೇ ಕ್ವಾರಂಟೈನ್‌ ಆಗುತ್ತಿದ್ದೇವೆ. ಆಕ್ಸಿಜನ್‌ ಕೂಡ ಸಿಗುತ್ತಿಲ್ಲ' ಎಂದು ವೈದ್ಯರು ಹೇಳುತ್ತಿದ್ದಾರೆ.

ಕೊರೊನಾರ್ಭಟಕ್ಕೆ ಬೆಂಗಳೂರಿನ ಆಸ್ಪತ್ರೆಗಳೆಲ್ಲಾ ಹೌಸ್‌ ಫುಲ್: ಒಂದು ವಾರ ಬೆಡ್‌ ಸಿಗಲ್ಲ..!
Linkup
ಶಿವಾನಂದ ಹಿರೇಮಠ : ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ನಗರದ ಆಸ್ಪತ್ರೆಗಳಲ್ಲಿ ಹಾಸಿಗೆಗೆ ಪರದಾಟ ಮುಂದುವರಿದಿದೆ. ಬೆಡ್‌ಗಾಗಿ ಆಸ್ಪತ್ರೆಗಳ ಮುಂದೆ ರೋಗಿಗಳು ಮತ್ತು ಸಂಬಂಧಿಕರು ಸರದಿಯಲ್ಲಿ ನಿಲ್ಲುವ ಸ್ಥಿತಿ ಉದ್ಭವಿಸಿದೆ. ಇನ್ನೊಂದು ವಾರ ಬೆಡ್‌ ಕೇಳಲೇ ಬೇಡಿ ಎಂದು ಆಸ್ಪತ್ರೆಗಳ ಸಿಬ್ಬಂದಿ ಹೇಳುತ್ತಿದ್ದಾರೆ. ಬಿಬಿಎಂಪಿ ಮೂಲಕ ಲಭ್ಯವಿರುವ ಬೆಡ್‌ಗಳು ಸಂಪೂರ್ಣ ಭರ್ತಿಯಾಗಿವೆ. ಮುಂದಿನ ಏಳು ದಿನಗಳ ಕಾಲ ಆಸ್ಪತ್ರೆಗಳನ್ನು ಭರ್ತಿ ಮಾಡುವಷ್ಟು ಸೋಂಕಿತರ ಪಟ್ಟಿ ಬಿಬಿಎಂಪಿ ಬಳಿ ಇದೆ. ಹೆಚ್ಚುತ್ತಿರುವ ಪ್ರಕರಣಗಳಿಂದ ತದನಂತರವೂ ಬೆಡ್‌ ಸಿಗುತ್ತದೆಂಬ ಭರವಸೆ ಇಲ್ಲ. ಖಾಸಗಿ ಆಸ್ಪತ್ರೆಗಳಿಗೂ ಸೋಂಕಿತರ ಸಂಬಂಧಿಕರು ಖುದ್ದಾಗಿ ಭೇಟಿ ನೀಡಿ ವೆಂಟಿಲೇಟರ್‌ ಬೆಡ್‌ ನೀಡುವಂತೆ ಒತ್ತಾಯಿಸುತ್ತಿರುವುದು ಸಾಮಾನ್ಯವಾಗಿದೆ. ಪ್ರಭಾವಿಗಳಿಂದ ಕರೆ ಮಾಡಿಸಿ ಒತ್ತಡ ಹೇರುತ್ತಿದ್ದಾರೆ. ಬೆಡ್‌ ಸಿಗದೇ ಇದ್ದಾಗ, ಸೋಂಕಿತರು ಡಿಸ್ಚಾರ್ಜ್‌ ಆದಾಗ ನಮಗೆ ಕರೆ ಮಾಡಿ ಎಂದು ವೈಯಕ್ತಿಕ ಮಾಹಿತಿ ನೀಡಿ ಬರುತ್ತಿದ್ದಾರೆ. ಪ್ರತಿ ಆಸ್ಪತ್ರೆಯಲ್ಲೂ ಬೆಡ್‌ಗೆ ಬೇಡಿಕೆ ಸಲ್ಲಿಸಿ ಕಾದು ಕುಳಿತಿರುವವರ ದೊಡ್ಡ ಪಟ್ಟಿಯೇ ಇದೆ. ನಗರದ ಸಿಟಿಜನ್‌ ಆಸ್ಪತ್ರೆಯಲ್ಲಿ ಈಗಾಗಲೇ ಮೂವತ್ತು ಮಂದಿ ಬೆಡ್‌ಗಾಗಿ ನೋಂದಾಯಿಸಿ ಕಾದು ಕುಳಿತಿದ್ದಾರೆ. ಸಾಯಿರಾಮ್‌ ಆಸ್ಪತ್ರೆಯಲ್ಲಿ 11 ಮಂದಿ ಸೋಂಕಿತರು 'ಕ್ಯೂ'ನಲ್ಲಿದ್ದಾರೆ. ಹೆಚ್ಚಿನ ಆಸ್ಪತ್ರೆಗಳ ಮುಂದೆ 'ಹಾಸಿಗೆ ಖಾಲಿ ಇಲ್ಲ' ಎಂಬ ಬೋರ್ಡ್‌ಗಳು ಕಂಡು ಬರುತ್ತಿವೆ. 