ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಆರಂಭಿಸಲು ಹೊರಟ ರಾಕೇಶ್‌ ಝುಂಝುನ್‌ವಾಲಾ

ಷೇರು ಮಾರುಕಟ್ಟೆ ಹೂಡಿಕೆದಾರ ರಾಕೇಶ್‌ ಝುಂಝುನ್‌ವಾಲಾ ಹೊಸ ವಿಮಾನಯಾನ ಸಂಸ್ಥೆ ಆರಂಭಿಸಲು ಉದ್ದೇಶಿಸಿದ್ದು, ಮುಂದಿನ 4 ವರ್ಷಗಳಲ್ಲಿ 70 ವಿಮಾನಗಳನ್ನು ಹೊಂದಲು ಚಿಂತನೆ ನಡೆಸಿದ್ದಾರೆ.

ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಆರಂಭಿಸಲು ಹೊರಟ ರಾಕೇಶ್‌ ಝುಂಝುನ್‌ವಾಲಾ
Linkup
ಮುಂಬಯಿ: ಸಾವಿರಾರು ಕೋಟಿ ರೂ. ಹೂಡಿಕೆದಾರ ರಾಕೇಶ್‌ ಝುಂಝುನ್‌ವಾಲಾ 70 ವಿಮಾನಗಳಿರುವ ಕಡಿಮೆ ಪ್ರಯಾಣ ಬೆಲೆಯ ವಿಮಾನಯಾನ ಸಂಸ್ಥೆ ಆರಂಭಿಸಲು ಚಿಂತನೆ ನಡೆಸಿದ್ದಾರೆ. ಈ ಹೊಸ ವಿಮಾನಯಾನ ಸಂಸ್ಥೆಗೆ ಮುಂದಿನ 4 ವರ್ಷಗಳಲ್ಲಿ 70 ವಿಮಾನಗಳನ್ನು ಹೊಂದಲು ಅವರು ಉದ್ದೇಶಿಸಿದ್ದು, ತಮ್ಮ ಸಂಸ್ಥೆ ಎಂಬ ಹೆಸರಿಡಲು ನಿರ್ಧರಿಸಿದ್ದಾರೆ. ಹೀಗಂಥ ಬ್ಲೂಂಬರ್ಗ್‌ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಝುಂಝುನ್‌ವಾಲಾ ತಿಳಿಸಿದ್ದಾರೆ. ಹೊಸ ವಿಮಾನಯಾನ ಸಂಸ್ಥೆಯಲ್ಲಿ ಸುಮಾರು 260 ಕೋಟಿ ರೂ. (35 ಮಿ. ಡಾಲರ್‌) ಹೂಡಿಕೆ ಮಾಡಲು ಝುಂಝುನ್‌ವಾಲಾ ಉದ್ದೇಶಿಸಿದ್ದು, ಶೇ. 40ರಷ್ಟು ಷೇರು ಹೊಂದುವ ಗುರಿ ಹಾಕಿಕೊಂಡಿದ್ದಾರೆ. ಈ ವಿಮಾನಯಾನ ಸಂಸ್ಥೆಗೆ ಮುಂದಿನ 15 ದಿನಗಳಲ್ಲಿ ಸರಕಾರದಿಂದ ಅನುಮತಿ ಸಿಗುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ರಾಕೇಶ್‌ ಝುಂಝುನ್‌ವಾಲಾ ಷೇರು ಹೂಡಿಕೆದಾರನಾಗಿ ಖ್ಯಾತರಾಗಿದ್ದು, ಅವರನ್ನು ಭಾರತದ ವಾರೆನ್‌ ಬಫೆಟ್‌ ಎಂದೂ ಕರೆಯಲಾಗುತ್ತದೆ. ತಮ್ಮ ವಿಮಾನಯಾನ ಸಂಸ್ಥೆಗೆ ಡೆಲ್ಟಾ ಏರ್‌ಲೈನ್ಸ್‌ನ ಮಾಜಿ ಹಿರಿಯ ಅಧಿಕಾರಿಯೊಬ್ಬರನ್ನೂ ಕರೆತಂದಿದ್ದಾರೆ. ಸುಮಾರು 180 ಪ್ರಯಾಣಿಕರಿರುವ ವಿಮಾನಗಳನ್ನು ಕಂಪನಿ ಹೊಂದಲಿದೆ. ದೇಶದಲ್ಲಿ ಈಗಾಗಲೇ ಹಲವು ಕಂಪನಿಗಳು ದರ ಸಮರ, ಭಾರಿ ವೆಚ್ಚದ ಕಾರಣಕ್ಕೆ ಮುಳುಗಡೆಯಾಗಿವೆ. ಇದೇ ವಾತಾವರಣದಲ್ಲಿ ತಮ್ಮ ವಿಮಾನಯಾನ ಸಂಸ್ಥೆ ಆರಂಭಿಸಲು ಝುಂಝುನ್‌ವಾಲಾ ಉದ್ದೇಶಿಸಿರುವುದು ಭಾರಿ ಅಪಾಯದ ನಡೆ ಎಂದೇ ವಿಶ್ಲೇಷಿಸಲಾಗಿದೆ. ಆದರೆ ಇದರ ನಡುವೆಯೂ ಭಾರತದಲ್ಲಿ ವಿಮಾನಯಾನ ವೇಗವಾಗಿ ಬೆಳವಣಿಗೆಯಾಗುತ್ತಿರುವುದಂತೂ ಸತ್ಯ. ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಝುಂಝುನ್‌ವಾಲಾ ಯೋಜನೆ ರೂಪಿಸಿದ್ದಾರೆ. "ಕೆಲವು ವಿಮಾನಯಾನ ಸಂಸ್ಥೆಗಳು ಚೇತರಿಸಿಕೊಳ್ಳದಿರಬಹುದು ಎಂದು ನಾನು ಭಾವಿಸುತ್ತೇನೆ" ಎಂದಿರುವ ಝುಂಝುನ್‌ವಾಲಾ, "ನನ್ನ ಪಾಲುದಾರರಾಗಿ ವಿಶ್ವದ ಅತ್ಯುತ್ತಮ ವಿಮಾನಯಾನದ ಜನರನ್ನು ನಾನು ಪಡೆದುಕೊಂಡಿದ್ದೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.