ಚಿಪ್‌ ಉತ್ಪಾದನೆಗೆ ತೈವಾನ್‌ ಜತೆ ಭಾರತ ಮಾತುಕತೆ, 55,500 ಕೋಟಿ ರೂ. ಹೂಡಿಕೆ ಸಂಭವ

ಭಾರತವು ಚಿಪ್‌ಗಳ ಕೊರತೆಯನ್ನು ಬಗೆಹರಿಸಲು ತೈವಾನ್‌ ಜತೆಗೆ ಚಿಪ್‌ಗಳ ಉತ್ಪಾದನೆಗೆ ಬೃಹತ್‌ ಘಟಕ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಅಂದಾಜು 55,500 ಕೋಟಿ ರೂ. ಮೊತ್ತದ ಒಪ್ಪಂದ ನಿರೀಕ್ಷಿಸಲಾಗಿದೆ.

ಚಿಪ್‌ ಉತ್ಪಾದನೆಗೆ ತೈವಾನ್‌ ಜತೆ ಭಾರತ ಮಾತುಕತೆ, 55,500 ಕೋಟಿ ರೂ. ಹೂಡಿಕೆ ಸಂಭವ
Linkup
ಹೊಸದಿಲ್ಲಿ: ಭಾರತವು ಸೆಮಿಕಂಡಕ್ಟರ್‌ ಅಥವಾ ಚಿಪ್‌ಗಳ ಕೊರತೆಯನ್ನು ಬಗೆಹರಿಸಲು ಜತೆಗೆ ಚಿಪ್‌ಗಳ ಉತ್ಪಾದನೆಗೆ ಬೃಹತ್‌ ಘಟಕ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಒಟ್ಟು 7.5 ಶತಕೋಟಿ ಡಾಲರ್‌ (ಅಂದಾಜು 55,500 ಕೋಟಿ ರೂ.) ಮೊತ್ತದ ಒಪ್ಪಂದ ನಿರೀಕ್ಷಿಸಲಾಗಿದೆ. ಈ ಘಟಕದಿಂದ 5ಜಿ ಸಾಧನಗಳಿಂದ ಎಲೆಕ್ಟ್ರಿಕ್‌ ಕಾರುಗಳ ತನಕ ಎಲ್ಲದಕ್ಕೂ ಚಿಪ್‌ ಪೂರೈಕೆ ನಿರೀಕ್ಷಿಸಲಾಗಿದೆ. ಇತ್ತೀಚೆಗೆ ಈ ಸಂಬಂಧ ಭಾರತ ಮತ್ತು ತೈವಾನ್‌ ಜತೆ ಮಾತುಕತೆ ನಡೆದಿದೆ ಎಂದು ಬ್ಲೂಮ್‌ಬರ್ಗ್‌ ವರದಿ ತಿಳಿಸಿದೆ. ಸೆಮಿಕಂಡಕ್ಟರ್‌ಗಳ ಕೊರತೆ ಬಗ್ಗೆ ಜಾಗತಿಕ ನಾಯಕರು ಕಳವಳ ವ್ಯಕ್ತಪಡಿಸಿದ್ದು, ಪರಿಹಾರೋಪಾಯದ ಹುಡುಕಾಟದಲ್ಲಿದ್ದಾರೆ. ಇದು ಉತ್ಪಾದನೆ ಮತ್ತು ಮಾರಾಟದ ಮೇಲೆ ಪ್ರಭಾವ ಬೀರಿದ್ದು, ತಕ್ಷಣದ ಪರಿಹಾರ ಇನ್ನೂ ಸಿಕ್ಕಿಲ್ಲ. ಕಾರು, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌, ಗೇಮಿಂಗ್‌ ಇತ್ಯಾದಿ ಸಾಧನಗಳಲ್ಲಿ ಚಿಪ್‌ ಬಳಕೆಯಾಗುತ್ತದೆ. ಚಿಪ್‌ಗಳ ಉತ್ಪಾದನೆಯನ್ನು ತಕ್ಷಣಕ್ಕೆ ಆರಂಭಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆ ಕೆಲವು