ಅಡಕೆಗೆ ಭರ್ಜರಿ ಬೆಲೆ; ಟಾಪ್‌ ಕ್ವಾಲಿಟಿಗೆ 48 ಸಾವಿರ ಧಾರಣೆ, ಸ್ಟಾಕ್‌ ಮಾಡಿದ್ದ ರೈತರಿಗೆ ಜಾಕ್‌ಪಾಟ್‌

ಅಡಕೆ ಧಾರಣೆ ಮೂರು ತಿಂಗಳಿಂದ ನಿರಂತರ ಏರಿಕೆ ಆಗಿ ಈಗ 48 ಸಾವಿರ ಮುಟ್ಟಿ ಸ್ಟಾಕ್‌ ಮಾಡಿದ ರೈತರಿಗೆ ಜಾಕ್‌ಪಾಟ್‌ ಹೊಡೆದಿದೆ. ಎರಡು ವರ್ಷಗಳಿಂದ ಕೊರೊನಾ ಕಾಡುತ್ತಿದ್ದು ಎಲ್ಲ ವ್ಯಾಪಾರ ಡಲ್‌ ಹೊಡೆದಿದ್ದರೆ, ಅಡಕೆ ಮಾರುಕಟ್ಟೆಗೆ ಮಾತ್ರ ಯಾವುದೇ ಪೆಟ್ಟು ಬಿದ್ದಂತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಅಡಕೆ ಧಾರಣೆಯ ಸ್ಥಿರತೆ ಜತೆ ಉತ್ತಮ ಬೆಲೆಯಿಂದ ರೈತರು ಈ ವಾಣಿಜ್ಯ ಬೆಳೆಯಾದ ಅಡಕೆಯತ್ತ ವಾಲುತ್ತಿದ್ದಾರೆ.

ಅಡಕೆಗೆ ಭರ್ಜರಿ ಬೆಲೆ; ಟಾಪ್‌ ಕ್ವಾಲಿಟಿಗೆ 48 ಸಾವಿರ ಧಾರಣೆ, ಸ್ಟಾಕ್‌ ಮಾಡಿದ್ದ ರೈತರಿಗೆ ಜಾಕ್‌ಪಾಟ್‌
Linkup
ಸತೀಶ್‌ ಎಂ.ಪವಾರ್‌ ಚನ್ನಗಿರಿ: ಕೊರೊನಾತಂಕದಲ್ಲೂ ಅಡಕೆಗೆ ಭರ್ಜರಿ ಬೆಲೆ ದೊರೆಯುತ್ತಿದ್ದು ಅಡಕೆ ನಾಡು ಚನ್ನಗಿರಿ ತಾಲೂಕಲ್ಲಿ ಸಂಭ್ರಮ ಮನೆ ಮಾಡಿದೆ. ಮೂರು ತಿಂಗಳಿಂದ ನಿರಂತರ ಏರಿಕೆ ಆಗಿ ಈಗ 48 ಸಾವಿರ ಮುಟ್ಟಿ ಸ್ಟಾಕ್‌ ಮಾಡಿದ ರೈತರಿಗೆ ಜಾಕ್‌ಪಾಟ್‌ ಹೊಡೆದಿದೆ. ಅಡಕೆ ಬೆಲೆ ದಿನೇ ದಿನೇ ಏರುತ್ತಿದ್ದು ಸೋಮವಾರ ಮಾರುಕಟ್ಟೆಯಲ್ಲಿ 47 ಸಾವಿರ ರೂ.ಇತ್ತು. ಆದರೆ, ಬುಧವಾರ ಟಾಪ್‌ ಕ್ವಾಲಿಟಿಗೆ 48 ಸಾವಿರ ರೂ. ಇದ್ದರೆ, ಸರಾಸರಿ 47900 ರೂ. ಧಾರಣೆ ದಾಖಲಾಗಿದೆ. ಬೆಲೆ ಈ ರೀತಿ ಏರಿಕೆ ಆಗುತ್ತಿರುವುದು ಬೆಳೆಗಾರರ ಹರ್ಷಕ್ಕೆ ಕಾರಣವಾಗಿದೆಯಾದರೂ ಎಷ್ಟು ದಿನ ಈ ಬೆಲೆ ಸಿಗಲಿದೆ ಎಂಬ ಆತಂಕವೂ ಮುಂದುವರಿದಿದೆ. ಎರಡು ವರ್ಷಗಳಿಂದ ಕೊರೊನಾ ಕಾಡುತ್ತಿದ್ದು ಎಲ್ಲ ವ್ಯಾಪಾರ ಡಲ್‌ ಹೊಡೆದಿದ್ದರೆ, ಅಡಕೆ ಮಾರುಕಟ್ಟೆಗೆ ಮಾತ್ರ ಯಾವುದೇ ಪೆಟ್ಟು ಬಿದ್ದಂತಿಲ್ಲ. ಕಳೆದ ನಾಲ್ಕೈದು ವರ್ಷಗಳಿಂದ ಅಡಕೆ ಧಾರಣೆಯ ಸ್ಥಿರತೆ ಜತೆ ಉತ್ತಮ ಬೆಲೆಯಿಂದ ರೈತರು ಈ ವಾಣಿಜ್ಯ ಬೆಳೆಯಾದ ಅಡಕೆಯತ್ತ ವಾಲುತ್ತಿದ್ದಾರೆ. 16 ಸಾವಿರ ಚೀಲ ದಾಸ್ತಾನು:ಕಳೆದ ಮೂರ್ನಾಲ್ಕು ತಿಂಗಳಿಂದಲೂ ಕ್ವಿಂಟಾಲ್‌ ರಾಶಿ, ಬೆಟ್ಟೆ ಅಡಕೆಗೆ 35 ರಿಂದ 40 ಸಾವಿರ ದರ ಸಿಕ್ಕಿದೆ. ಹಾಗಾಗಿ ಬಹುತೇಕ ರೈತರು ಅಡಕೆ ಸ್ಟಾಕ್‌ ಮಾಡದೆ ಮಾರಾಟ ಮಾಡಿದ್ದಾರೆ. ಅಡಕೆ ನಾಡು ಚನ್ನಗಿರಿಯ ಪ್ರಾತಿನಿಧಿಕ ಸಂಸ್ಥೆ ತುಮ್‌ಕೋಸ್‌ನಲ್ಲಿ ಹಿಂದಿನ ವರ್ಷ ಇದೇ ದಿನ 21 ಸಾವಿರ ಚೀಲ ಅಡಕೆ ದಾಸ್ತಾನಿತ್ತು. ಈ ಬಾರಿ 16 ಸಾವಿರ ಚೀಲ ದಾಸ್ತಾನಿದೆ. ಸ್ಟಾಕ್‌ ಮಾಡಿದವರಿಗೆ ಬಂಪರ್‌ ಬೆಲೆ ಎಂಬಂತಾಗಿದೆ. ಬಯಲು ಸೀಮೆಯಲ್ಲಿ ಈ ವರ್ಷದ ಕೊಯ್ಲುಈಗ ಆರಂಭ ಆಗಿದ್ದು ಸಣ್ಣ ಪ್ರಮಾಣದಲ್ಲಿ ಅಡಕೆ ಸಿಗುತ್ತದೆ. ಅಕ್ಟೋಬರ್‌ ತಿಂಗಳಲ್ಲಿ ದೊಡ್ಡ ಕೊಯ್ಲು ಇದ್ದು ಹೆಚ್ಚಿನ ಅಡಕೆ ಸಿಗಲಿದೆ. ಇನ್ನು ಮಲೆನಾಡಿನ ಅಡಕೆ ಜನವರಿ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಹಾಗಾಗಿ ಬಯಲು ಸೀಮೆಯ ಅಡಕೆ ಮಾರುಕಟ್ಟೆಗೆ ಆಗಮಿಸಿ ಈಗಿರುವ ಡಿಮ್ಯಾಂಡ್‌ ಪೂರೈಕೆಯಾದರೆ ಮಾತ್ರ ಬೆಲೆಯಲ್ಲಿ ಕೊಂಚ ಇಳಿಕೆ ಆಗಬಹುದು, ಅಲ್ಲಿವರೆಗೂ ಬೆಲೆ ಹೀಗೆ ಮುಂದುವರಿಯಲಿದೆ ಎಂದು ರೈತರು, ಅಡಕೆ ಮಾರುಕಟ್ಟೆಯ ದಲ್ಲಾಲಿಗಳು ಅಂದಾಜಿಸುತ್ತಿದ್ದಾರೆ. ಚನ್ನಗಿರಿ ಅಡಕೆಗೆ ಡಿಮ್ಯಾಂಡ್‌:ಚನ್ನಗಿರಿ ವ್ಯಾಪ್ತಿಯ ಅಡಕೆಗೆ ಪ್ರತಿಷ್ಟಿತ ಗುಟ್ಕಾ ಕಂಪನಿಗಳನ್ನು ಹೊಂದಿರುವ ಕಾನ್ಪುರ ಮತ್ತು ದಿಲ್ಲಿಯ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ದೊರೆಯುತ್ತಿದೆ. ಚನ್ನಗಿರಿಯ ತಮ್‌ಕೋಸ್‌ ಮತ್ತು ಪ್ರತಿಷ್ಠಿತ ಅಡಕೆ ಮಾರಾಟ ಸಂಸ್ಥೆಗಳಾದ ಕ್ಯಾಂಪ್ಕೋ, ಮ್ಯಾಮ್‌ಕೋಸ್‌, ಕಾಗ್ಮಾ ಸಂಸ್ಥೆಗಳು ಮಾತ್ರವಲ್ಲದೇ ಚನ್ನಗಿರಿ ಎಪಿಎಂಸಿ ಅವರಣದಲ್ಲಿ ಹೊರ ರಾಜ್ಯಗಳಲ್ಲಿ ಉತ್ತಮ ವ್ಯಾಪಾರ ವೃದ್ದಿಸಿಕೊಂಡಿರುವ ಸುಮಾರು 41 ಜನ ಟ್ರೇಡರ್ಸ್, ಭೀಮಸಮುದ್ರ, ಶಿವಮೊಗ್ಗ ಮಂಡಿಗಳ ಟ್ರೇಡರ್‌ಗಳು ಟೆಂಡರ್‌ಗಳಲ್ಲಿ ಭಾಗವಹಿಸುತ್ತಿರುವುದು ಉತ್ತಮ ಧಾರಣೆಗೆ ಕಾರಣ ಆಗುತ್ತಿದೆ ಎನ್ನುತ್ತಿದೆ ಮಾರುಕಟ್ಟೆ. ತುಮ್‌ಕೋಸ್‌ ಮತ್ತು ಸಹ ಸಂಸ್ಥೆಗಳಲ್ಲಿ ವಾರದಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಟೆಂಡರ್‌ಗಳು ನಡೆಯುತ್ತಿದ್ದು ಬುಧವಾರ ಟಾಪ್‌ ಕ್ವಾಲಿಟಿ ಅಡಕೆಗೆ 48 ಸಾವಿರ ಧಾರಣೆ ಸಿಕ್ಕಿದೆ. ಹೊರಬಾಗದಲ್ಲಿ ಕೈ ವ್ಯಾಪಾರದಲ್ಲಿ 50 ಸಾವಿರದವರೆಗೂ ಖರೀದಿ ಮಾಡಲಾಗುತ್ತಿದೆ. ಹೆಚ್ಚುತ್ತಿದೆ ಅಡಕೆ:ಅಡಕೆಗೆ ಉತ್ತಮ ಬೆಲೆ ಸಿಗುತ್ತಿರುವ ಕಾರಣಕ್ಕೆ ಎಲ್ಲೆಡೆ ಈ ಬೆಳೆ ಹೆಚ್ಚುತ್ತಿದೆ. ತೋಟಗಾರಿಕೆ ಇಲಾಖೆ ಅಂಕಿಸಂಖ್ಯೆ ಪ್ರಕಾರ ಜಿಲ್ಲೆಒಂದರಲ್ಲಿಯೇ ಕಳೆದ ಎರಡು ವರ್ಷದಲ್ಲಿ 15 ಸಾವಿರ ಹೆಕ್ಟೇರ್‌ ಹೆಚ್ಚಳವಾಗಿದ್ದು, 75 ಸಾವಿರ ಹೆಕ್ಟೇರ್‌ ಮುಟ್ಟಿದೆ. ಇದರಲ್ಲಿ ಚನ್ನಗಿರಿ ತಾಲೂಕು ಒಂದರಲ್ಲಿ 40 ಸಾವಿರ ಹೆಕ್ಟೇರ್‌ಗೆ ಹೆಚ್ಚು ಅಡಕೆ ಬೆಳೆಯಿದೆ. ಈ ತಾಲೂಕಿನಲ್ಲಿ ಅಡಕೆ ಬೆಳೆಗಾರರ ಸ್ನೇಹಿಯಾಗಿರುವ ತುಮ್‌ಕೋಸ್‌ 13,600 ಜನರ ಶೇರು ಹೊಂದಿದೆ. ರೈತರಿಗೆ 280 ಕೋಟಿ ರೂ. ಸಾಲ ಸೌಲಭ್ಯ ನೀಡಿ ಬೆಳೆಗಾರರು ಪ್ರೋತ್ಸಾಹಿಸುತ್ತಿದೆ. ಅಡಕೆ ಬೆಲೆ ಸ್ಥಿರತೆಗೆ ಕೆಲಸವನ್ನೂ ಸಂಸ್ಥೆ ಮಾಡುತ್ತಿದೆ.