![](https://vijaykarnataka.com/photo/84554981/photo-84554981.jpg)
ನವದೆಹಲಿ: ಭಾರತದಲ್ಲಿ ವ್ಯವಹಾರಗಳಿಗೆ ಕಾನೂನಾತ್ಮಕ ಚೌಕಟ್ಟು ಒದಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಚಿಂತನೆ ನಡೆಸಿದೆ. ಇಷ್ಟೇ ಅಲ್ಲದೆ ಕ್ರಿಪ್ಟೋಕರೆನ್ಸಿ ಮಸೂದೆ ಕೂಡ ಸಿದ್ಧವಾಗಿದ್ದು, ಸಂಸತ್ತಿನಲ್ಲಿ ಮಂಡನೆಯಾಗುವುದು ಬಾಕಿ ಇದೆ.
ಇದೇ ಸಂದರ್ಭದಲ್ಲಿ ಕ್ರಿಪ್ಟೋಕರೆನ್ಸಿ ವ್ಯವಹಾರ ನಿರ್ವಹಿಸುವ 'ಕ್ಯಾಶಾ' ಸಂಸ್ಥೆಯು ದೇಶದಲ್ಲಿ ತನ್ನ ಚಟುವಟಿಕೆಗಳನ್ನು ಆರಂಭಿಸಲು ನಿರ್ಧರಿಸಿದೆ. ಸಹಕಾರಿ ಬ್ಯಾಂಕ್‌ಗಳ ಸಹಯೋಗದೊಂದಿಗೆ ಭಾರತದಲ್ಲಿ ಮುಂದಿನ ತಿಂಗಳಿನಿಂದ ಕಾನೂನುಬದ್ಧ ಕ್ರಿಪ್ಟೋಕರೆನ್ಸಿ ವ್ಯವಹಾರಗಳನ್ನು ನಡೆಸಲು ಮುಂದಾಗಿರುವುದು ಆರ್ಥಿಕ ವಲಯದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕಾಶಾ ಸಂಸ್ಥೆಯು ತನ್ನ ಮೂಲಕ 'ಯೂನಿಕಾಸ್' ಎಂಬ ವಿಶ್ವದ ಮೊದಲ ಕ್ರಿಪ್ಟೋಕರೆನ್ಸಿ ಬ್ಯಾಂಕೊಂದನ್ನು ಆರಂಭಿಸಿದೆ. ಈ ಬ್ಯಾಂಕ್‌ನ ಶಾಖೆಗಳನ್ನು ಭಾರತದಲ್ಲೂ ತೆರೆಯಲು ನಿರ್ಧರಿಸಿರುವುದಾಗಿ ಕ್ಯಾಶಾದ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಕ ಕುಮಾರ್ ಗೌರವ್ ತಿಳಿಸಿದ್ದಾರೆ.
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಪ್ರಧಾನ ಕಚೇರಿ ಹೊಂದಿರುವ ಯುನೈಟೆಡ್ ಮಲ್ಟಿಸ್ಟೇಟ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಮೂಲಕವೇ ಭಾರತದಲ್ಲಿ ವ್ಯವಹಾರ ನಡೆಸುವ ಯೋಜನೆ ಹೊಂದಿದ್ದೇವೆ. ಕ್ರಿಪ್ಟೋಕರೆನ್ಸಿ ಕುರಿತ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಜಾರಿಗೊಳಿಸುವ ಸಾಧ್ಯತೆಯಿದೆ. ಅದನ್ನು ನೋಡಿಕೊಂಡು ಮುಂದುವರಿಯುತ್ತೇವೆ' ಎಂದು ಅವರು ತಿಳಿಸಿದ್ದಾರೆ.
ಭಾರತದಲ್ಲಿ ಯೂನಿಕಾಸ್ ಸಂಸ್ಥೆಯ ಶಾಖೆಗಳನ್ನು ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್‌ನ ಅನುಮತಿ ಪಡೆಯಲಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, 'ಈಗಾಗಲೇ ರಿಜಿಸ್ಟ್ರಾರ್ ಆಫ್ ಸೊಸೈಟೀಸ್ ಅಡಿಯಲ್ಲಿ 'ಯುನೈಟೆಡ್ ಮಲ್ಟಿಸ್ಟೇಟ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ' ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ಕ್ರೆಡಿಟ್ ಕೊ-ಆಪರೇಟಿವ್ ಸಂಸ್ಥೆಗಳ ಕಾರ್ಯವೈಖರಿ, ಬ್ಯಾಂಕುಗಳ ಕಾರ್ಯವೈಖರಿಗಿಂತ ಭಿನ್ನ. ಹಾಗಾಗಿ, ಆರ್‌ಬಿಐನ ಪ್ರತ್ಯೇಕ ಅನುಮತಿ ಬೇಕಿಲ್ಲ' ಎಂದಿದ್ದಾರೆ.