ಠೇವಣಿದಾರರ ನೆರವಿಗೆ ಧಾವಿಸಿದ ಕೇಂದ್ರ, ಬ್ಯಾಂಕ್‌ ಮುಳುಗಿದರೆ 5 ಲಕ್ಷ ರೂ.ವರೆಗೆ ವಿಮೆ

ಒಂದೊಮ್ಮೆ ಬ್ಯಾಂಕ್‌ಗಳು ಮುಳುಗಿದರೆ, ಹಗರಣಕ್ಕೆ ಸಿಲುಕಿದರೆ ಆಯಾ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿರುವ ಹಣದ ಮೇಲೆ 5 ಲಕ್ಷ ರೂಪಾಯಿವರೆಗೆ ಗ್ರಾಹಕರಿಗೆ ವಿಮೆ ಸಿಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.

ಠೇವಣಿದಾರರ ನೆರವಿಗೆ ಧಾವಿಸಿದ ಕೇಂದ್ರ, ಬ್ಯಾಂಕ್‌ ಮುಳುಗಿದರೆ 5 ಲಕ್ಷ ರೂ.ವರೆಗೆ ವಿಮೆ
Linkup
ಹೊಸದಿಲ್ಲಿ: ದೇಶದಲ್ಲಿ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಠೇವಣಿದಾರರ ನೆರವಿಗೆ ಕೇಂದ್ರ ಸರಕಾರ ಧಾವಿಸಿದೆ. ಒಂದೊಮ್ಮೆ ಬ್ಯಾಂಕ್‌ಗಳು ಮುಳುಗಿದರೆ ಅಥವಾ ಹಗರಣಕ್ಕೆ ಸಿಲುಕಿದರೆ ಆಯಾ ಬ್ಯಾಂಕ್‌ನಲ್ಲಿ ಇಟ್ಟಿರುವವರ ಹಣದ ಮೇಲೆ 5 ಲಕ್ಷ ರೂಪಾಯಿವರೆಗೆ ಸಿಗಲಿದೆ ಎಂದು ಕೇಂದ್ರ ಸರಕಾರ ಹೇಳಿದೆ. ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಠೇವಣಿ ವಿಮಾ ಪಾವತಿ ಖಾತರಿ ನಿಗಮ (ಡಿಐಸಿಜಿಸಿ) ಕಾಯಿದೆಯ ತಿದ್ದುಪಡಿಗೆ ಅನುಮೋದನೆ ನೀಡಲಾಗಿದ್ದು, ಬ್ಯಾಂಕ್‌ಗಳು ನಿರ್ಬಂಧಕ್ಕೆ ಒಳಗಾದ 90 ದಿನಗಳ ಒಳಗೆ ಈ ವಿಮೆ ಮೊತ್ತ ಠೇವಣಿದಾರರ ಕೈ ಸೇರಲಿದೆ. " ಬ್ಯಾಂಕುಗಳ ಮೇಲೆ ನಿಷೇಧ ಹೇರಿದ ನಂತರ ತೊಂದರೆಗಳನ್ನು ಎದುರಿಸುತ್ತಿರುವ ಜನರಿಗೆ ಅನುಕೂಲವಾಗುವಂತೆ, ‘ಠೇವಣಿ ವಿಮಾ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಶನ್’ ಅನ್ನು ರಚಿಸಲಾಗಿದೆ. 90 ದಿನಗಳಲ್ಲಿ ಠೇವಣಿದಾರರು ತಮ್ಮ 5 ಲಕ್ಷ ರೂ. ಹಣವನ್ನು ಸ್ವೀಕರಿಸುತ್ತಾರೆ ಎಂದು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಲಾಯಿತು," ಎಂಬುದಾಗಿ ಕೇಂದ್ರ ಸಚಿವ ಅನುರಾಗ್‌ ಠಾಕೂರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕಾನೂನಿನ ಮೂಲಕ ಶೇ. 98.3 ರಷ್ಟು ಠೇವಣಿಗಳಿಗೆ ರಕ್ಷಣೆ ನೀಡಲು ಸಾಧ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಡಿಜಿಸಿಜಿಸಿ ರಿಸರ್ವ್‌ ಬ್ಯಾಂಕ್‌ನ ಅಂಗ ಸಂಸ್ಥೆಯಾಗಿದ್ದು ಠೇವಣಿಗಳಿಗೆ ವಿಮೆಯ ಸುರಕ್ಷತೆ ನೀಡುತ್ತದೆ. ಡಿಜಿಸಿಜಿಸಿ ಕಾಯಿದೆಯ ಮೂಲಕ ಹೂಡಿಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆಗೊಳಿಸಲು ಸರಕಾರ ಉದ್ದೇಶಿಸಿದೆ. ಇತ್ತೀಚೆಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಯೆಸ್‌ ಬ್ಯಾಂಕ್‌ ಮತ್ತು ಲಕ್ಷ್ಮೀ ವಿಲಾಸ್‌ ಬ್ಯಾಂಕ್‌ಗಳು ಹಗರಣದ ಸುಳಿಗೆ ಸಿಲುಕಿ ಆರ್‌ಬಿಐನಿಂದ ನಿರ್ಬಂಧಕ್ಕೊಳಗಾಗಿದ್ದವು. ಈ ವ್ಯವಸ್ಥೆಯು ಸರಕಾರಿ, ಖಾಸಗಿ, ಸಹಕಾರಿ ಮತ್ತು ಭಾರತದಲ್ಲಿರುವ ವಿದೇಶಿ ಬ್ಯಾಂಕ್‌ಗಳಿಗೆ ಅನ್ವಯಿಸುತ್ತದೆ. ಆದರೆ ಕೆಲವು ನಿರ್ದಿಷ್ಟ ಠೇವಣಿಗಳಿಗೆ ಇದು ಅನ್ವಯಿಸುವುದಿಲ್ಲ. ಸಾಮಾನ್ಯವಾಗಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿರ್ಬಂಧಗಳನ್ನು ಹೇರಿದಾಗ ದೊಡ್ಡ ಮೊತ್ತದ ಹಣವನ್ನು ವಾಪಸ್‌ ಪಡೆಯಲು ಠೇವಣಿದಾರರಿಗೆ ಸಾಧ್ಯವಾಗುವುದಿಲ್ಲ. ಇಂಥಹವರಿಗೆ ಈ ಕಾನೂನಿನಿಂದ ನೆರವು ಸಿಗಲಿದೆ.