ಕನ್ನಡ ನಟ ಸತ್ಯಜಿತ್ ನಿಧನಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ

ಕನ್ಮಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಅವರ ನಿಧನಕ್ಕೆ ಸಚಿವ‌ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು‌ ಸಂತಾಪ‌ ವ್ಯಕ್ತಪಡಿಸಿದ್ದಾರೆ.

ಕನ್ನಡ ನಟ ಸತ್ಯಜಿತ್ ನಿಧನಕ್ಕೆ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ
Linkup
ಕನ್ನಡ ಚಿತ್ರರಂಗದ ಹಿರಿಯ ನಟ ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಸತ್ಯಜಿತ್ ಅವರನ್ನ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯ ಐಸಿಯುನಲ್ಲಿ ನಟ ಸತ್ಯಜಿತ್ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ನಟ ಸತ್ಯಜಿತ್ (72) ಕೊನೆಯುಸಿರೆಳೆದಿದ್ದಾರೆ. ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಂತಾಪ ಕನ್ಮಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್‌ ಅವರ ನಿಧನಕ್ಕೆ ಸಚಿವ‌ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು‌ ಸಂತಾಪ‌ ವ್ಯಕ್ತಪಡಿಸಿದ್ದಾರೆ. ‘’ಖಳನಾಯಕ, ಪೋಷಕ ನಟ ಸೇರಿದಂತೆ ವೈವಿಧ್ಯಮಯ ಪಾತ್ರಗಳಲ್ಲಿ‌ 600ಕ್ಕೂ ಹೆಚ್ಷು‌ ಸಿನಿಮಾಗಳಲ್ಲಿ‌ ನಟ ಸತ್ಯಜಿತ್ ಅವರು ಅಭಿನಯಿಸಿದ್ದ‌ರು. ತಮ್ಮ ಪ್ರೌಢ ನಟನೆಯ ಮೂಲಕ ಜನರ‌ ಹೃದಯವನ್ನು ಗೆದ್ದಿದ್ದರು. ತಮ್ಮ ಕಲಾಸೇವೆಯಿಂದಾಗಿ ಅವರ ಹೆಸರು ಕನ್ನಡ ಸಾಂಸ್ಕೃತಿಕ ಕ್ಷೇತ್ರದಲ್ಲಿ‌ ಚಿರಸ್ಥಾಯಿಯಾಗಿರುತ್ತದೆ’’ ಎಂದಿದ್ದಾರೆ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ. ಬಹುಬೇಡಿಕೆಯ ಪೋಷಕ ನಟರಾಗಿದ್ದ ಸತ್ಯಜಿತ್ ಕನ್ನಡ ಚಿತ್ರರಂಗದಲ್ಲಿ ಸತ್ಯಜಿತ್ ಅಂತಲೇ ಖ್ಯಾತಿ ಪಡೆದಿರುವ ಇವರ ನಿಜನಾಮ ಸಯ್ಯದ್ ನಿಜಾಮುದ್ದೀನ್. ಬಣ್ಣದ ಬದುಕಿಗೆ ಕಾಲಿಡುವ ಮುನ್ನ ಸಯ್ಯದ್ ನಿಜಾಮುದ್ದೀನ್ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ನಟನೆಯಲ್ಲಿ ಆಸಕ್ತಿ ಹೊಂದಿದ್ದ ಅವರು ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಬಣ್ಣದ ಚಿತ್ರರಂಗಕ್ಕೆ ಸತ್ಯಜಿತ್ ಪಾದಾರ್ಪಣೆ ಮಾಡಿದರು. ನಟ ಸತ್ಯಜಿತ್ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟಿದ್ದು ಬಾಲಿವುಡ್‌ನಿಂದ. 1986ರಲ್ಲಿ ತೆರೆಗೆ ಬಂದ ನಾನಾ ಪಾಟೇಕರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಹಿಂದಿ ಸಿನಿಮಾ ‘ಅಂಕುಶ್’ ಚಿತ್ರದಲ್ಲಿ ಸತ್ಯಜಿತ್ ಅಭಿನಯಿಸಿದ್ದರು. ಬಳಿಕ ಕನ್ನಡದ ‘ಅರುಣ ರಾಗ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟ ಸತ್ಯಜಿತ್ ಕಾಲಿಟ್ಟರು. ನಂತರ ‘ನ್ಯಾಯಕ್ಕೆ ಶಿಕ್ಷೆ’, ‘ಅಂತಿಮ ತೀರ್ಪು’, ‘ಶಿವ ಮೆಚ್ಚಿದ ಕಣ್ಣಪ್ಪ’, ‘ರಣರಂಗ’, ‘ನ್ಯಾಯಕ್ಕಾಗಿ ನಾನು’, ‘ಯುದ್ಧಕಾಂಡ’, ‘ಇಂದ್ರಜಿತ್’, ‘ನಮ್ಮೂರ ಹಮ್ಮೀರ’, ‘ಪೊಲೀಸ್ ಲಾಕಪ್’, ‘ಮನೆದೇವ್ರು’, ‘ಮಂಡ್ಯದ ಗಂಡು’, ‘ಪೊಲೀಸ್ ಸ್ಟೋರಿ’, ‘ಸರ್ಕಲ್ ಇನ್ಸ್‌ಪೆಕ್ಟರ್’, ‘ಪಟೇಲ’, ‘ದುರ್ಗದ ಹುಲಿ’, ‘ಅಪ್ಪು’, ‘ಧಮ್’, ‘ಅಭಿ’, ‘ಆಪ್ತಮಿತ್ರ’, ‘ಅರಸು’, ‘ಇಂದ್ರ’, ‘ಭಾಗ್ಯದ ಬಳೆಗಾರ’, ‘ಕಲ್ಪನಾ’, ‘ಗಾಡ್ ಫಾದರ್’, ‘ಲಕ್ಕಿ’, ‘ಉಪ್ಪಿ 2’, ‘ಮಾಣಿಕ್ಯ’, ‘ರನ್ನ’, ‘ರಣವಿಕ್ರಮ’, ‘ಮೈತ್ರಿ’ ಮುಂತಾದ ಹಲವು ಚಿತ್ರಗಳಲ್ಲಿ ಸತ್ಯಜಿತ್ ನಟಿಸಿದರು. ಮೂರುವರೆ ದಶಕಗಳ ಸಿನಿ ಜರ್ನಿಯಲ್ಲಿ ನಟ ಸತ್ಯಜಿತ್ 650ಕ್ಕೂ ಅಧಿಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಪೋಷಕ ಪಾತ್ರ ಹಾಗೂ ನೆಗೆಟಿವ್ ಪಾತ್ರಗಳಲ್ಲೇ ನಟ ಸತ್ಯಜಿತ್ ಹೆಚ್ಚು ಗುರುತಿಸಿಕೊಂಡಿದ್ದರು. 35 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸತ್ಯಜಿತ್‌ಗೆ ಅನಾರೋಗ್ಯ ಬಾಧಿಸುತ್ತಿತ್ತು. ಗ್ಯಾಂಗ್ರಿನ್‌ನಿಂದಾಗಿ ಅವರ ಒಂದು ಕಾಲನ್ನ ಕತ್ತರಿಸಲಾಗಿತ್ತು. ಒಂದು ಕಾಲನ್ನ ಕಳೆದುಕೊಂಡಿದ್ದ ನಟ ಸತ್ಯಜಿತ್ ವೀಲ್ ಚೇರ್‌ನಲ್ಲಿ ಕುಳಿತುಕೊಂಡೇ ‘ಸೆಕೆಂಡ್ ಹಾಫ್’ ಸಿನಿಮಾದಲ್ಲಿ ಅಭಿನಯಿಸಿದ್ದರು. ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಕೆಂಡ್ ಹಾಫ್’ ಚಿತ್ರವೇ ನಟ ಸತ್ಯಜಿತ್ ಅಭಿನಯದ ಕಡೆಯ ಚಿತ್ರವಾಗಿತ್ತು.