'ಏಪ್ರಿಲ್‌ ಕೊನೆಯ ವಾರದಿಂದ ಆಸ್ಪತ್ರಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಒಂದು ವಾರವಂತೂ ಬೆಡ್‌ಗಳು ಸಿಗುವಂತಿಲ್ಲ. 30 ದಿನಗಳ ಕಾಲ ಬೆಡ್‌ ಅಭಾವ ಮುಂದುವರಿಯುವಂತೆ ಕಾಣುತ್ತಿದೆ' ಎನ್ನುತಾರೆ ಸುಪ್ರಾ ಆಸ್ಪತ್ರೆಯ ವೈದ್ಯ ಡಾ. ವಿನಯ್‌. ಬೆಡ್‌ ಹೆಚ್ಚಿಸಲು ಸರಕಾರ ಹರಸಾಹಸ: ಬೆಡ್‌ಗಳ ಸಂಖ್ಯೆ ಹೆಚ್ಚಿಸಲು, ಸೋಂಕಿತರಿಗೆ ನೆರವು ಒದಗಿಸಲು ಸರಕಾರ ಹರಸಾಹಸ ಪಡುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್‌ ಕೊರತೆ ಇರುವುದರಿಂದ ಹಲವೆಡೆ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಆರಂಭಿಸಲಾಗುತ್ತಿದೆ. ಕೋವಿಡ್‌ ಕೇರ್‌ ಸೆಂಟರ್‌ಗಳಲ್ಲಿ ಆಕ್ಸಿಜನ್‌ ಬೆಡ್‌ಗಳನ್ನು ಒದಗಿಸಲಾಗುತ್ತಿದೆ. ಆಸ್ಪತ್ರೆಗಳ ಆಡಳಿತ ಮಂಡಳಿಗಳ ಮನವೊಲಿಸಿ ಹೆಚ್ಚುವರಿ ಬೆಡ್‌ ಒದಗಿಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ. ವೈದ್ಯ ಸಿಬ್ಬಂದಿಗೇ ಸಿಗುತ್ತಿಲ್ಲ ಬೆಡ್‌: 'ನಮ್ಮ ಸಿಬ್ಬಂದಿಗೆ ಕೊರೊನಾ ಬಂದರೂ ದಾಖಲಿಸಲು ನಮ್ಮ ಆಸ್ಪತ್ರೆಯಲ್ಲೇ ಬೆಡ್‌ ಸಿಗುತ್ತಿಲ್ಲ. ಮನೆಯಲ್ಲೇ ಕ್ವಾರಂಟೈನ್‌ ಆಗುತ್ತಿದ್ದೇವೆ. ಆಕ್ಸಿಜನ್‌ ಕೂಡ ಸಿಗುತ್ತಿಲ್ಲ' ಎಂದು ವೈದ್ಯರು ಹೇಳುತ್ತಿದ್ದಾರೆ. ಕ್ವೀನ್‌ ಆಸ್ಪತ್ರೆಯ ಡಾ. ಸುರೇಶ್‌ ಕೃಷ್ಣ 'ನಮ್ಮ ವೈದ್ಯ ಸಿಬ್ಬಂದಿಗೆ ಕೊರೊನಾ ಸೋಂಕು ತಗಲಿದೆ. ವೆಂಟಿಲೇಟರ್‌ ಕೂಡ ಸಿಗದೆ ತೊಂದರೆ ಅನುಭವಿಸುವಂತಾಗಿದೆ. ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ. ಪಿಪಿಇ ಕಿಟ್‌ ಧರಿಸಿ, ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೂ ಶೇ. 20 ರಷ್ಟು ಸಿಬ್ಬಂದಿಗೆ ಸೋಂಕು ತಗುಲುತ್ತಿದೆ. ಹಲವರು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗುತ್ತಿದ್ದಾರೆ. ಸುಪ್ರಾ ಆಸ್ಪತ್ರೆಯಲ್ಲಿ ನಾಲ್ವರಿಗೆ, ಕೆ.ಸಿ. ಜನರಲ್‌ ಆಸ್ಪತ್ರೆಯ ಕಂಟೇನರ್‌ ವಾರ್ಡ್‌ನಲ್ಲಿ ಇಬ್ಬರಿಗೆ, ಸಾಯಿ ರಾಮ್‌ ಆಸ್ಪತ್ರೆಯಲ್ಲಿ ಒಬ್ಬರಿಗೆ ಸೋಂಕು ತಗಲಿದೆ. 'ನಗರದಲ್ಲಿ ಬೆಡ್‌ ಸಂಖ್ಯೆ ಹೆಚ್ಚಿಸಲು ಸರಕಾರದ ಜತೆ ಮಾತುಕತೆ ನಡೆಸಲಾಗಿದೆ. ಸಿ.ಎಂ. ಬಿ.ಎಸ್‌. ಯಡಿಯೂರಪ್ಪ ಅವರು ಹಲವು ಸಂಸ್ಥೆ, ಟ್ರಸ್ಟ್‌ಗಳಿಗೆ ಮನವಿ ಮಾಡಿ ಬೆಡ್‌ ಸೌಲಭ್ಯ ಕಲ್ಪಿಸುವಂತೆ ಸೂಚಿಸಿದ್ದಾರೆ' ಎಂದು ಫನಾ ಅಸೋಸಿಯೇಷನ್‌ ಅಧ್ಯಕ್ಷ ಡಾ. ಎಚ್‌.ಎಂ. ಪ್ರಸನ್ನ ತಿಳಿಸಿದ್ದಾರೆ.