ಎಷ್ಟಾದರೂ ರಂಗ ರಚಿಸಿಕೊಳ್ಳಿ, ಮೋದಿ ಮಾತ್ರ ನಂ 1: ವಿಪಕ್ಷಗಳಿಗೆ ಅಠಾವಳೆ ಟಾಂಗ್!

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಮದಾಸ್ ಅಠಾವಳೆ, ವಿಪಕ್ಷಗಳು ಎಷ್ಟು ಬೇಕಾದರೂ ರಂಗ ರಚಿಸಿಕೊಳ್ಳಲಿ ಪ್ರಧಾನಿ ಮೋದಿ ಈ ದೇಶದ ನಂ.1 ನಾಯಕ ಎಂದು ಹೇಳಿದ್ದಾರೆ.

ಎಷ್ಟಾದರೂ ರಂಗ ರಚಿಸಿಕೊಳ್ಳಿ, ಮೋದಿ ಮಾತ್ರ ನಂ 1: ವಿಪಕ್ಷಗಳಿಗೆ ಅಠಾವಳೆ ಟಾಂಗ್!
Linkup
ಹೊಸದಿಲ್ಲಿ: 'ಮಿಷನ್ 2024' ಅಡಿಯಲ್ಲಿ ಮತ್ತು ಬಿಜೆಪಿ ವಿರುದ್ಧ ಒಂದಾಗುತ್ತಿರುವ ವಿಪಕ್ಷಗಳಿಗೆ, ಕೇಂದ್ರ ಸಚಿವ ಟಾಂಗ್ ನೀಡಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ರಾಷ್ಟ್ರ ಮಂಚ್ ಸ್ಥಾಪಕ ಅಧ್ಯಕ್ಷ ಯಶ್ವಂತ್ ಸಿನ್ಹಾ ನೇತೃತ್ವದಲ್ಲಿ ನಡೆದ ವಿಪಕ್ಷಗಳ ಸಭೆ ಕುರಿತು ಕೇಳಲಾದ ಪ್ರಶ್ನೆಗೆ, ವಿಪಕ್ಷಗಳು ಎಷ್ಟು ಬೇಕಾದರೂ ರಂಗ ರಚಿಸಿಕೊಳ್ಳಲಿ ಪ್ರಧಾನಿ ಮೋದಿ ಈ ದೇಶದ ನಂ.1 ನಾಯಕ ಎಂದು ರಾಮದಾಸ್ ಅಠಾವಳೆ ಹೇಳಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಯಾರೇ ಸ್ಪರ್ಧಿಸಿದರೂ, ಈ ದೇಶದ ಜನರ ಆಯ್ಕೆ ಪ್ರಧಾನಿ ಮೋದಿ ಅವರನ್ನೇ ಆಯ್ಕೆ ಮಾಡುತ್ತಾರೆ. ಮೋದಿ ಈ ದೇಶದ ನಂ.1 ನಾಯಕ ಎಂದು ಅಠಾವಳೆ ಹೇಳಿದ್ದಾರೆ. ವಿಪಕ್ಷಗಳು 2024ರ ಲೋಕಸಭೆ ಚುನಾವಣೆಯನ್ನು ಗೆಲ್ಲವು ಹಗಲು ಕನಸು ಕಾಣುತ್ತಿವೆ. ಆದರೆ ಈ ಹಿಂದಿನ ಎರಡು ಲೋಕಸಭಾ ಚುನಾವಣೆಗಳಂತೆ ವಿಪಕ್ಷಗಳು ಧೂಳಿಪಟವಾಗಲಿವೆ ಎಂದು ಅಠಾವಳೆ ಭರವಸೆ ವ್ಯಕ್ತಪಡಿಸಿದರು. ಒಂದು ವೇಳೆ ಮೋದಿ ವಿರೋಧಿ ರಂಗ ರಚನೆಯಾದರೂ ಕಾಂಗ್ರೆಸ್ ಆ ರಂಗವನ್ನು ನಾಶ ಮಾಡುವ ಹುನ್ನಾರ ಆರಂಭಿಸಲಿದೆ. ಬಿಜೆಪಿಗೆ ಪ್ರತಿಸ್ಪರ್ಧಿಯಾಗಿ ತನ್ನನ್ನು ಹೊರತುಪಡಿಸಿ ಕಾಂಗ್ರೆಸ್ ಬೇರೆ ಯಾವುದೇ ಪಕ್ಷವನ್ನು ನೋಡಲು ಬಯಸುವುದಿಲ್ಲ ಎಂದು ಅಠಾವಳೆ ಅಭಿಪ್ರಾಯಪಟ್ಟಿದ್ದಾರೆ. ತಮಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮೇಲೆ ಅಪಾರ ಗೌರವವಿದೆ. ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅದರೆ ಅವರಾಗಲಿ ಅವರ ಪಕ್ಷವಾಗಲಿ ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದೆ. ಇನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಈ ರಂಗವನ್ನು ಸೇರಲಿದೆ ಎಂದು ತಮಗೆ ಅನಿಸುವುದಿಲ್ಲ ಎಂದು ಅಠಾವಳೆ ಹೇಳಿದ್ದಾರೆ. ಇನ್ನು ಚುನಾವಣಾ ರಣನೀತಿ ತಜ್ಞ ಪ್ರಶಾಂತ್ ಕಿಶೋರ್ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಠಾವಳೆ, 2019 ರ ಲೋಕಸಭೆ ಚುನಾವಣೆಯಲ್ಲಿ ಅವರ ಸಹಾಕರ ಇಲ್ಲದೆಯೂ ಎನ್‌ಡಿಎ 303 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ನುಡಿದರು. ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರೂ ಮೈತ್ರಿ ಸಾಧಿಸಿ ಚುನಾವಣೆ ಎದುರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಪ್ರಧಾನಿ ಮೋದಿ ಅವರನ್ನು ಸೋಳಿಸುವ ಛಾತಿಯುಳ್ಳ ಯಾವುದೇ ನಾಯಕ ರಾಷ್ಟ್ರ ರಾಜಕಾರಣದಲ್ಲಿ ಕಾಣಿಸುತ್ತಿಲ್ಲ ಎಂದು ಅಠಾವಳೆ ಹೇಳಿದ್ದಾರೆ.