ಬ್ಯಾಂಕ್‌, ವಿಮೆ ಕಂಪನಿಗಳಲ್ಲಿದೆ ಕ್ಲೇಮ್‌ ಆಗದ 50,000 ಕೋಟಿ ರೂ. ನಿಧಿ!

ಬ್ಯಾಂಕ್‌ಗಳು ಹಾಗೂ ವಿಮೆ ಕಂಪನಿಗಳಲ್ಲಿ ಯಾವುದೇ ವಾರಸುದಾರರು ಇಲ್ಲದೆ ಇರುವ ಹಣದ ಮೊತ್ತ 50,000 ಕೋಟಿ ರೂಪಾಯಿ ದಾಟಿದ್ದು, 2020ರಲ್ಲಿಯೇ ಇದಕ್ಕೆ 5,977 ಕೋಟಿ ರೂ. ಸೇರ್ಪಡೆಯಾಗಿದೆ.

ಬ್ಯಾಂಕ್‌, ವಿಮೆ ಕಂಪನಿಗಳಲ್ಲಿದೆ ಕ್ಲೇಮ್‌ ಆಗದ 50,000 ಕೋಟಿ ರೂ. ನಿಧಿ!
Linkup
ಹೊಸದಿಲ್ಲಿ: ಬ್ಯಾಂಕ್‌ಗಳು ಮತ್ತು ವಿಮೆ ಕಂಪನಿಗಳಲ್ಲಿ ಯಾವುದೇ ವಾರಸುದಾರರು ಇಲ್ಲದೆ ಇರುವ ಹಣದ ಮೊತ್ತ 50,000 ಕೋಟಿ ರೂ. ದಾಟಿದೆ. 2020ರಲ್ಲಿ 5,977 ಕೋಟಿ ರೂ. ಇದಕ್ಕೆ ಸೇರ್ಪಡೆಯಾಗಿದೆ. ಸಂಸತ್ತಿಗೆ ತಿಳಿಸಿರುವ ಪ್ರಕಾರ 8.1 ಕೋಟಿ ಖಾತೆಗಳಲ್ಲಿ ಕ್ಲೇಮ್‌ ಆಗದೆ ಇರುವ ಹಣ 24,356 ಕೋಟಿ ರೂ.ಗಳಿದೆ. ಅಂದರೆ ಪ್ರತಿ ಖಾತೆಯಲ್ಲೂ ಸರಾಸರಿ 3,000 ರೂ. ಬ್ಯಾಲೆನ್ಸ್‌ ಕ್ಲೇಮೇ ಆಗಿಲ್ಲ. ವಿಮೆ ಕಂಪನಿಗಳಲ್ಲಿ 24,586 ಕೋಟಿ ರೂ.ಗಳಿವೆ. ಸಾರ್ವಜನಿಕ ಬ್ಯಾಂಕ್‌ಗಳಲ್ಲಿ ಸರಾಸರಿ 3,030 ರೂ. ಬ್ಯಾಲೆನ್ಸ್‌ ಇದ್ದರೆ, ಎಸ್‌ಬಿಐನಲ್ಲಿ ಸರಾಸರಿ 2,710 ರೂ. ಹಾಗೂ ಖಾಸಗಿ ಬ್ಯಾಂಕ್‌ ಗಳ ಅನ್‌ಕ್ಲೇಮ್ಡ್‌ ಖಾತೆಗಳಲ್ಲಿ ಸರಾಸರಿ 3,340 ರೂ. ಇದೆ. ವಿದೇಶಿ ಬ್ಯಾಂಕ್‌ಗಳ 5.6 ಲಕ್ಷ ಖಾತೆಗಳಲ್ಲಿ ಸರಾಸರಿ 9,250 ರೂ. ಇದೆ. ಕಿರು ಹಣಕಾಸು ಬ್ಯಾಂಕ್‌ ಗಳ ಖಾತೆಗಳಲ್ಲಿ ಸರಾಸರಿ 654 ರೂ. ಇದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಮಾತ್ರ 