ಕೈಕೊಟ್ಟ ಫೇಸ್‌ಬುಕ್, ವಾಟ್ಸಾಪ್: ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್ ಕಳೆದುಕೊಂಡ ಜುಕರ್‌ಬರ್ಗ್

ಸೋಮವಾರ ಸಂಜೆ ಕೆಲವು ಗಂಟೆಗಳ ಕಾಲ ಫೇಸ್‌ಬುಕ್ ಒಡೆತನದ ನಾಲ್ಕು ಸಾಮಾಜಿಕ ಜಾಲತಾಣಗಳು ಸಮಸ್ಯೆ ಎದುರಿಸಿದ್ದವು. ಈ ಅಲ್ಪಾವಧಿಯಲ್ಲಿಯೇ ಅವುಗಳ ಮಾಲೀಕ ಮಾರ್ಕ್ ಜುಕರ್‌ಬರ್ಗ್ 6 ಬಿಲಿಯನ್ ಡಾಲರ್ ಸಂಪತ್ತು ಕಳೆದುಕೊಂಡಿದ್ದಾರೆ.

ಕೈಕೊಟ್ಟ ಫೇಸ್‌ಬುಕ್, ವಾಟ್ಸಾಪ್: ಕೆಲವೇ ಗಂಟೆಗಳಲ್ಲಿ 6 ಬಿಲಿಯನ್ ಡಾಲರ್ ಕಳೆದುಕೊಂಡ ಜುಕರ್‌ಬರ್ಗ್
Linkup
ವಾಷಿಂಗ್ಟನ್: ಸೋಮವಾರ ಸಂಜೆ ಕೆಲವು ಗಂಟೆಗಳ ಕಾಲ ಫೇಸ್‌ಬುಕ್, , ಮೆಸೆಂಜರ್ ಮತ್ತು ಇನ್‌ಸ್ಟಾಗ್ರಾಂಗಳು ಕೆಲಸ ಮಾಡದೆ ಜನರು ಕಂಗಾಲಾಗಿದ್ದರು. ತಮ್ಮ ದೈನಂದಿನ ಚಟುವಟಿಕೆ, ಮನರಂಜನೆ ಮುಂತಾದವುಗಳಿಗೆ ಈ ಸಾಮಾಜಿಕ ಮಾಧ್ಯಮಗಳನ್ನು ಅವಲಂಬಿಸಿರುವ ಜನರಿಗೆ ದಿಕ್ಕೇ ತೋಚದಂತಾಗಿತ್ತು. ಕೊನೆಗೂ ಸಂಸ್ಥೆ ಈ ಸಮಸ್ಯೆಯನ್ನು ಸರಿಪಡಿಸಿದೆ. ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಫೇಸ್‌ಬುಕ್ ಸಂಸ್ಥಾಪಕ ಅವರ ವೈಯಕ್ತಿಕ ಸಂಪತ್ತು ಈ ಕೆಲವೇ ಗಂಟೆಗಳಲ್ಲಿ 7 ಬಿಲಿಯನ್ ಡಾಲರ್ ಕುಸಿದಿದೆ. ಹೀಗಾಗಿ ಸಿರಿವಂತ ವ್ಯಕ್ತಿಗಳ ಪಟ್ಟಿಯಲ್ಲಿ ಜುಕರ್‌ಬರ್ಗ್ ಸ್ಥಾನ ಕುಸಿದಿದೆ. ಫೇಸ್‌ಬುಕ್ ಒಡೆತನದ ಈ ನಾಲ್ಕೂ ತಾಣಗಳ ಡೊಮೈನ್ ನೇಮ್ ಸಿಸ್ಟಂ (ಡಿಎಂಎಸ್) ಸಮಸ್ಯೆ ಕಂಡುಬಂದಿದ್ದರಿಂದ ಈ ಅಡಚಣೆ ಉಂಟಾಗಿತ್ತು. ಇದರಿಂದ ಕೆಲವು ಗಂಟೆಗಳ ಕಾಲ ಈ ತಾಣಗಳು ಕೆಲಸ ಮಾಡುತ್ತಿರಲಿಲ್ಲ. ಈ ಸಮಸ್ಯೆಯಿಂದಾಗಿ ಸೋಮವಾರ ಸಾಮಾಜಿಕ ಮಾಧ್ಯಮ ದಿಗ್ಗಜ ಸಂಸ್ಥೆಯ ಷೇರು ಶೇ 4.9ರಷ್ಟು ಕುಸಿದಿದೆ. ಸೆಪ್ಟೆಂಬರ್ ಮಧ್ಯಭಾಗದಿಂದ ಫೇಸ್‌ಬುಕ್ ಶೇ 15ರಷ್ಟು ಷೇರು ಮೌಲ್ಯ ಕಳೆದುಕೊಂಡಿದೆ. ಈ ಷೇರು ಮಾರುಕಟ್ಟೆಯಲ್ಲಿನ ಕುಸಿತದ ಕಾರಣ ಮಾರ್ಕ್ ಜುಕರ್‌ಬರ್ಗ್ ಅವರ ಒಟ್ಟಾರೆ ಸಂಪತ್ತು ಸೋಮವಾರ 121.6 ಬಿಲಿಯನ್ ಡಾಲರ್‌ಗೆ ಇಳಿದಿದೆ. ಇದರಿಂದ ಬಿಲಿಯನೇರ್ಸ್ ಇಂಡೆಕ್ಸ್‌ನಲ್ಲಿ ಬಿಲ್‌ ಗೇಟ್ಸ್ ಅವರಿಗಿಂತಲೂ ಕೆಳಗಿನ ಸ್ಥಾನಕ್ಕೆ ಕುಸಿದಿದ್ದಾರೆ. ಮಾರ್ಕ್ ಜುಕರ್‌ಬರ್ಗ್ ಬ್ಲೂಮ್‌ಬರ್ಗ್ ಇಂಡೆಕ್ಸ್‌ನಲ್ಲಿ ಐದನೇ ಸ್ಥಾನದಲ್ಲಿದ್ದಾರೆ. 140 ಬಿಲಿಯನ್ ಡಾಲರ್‌ನಷ್ಟಿದ್ದ ಜುಕರ್‌ಬರ್ಗ್ ಸಂಪತ್ತು, ಒಂದೇ ವಾರದ ಅವಧಿಯಲ್ಲಿ ಭಾರಿ ಕುಸಿತ ಕಂಡಿರುವುದನ್ನು ಸೂಚ್ಯಂಕ ತೋರಿಸಿದೆ. ಎಲಾನ್ ಮಸ್ಕ್, ಜೆಫ್ ಬೆಜೋಸ್, ಬರ್ನಾರ್ಡ್ ಅರ್ನಾಲ್ಟ್ ಮತ್ತು ಬಿಲ್ ಗೇಟ್ಸ್ ಅವರು ಕ್ರಮವಾಗಿ ಮೊದಲ ನಾಲ್ಕು ಸ್ಥಾನಗಳಲ್ಲಿದ್ದಾರೆ. ಸೆ. 13ರಂದು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯು ಆಂತರಿಕ ದಾಖಲೆಗಳ ಆಧಾರದಲ್ಲಿ ಸರಣಿ ವರದಿಗಳನ್ನು ಪ್ರಕಟಿಸಿತ್ತು. ತಾಣವು ತರುಣಿಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಅಮೆರಿಕದಲ್ಲಿ ಜನವರಿ 6ರಂದು ಕ್ಯಾಪಿಟಲ್‌ನಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿಗರು ನಡೆಸಿದ್ದ ದಾಂಧಲೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಿದಂತಹ ಸಾರ್ವಜನಿಕ ವಿಚಾರಗಳಂತಹ ತನ್ನ ಉತ್ಪನ್ನಗಳಿಂದ ಉಂಟಾಗುವ ಅನೇಕ ಸಮಸ್ಯೆಗಳ ಬಗ್ಗೆ ವ್ಯಾಪಕ ಮಾಹಿತಿ ಇದ್ದರೂ, ಫೇಸ್‌ಬುಕ್ ಅದನ್ನು ಮುಚ್ಚಿಡುತ್ತಿದೆ ಎಂದು ವರದಿ ಹೇಳಿತ್ತು. ಇದು ಸರ್ಕಾರದ ಗಮನವನ್ನು ಸೆಳೆದಿದೆ. ರಾಜಕೀಯ ಧ್ರುವೀಕರಣ ಸೇರಿದಂತೆ ತನ್ನ ಉತ್ಪನ್ನಗಳು ಎದುರಿಸುತ್ತಿರುವ ಸಮಸ್ಯೆಗಳು ಸಂಕೀರ್ಣವಾಗಿವೆ ಮತ್ತು ತಂತ್ರಜ್ಞಾನ ಒಂದರಿಂದಲೇ ಅದು ಉಂಟಾಗುತ್ತಿಲ್ಲ ಎಂದು ಫೇಸ್‌ಬುಕ್ ಪ್ರತಿಕ್ರಿಯೆ ನೀಡಿತ್ತು. 'ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಮತ್ತು ಮೆಸೆಂಜರ್‌ಗಳು ಈಗ ಆನ್‌ಲೈನ್‌ಗೆ ಮರಳುತ್ತಿವೆ' ಎಂದು ತನ್ನ ಸೇವೆಗಳಲ್ಲಿನ ಸಮಸ್ಯೆ ಬಗೆಹರಿದ ಬಳಿಕ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. 'ಇಂದು ಉಂಟಾದ ಅಡಚಣೆಗೆ ವಿಷಾದಿಸುತ್ತೇನೆ- ನೀವು ಕಾಳಜಿ ವಹಿಸುವ ಜನರೊಂದಿಗೆ ಸಂಪರ್ಕದಲ್ಲಿರಲು ನೀವು ಎಷ್ಟರಮಟ್ಟಿಗೆ ನಮ್ಮ ಸೇವೆಗಳನ್ನು ಅವಲಂಬಿಸಿದ್ದೀರಿ ಎನ್ನುವುದು ನಮಗೆ ತಿಳಿದಿದೆ' ಎಂದು ಅವರು ಹೇಳಿದ್ದಾರೆ.