ತಿಂಗಳುಗಳ ಕಾಲಾವಕಾಶ ಬೇಕಾಗುತ್ತದೆ. ತೈವಾನ್‌ ಸೆಮಿಕಂಡಕ್ಟರ್‌ ಮಾನ್ಯುಫ್ಯಾಕ್ಚರಿಂಗ್‌ ಕಾರ್ಪೊರೇಷನ್‌ (ಟಿಎಸ್‌ಎಂಸಿ) ವಿಶ್ವದ ಅತಿ ದೊಡ್ಡ ಚಿಪ್‌ ಉತ್ಪಾದಕವಾಗಿದೆ. ಕ್ವಾಲ್‌ಕಾಮ್‌, ನಿವಿಡಾ, ಆ್ಯಪಲ್‌ ಇತ್ಯಾದಿ ಪ್ರಮುಖ ಗ್ರಾಹಕರನ್ನು ಈ ಸಂಸ್ಥೆ ಹೊಂದಿದೆ. ಸೆಮಿಕಂಡಕ್ಟರ್‌ ಪೂರೈಕೆಯ ಕೊರತೆಗೆ ಅಮೆರಿಕ - ಚೀನಾ ಸಂಘರ್ಷವೂ ಕಾರಣವಾಗಿದೆ. ಏಕೆಂದರೆ ಅಮೆರಿಕದ ಹಲವಾರು ಕಂಪನಿಗಳು ಚೀನಾದ ಕಂಪನಿಗಳ ಜತೆಗೆ ಕಾರ್ಯನಿರ್ವಹಿಸುತ್ತಿವೆ. ಉದಾಹರಣೆಗೆ ಹುವೈ ಕಂಪನಿಯು ಅಮೆರಿಕದ ಕಂಪನಿಗಳಿಗೆ ಚಿಪ್‌ ತಯಾರಕರಿಗೆ ಬೇಕಾದ ಸಾಮಾಗ್ರಿಗಳನ್ನು ಒದಗಿಸುತ್ತದೆ. ಆದರೆ ಹುವೈ ಕಂಪನಿಯನ್ನು ಅಮೆರಿಕ ಸರಕಾರವು ನಿರ್ಬಂಧಿಸಿದೆ. ಭಾರತದಲ್ಲಿ ಮಾರುತಿ ಸುಜುಕಿ ಸೆಪ್ಟೆಂಬರ್‌ನಲ್ಲಿ ಚಿಪ್‌ಗಳ ಕೊರತೆಯಿಂದ ಉತ್ಪಾದನೆಯಲ್ಲಿ ಶೇ. 69ರಷ್ಟು ಕಡಿತಗೊಳಿಸಿತ್ತು. ಚಿಪ್‌ಗಲ ಕೊರತೆಯು ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಉತ್ಪಾದನೆಗಳ ಮೇಲೂ ಪ್ರತಿಕೂಲ ಪ್ರಭಾವ ಬೀರಿದೆ. ಐಫೋನ್‌ಗಳ ಮಾರಾಟದಲ್ಲೂ ವ್ಯತ್ಯಯ ಆಗಿದೆ ಎಂದು ಆ್ಯಪಲ್‌ ಸಿಇಒ ಟಿಮ್‌ ಕುಕ್‌ ಇತ್ತೀಚೆಗೆ ಹೇಳಿದ್ದರು. ದಕ್ಷಿಣ ಕೊರಿಯಾದ ಅತಿ ದೊಡ್ಡ ತಂತ್ರಜ್ಞಾನ ಕಂಪನಿ ಸ್ಯಾಮ್‌ಸಂಗ್‌ ಗ್ರೂಪ್‌ ಮುಂದಿನ 3 ವರ್ಷಗಳಲ್ಲಿ 206 ಶತಕೋಟಿ ಡಾಲರ್‌ಗಳನ್ನು (ಅಂದಾಜು 15 ಲಕ್ಷ ಕೋಟಿ ರೂ.) ಕೃತಕ ಬುದ್ಧಿಮತ್ತೆ, ಜೈವಿಕ ಔಷಧ, ಸೆಮಿಕಂಡಕ್ಟರ್‌, ರೊಬಾಟಿಕ್ಸ್‌ ವಲಯದಲ್ಲಿ ಹೂಡಿಕೆ ಮಾಡುವುದಾಗಿ ತಿಳಿಸಿದೆ. ಹಲವಾರು ತಂತ್ರಜ್ಞಾನ ಕಂಪನಿಗಳು ತಮ್ಮದೇ ಚಿಪ್‌ ಘಟಕಗಳ ಸ್ಥಾಪನೆಗೆ ಮುಂದಾಗಿದ್ದು, ಭವಿಷ್ಯದಲ್ಲಿ ಆಗದಂತೆ ನೋಡಿಕೊಳ್ಳಲು ಮುಂದಾಗಿವೆ.