1,600 ರೂ. ಸರಾಸರಿ ಇದೆ. ವಿಮೆ ಪಾಲಿಸಿಗಳ ಕ್ಲೇಮ್‌ ಆಗದೆ ಇರುವುದಕ್ಕೆ ಪಾಲಿಸಿದಾರರು ತಮ್ಮ ವಿಮೆ ಪಾಲಿಸಿಗಳ ಬಗ್ಗೆ ಮನೆಯ ಇತರ ಸದಸ್ಯರಿಗೆ ತಿಳಿಸದೆ ಇರುವುದೂ ಒಂದು ಕಾರಣ. ಮೆಚ್ಯುರಿಟಿ ದಿನದ ಸಂದರ್ಭ ದಾಖಲಾತಿಗಳು ಸಿಗದಿರುವುದೂ ಮತ್ತೊಂದು ಕಾರಣ. ಮನೆಗಳನ್ನು ಬದಲಿಸಿದಾಗ ಬ್ಯಾಂಕ್‌ ಖಾತೆಗಳನ್ನು ಅಪ್‌ಡೇಟ್‌ ಮಾಡದಿರುವುದೂ ಹಣ ಕ್ಲೇಮ್‌ ಆಗದೆ ಬಾಕಿಯಾಗಲು ಕಾರಣಗಳಲ್ಲೊಂದಾಗಿದೆ. ಜನ ಹಲವು ಖಾತೆಗಳನ್ನು ತೆರೆದ ಸಂದರ್ಭ ಒಂದಷ್ಟು ಹಣವನ್ನು ಬ್ಯಾಲೆನ್ಸ್‌ ಆಗಿ ಇಡುವುದೂ ಮತ್ತೊಂದು ಕಾರಣವಾಗಿದೆ. ನಾಮಿನೇಶನ್‌ ಮಾಡದಿದ್ದಾಗಲೂ ಇದೇ ಸಮಸ್ಯೆಯಾಗುತ್ತದೆ. ಆರ್‌ಬಿಐ ಬ್ಯಾಂಕ್‌ಗಳಿಗೆ ನೀಡಿರುವ ಸೂಚನೆಯಲ್ಲಿ, ಖಾತೆದಾರರ ಪತ್ತೆಗೆ ಸಾಧ್ಯವಾದಷ್ಟು ಯತ್ನಿಸುವಂತೆ ತಿಳಿಸಿದೆ. ಬ್ಯಾಂಕ್‌ಗಳು ನಿರ್ದಿಷ್ಟ ಅವಧಿಯ ನಂತರ ಈ ವಾರಸುದಾರರಿಲ್ಲದ ಹಣವನ್ನು ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ವರ್ಗಾಯಿಸಲು ನಿರ್ದೇಶಿಸಿದೆ. ಗ್ರಾಹಕರು ಬ್ಯಾಂಕ್‌ ಗಳ ವೆಬ್‌ ಸೈಟ್‌ ಮೂಲಕವೂ ತಮ್ಮ ನಿಷ್ಕ್ರಿಯ ಖಾತೆಗಳಲ್ಲಿ ಹಣ ಇದೆಯೇ ಎಂಬುವುದನ್ನು ಪತ್ತೆ ಹಚ್ಚಬಹುದು. ವಿಮೆ ಕಂಪನಿಗಳು ವಾರಸುದಾರರು ಇಲ್ಲದ ವಿಮೆ ಮೊತ್ತವನ್ನು 10 ವರ್ಷದ ನಂತರ ಹಿರಿಯ ನಾಗರಿಕರ ಕಲ್ಯಾಣ ನಿಧಿಗೆ ವರ್ಗಾಯಿಸಬೇಕಾಗುತ್ತದೆ. ಹಿರಿಯ ನಾಗರಿಕರ ಕಲ್ಯಾಣ ಯೋಜನೆಗೆ ಅದನ್ನು ಬಳಸಲಾಗುತ್ತದೆ.