ಎಪಿಎಂಸಿ ಆದಾಯ 60% ಕುಸಿತ, 50% ಉದ್ಯೋಗಿಗಳ ಕೆಲಸ ಖೋತಾ!

​ಕ​ರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಕಾಯಿದೆಗೆ ತಿದ್ದುಪಡಿ ತಂದ ಪರಿಣಾಮ ಪ್ರಸಕ್ತ ಸಾಲಿನಲ್ಲಿ ಎಪಿಎಂಸಿಗಳ ಆದಾಯ ಶೇ. 60ಕ್ಕೂ ಹೆಚ್ಚಿನ ಕುಸಿತ ಕಂಡಿದ್ದು, ಶೇ. 50ಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ.

ಎಪಿಎಂಸಿ ಆದಾಯ 60% ಕುಸಿತ, 50% ಉದ್ಯೋಗಿಗಳ ಕೆಲಸ ಖೋತಾ!
Linkup
  • ವೆಂ. ಸುನೀಲ್‌ ಕುಮಾರ್‌
ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಕಾಯಿದೆಗೆ ತಿದ್ದುಪಡಿ ತಂದ ಪರಿಣಾಮ ಪ್ರಸಕ್ತ ಸಾಲಿನಲ್ಲಿ ಶೇ. 60ಕ್ಕೂ ಹೆಚ್ಚಿನ ಆದಾಯ ಕುಸಿತವಾಗಿದ್ದು, ಶೇ. 50ಕ್ಕಿಂತಲೂ ಹೆಚ್ಚಿನ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದಾರೆ. ಕಾಯ್ದೆಯ ತಿದ್ದುಪಡಿ ತಂದಿರುವ ಹಿನ್ನೆಲೆಯಲ್ಲಿ ಎಪಿಎಂಸಿಯ ಅನುಮತಿ ಇಲ್ಲದೆ ಎಲ್ಲಿ ಬೇಕಾದರೂ ಮಾರಾಟ ಅಥವಾ ಖರೀದಿ ಮಾಡಬಹುದಾಗಿದೆ. ಪರಿಣಾಮ, ಎಪಿಎಂಸಿಗಳಿಗೆ ಬರುವ ಆದಾಯ ಭಾರಿ ಪ್ರಮಾಣದಲ್ಲಿ ಕಡಿತಗೊಂಡಿರುವುದು ಕಂಡುಬಂದಿದೆ. ಅದರಲ್ಲಿಯೂ ಪ್ರಮುಖವಾಗಿ ಜಿಲ್ಲಾ ಕೇಂದ್ರ ಕೋಲಾರ ಎಪಿಎಂಸಿ ಹೊರತುಪಡಿಸಿ ಉಳಿದ ನಾಲ್ಕು ಎಪಿಎಂಸಿಗಳಿಗೆ ಬರುವ ಆದಾಯ ಶೇ. 70ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕುಸಿತಗೊಂಡಿದೆ. ಪರಿಣಾಮ, ಎಪಿಎಂಸಿಗಳಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಎಪಿಎಂಸಿಗಳಲ್ಲಿ ಕಂಪ್ಯೂಟರ್‌ ಆಪರೇಟರ್‌, ಭದ್ರತೆ, ಸ್ವಚ್ಛತಾ ಕಾರ್ಯ, ಶುಲ್ಕ ಸಂಗ್ರಹಣೆ ಕೆಲಸ ನಿರ್ವಹಿಸುವ ನೌಕರರ ವೇತನವನ್ನು ಎಪಿಎಂಸಿಗಳ ಆದಾಯದಿಂದಲೇ ಭರಿಸಬೇಕಾಗುತ್ತದೆ. ಆದರೆ, ಮಾರುಕಟ್ಟೆಗಳಿಗೆ ಬರುವ ಆದಾಯ ಕಡಿತವಾಗಿರುವ ಹಿನ್ನೆಲೆಯಲ್ಲಿ ಪ್ರತಿ ಎಪಿಎಂಸಿಗಳಲ್ಲಿ ಐದಾರು ಜನರನ್ನು ಕೆಲಸದಿಂದ ತೆಗೆಯಲಾಗಿದೆ. ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತರುವುದಕ್ಕೂ ಮುನ್ನ ಎಪಿಎಂಸಿ ಆಡಳಿತ ಮಂಡಳಿಗೆ ಮಾರುಕಟ್ಟೆ ಪ್ರಾಂಗಣದೊಳಗೆ ಮತ್ತು ಹೊರಗೆ ನಡೆಯುವ ಕೃಷಿ ಉತ್ಪನ್ನಗಳ ಸಗಟು ವಹಿವಾಟಿಗೆ ಮಾರುಕಟ್ಟೆ ಶುಲ್ಕ ಹಾಗೂ ಬಳಕೆದಾರರ ಶುಲ್ಕ (ಸೆಸ್‌) ಸಂಗ್ರಹಿಸಲು ಅವಕಾಶವಿತ್ತು. ಕಾಯಿದೆ ತಿದ್ದುಪಡಿ ನಂತರ ಆಡಳಿತ ಮಂಡಳಿಗೆ ಮಾರುಕಟ್ಟೆ ಪ್ರಾಂಗಣದ ಹೊರಗೆ ನಡೆಯುವ ವಹಿವಾಟಿಗೆ ಸೆಸ್‌ ಸಂಗ್ರಹಿಸಲು ಅವಕಾಶ ಇಲ್ಲದಂತಾಗಿದೆ. ಸೆಸ್‌ ಸಂಗ್ರಹಣೆ ಮಾರುಕಟ್ಟೆ ಪ್ರಾಂಗಣದೊಳಗಿನ ವಹಿವಾಟಿಗೆ ಮಾತ್ರ ಸೀಮಿತವಾಗಿರುವ ಕಾರಣಕ್ಕೆ ಆದಾಯ ಕಡಿಮೆಯಾಗಿದೆ. ಮಾರುಕಟ್ಟೆ ಸಮಿತಿಗಳು ಸಂಗ್ರಹ ಮಾಡುವ ಮಾರುಕಟ್ಟೆ ಶುಲ್ಕ ಹಾಗೂ ಬಳಕೆದಾರರ ಶುಲ್ಕದ ಸಂಗ್ರಹವೂ ಕಡಿಮೆಯಾಗಿದೆ. ಇದರ ನಡುವೆಯೇ ಸರಕಾರ ಎರಡೂ ಶುಲ್ಕಗಳನ್ನು ಪರಿಷ್ಕರಿಸಿ ಶೇ. 60ರಷ್ಟು ಶುಲ್ಕ ಪಡೆಯುವಂತೆ ಸೂಚಿಸಿದೆ. ಪರಿಣಾಮ ಎಪಿಎಂಸಿಗಳಿಗೆ ಬರುವ ಆದಾಯ ಭಾರಿ ಪ್ರಮಾಣದಲ್ಲಿ ಕಡಿತಗೊಂಡಿದ್ದು, ಮಾರುಕಟ್ಟೆ ಪ್ರಾಂಗಣದಲ್ಲಿ ಮಾರಾಟ ಮಾಡಿದಾಗ ಮಾತ್ರವೇ ಅವರಿಂದ ಶುಲ್ಕ ಸಂಗ್ರಹಿಸಬೇಕಾಗುತ್ತದೆ. ಪ್ರಾಂಗಣದ ಹೊರಗೆ ಮಾರಾಟ ಅಥವಾ ಖರೀದಿ ಮಾಡಿದರೆ ಅವರಿಂದ ಶುಲ್ಕ ಸಂಗ್ರಹಕ್ಕೆ ಅವಕಾಶವಿಲ್ಲದಂತಾಗಿದೆ. ಇಲ್ಲಿ ಉದಾಹರಣೆಗೆ ಕೋಲಾರದ ಎಪಿಎಂಸಿಗಳ ಪರಿಸ್ಥಿತಿಯನ್ನು ವಿವರಿಸಲಾಗಿದ್ದರೂ, ರಾಜ್ಯಾದ್ಯಂತ ಹೆಚ್ಚು ಕಡಿಮೆ ಎಲ್ಲಾ ಎಪಿಎಂಸಿಗಳ ಪರಿಸ್ಥಿತಿ ಹೀಗೆಯೇ ಇದೆ. ಆದಾಯ ಕುಸಿತದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ನಿರ್ವಹಣೆಯೇ ದುಸ್ತರವಾಗಿದೆ.