ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಟ್ಟಿಲ್ಲ.. ಯೋಗಿ ಆದಿತ್ಯನಾಥ್ ನಾಯಕತ್ವಕ್ಕೆ ಧಕ್ಕೆ ಇಲ್ಲ..!

ಉತ್ತರ ಪ್ರದೇಶ ಸಿಎಂ ಬದಲಾವಣೆ ಇಲ್ಲವಾದ್ರೂ ಸಚಿವ ಸಂಪುಟದಲ್ಲಿ ಕೆಲ ಬದಲಾವಣೆ ಆಗುವುದು ಖಚಿತ. ಹೊಸ ಉತ್ಸಾಹಿ ಶಾಸಕರಿಗೆ ಅವಕಾಶ ನೀಡಿ, ಹಳೆಬರನ್ನು ಪಕ್ಷ ಸಂಘಟನೆಗೆ ನಿಯೋಜಿಸಲಾಗುವುದು ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಹದಗೆಟ್ಟಿಲ್ಲ.. ಯೋಗಿ ಆದಿತ್ಯನಾಥ್ ನಾಯಕತ್ವಕ್ಕೆ ಧಕ್ಕೆ ಇಲ್ಲ..!
Linkup
ಲಖನೌ (): ಚುನಾವಣೆ ಹೊಸ್ತಿಲಲ್ಲಿರುವ ಉತ್ತರಪ್ರದೇಶದಲ್ಲಿ ಸರಕಾರದ ಸಾರಥ್ಯ ಬದಲಿಸುವ ಪ್ರಸ್ತಾಪವನ್ನು ವರಿಷ್ಠರು ಸಾರಾಸಗಟು ತಳ್ಳಿ ಹಾಕಿದ್ದಾರೆ. ಕೋವಿಡ್‌ ನಿರ್ವಹಣೆ ವಿಷಯದಲ್ಲಿ ಯೋಗಿ ಆದಿತ್ಯನಾಥ್‌ ಸರಕಾರ ವಿಫಲಗೊಂಡಿದೆ ಎನ್ನುವ ಕೂಗು ಎದ್ದಿತ್ತು. ಗಂಗಾ ನದಿಯಲ್ಲಿ ಶವಗಳ ರಾಶಿ ಕಾಣಿಸಿಕೊಂಡ ಬಳಿಕ ವ್ಯಾಪಕ ಟೀಕೆಗಳು ಕೇಳಿ ಬಂದಿದ್ದವು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಟೀಕೆಗಳು ದಿಲ್ಲಿ ವರಿಷ್ಠರನ್ನು ಚಿಂತೆಗೀಡುಮಾಡಿದ್ದವು. ಪರಿಸ್ಥಿತಿಯ ಖುದ್ದು ಅವಲೋಕನಕ್ಕಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಮತ್ತು ಕೇಂದ್ರ ಮಾಜಿ ಸಚಿವ ರಾಧಾ ಮೋಹನ್‌ ಸಿಂಗ್‌ ಲಖನೌಗೆ ದೌಡಾಯಿಸಿದ್ದರು. ಎರಡು ದಿನಗಳಿಂದ ಸರಣಿ ಸಭೆ ಹಾಗೂ ಕಾರ್ಯಕರ್ತರ ಜತೆ ಸಮಾಲೋಚನೆ ನಡೆಸಿದ ವರಿಷ್ಠರು, 'ಟೀಕಾಕಾರರು ಹೇಳುವಷ್ಟು ರಾಜ್ಯದ ಪರಿಸ್ಥಿತಿ ಹದಗೆಟ್ಟಿಲ್ಲ. ಯೋಗಿ ಸರಕಾರ ಕೋವಿಡ್‌ ಬಿಕ್ಕಟ್ಟನ್ನು ಸಮರ್ಥವಾಗಿಯೇ ನಿಭಾಯಿಸಿದೆ. ಅವರ ನಾಯಕತ್ವದಲ್ಲಿಯೇ ಪಕ್ಷ ಮುಂದಿನ ಚುನಾವಣೆ ಎದುರಿಸಲಿದೆ' ಎಂದು ಸ್ಪಷ್ಟ ಪಡಿಸಿದರು. ಕೋಮು ಗಲಭೆ, ಕೊಲೆ, ಸುಲಿಗೆ, ಭ್ರಷ್ಟಾಚಾರದಂತಹ ಅಹಿತಕರ ಬೆಳವಣಿಗೆಗಳಿಂದ ರೋಸಿ ಹೋಗಿದ್ದ ರಾಜ್ಯಕ್ಕೆ ಕಳೆದ ನಾಲ್ಕೂವರೆ ವರ್ಷಗಳಿಂದ ಯೋಗಿ ಆದಿತ್ಯನಾಥ್‌ ಸರಕಾರ ನೆಮ್ಮದಿಯ ಆಡಳಿತ ನೀಡಿದೆ. ಅಭಿವೃದ್ಧಿ ವಿಷಯದಲ್ಲೂ ಮುಂಚೂಣಿ ಸಾಧನೆ ಮಾಡಿದೆ. ಹೊಸ ಮಾದರಿಯ ಆಡಳಿತದ ಮೂಲಕ ಜನ ಮೆಚ್ಚುಗೆ ಗಳಿಸಿರುವ ಯೋಗಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಅಚಲ ಬೆಂಬಲ ಇದೆ. ಈ ಹೊತ್ತಿನಲ್ಲಿ ಬದಲಾವಣೆ ಸಾಧ್ಯವೇ ಇಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. 'ಆದರೆ ಸಂಪುಟದಲ್ಲಿ ಬದಲಾವಣೆ ಆಗುವುದು ಖಚಿತ. ಹೊಸ ಉತ್ಸಾಹಿ ಶಾಸಕರಿಗೆ ಅವಕಾಶ ನೀಡಿ, ಹಳೆಬರನ್ನು ಪಕ್ಷ ಸಂಘಟನೆಗೆ ನಿಯೋಜಿಸಲಾಗುವುದು' ಎಂದು ರಾಜ್ಯದ ಹಿರಿಯ ಸಚಿವರೊಬ್ಬರು ತಿಳಿಸಿದ್ದಾರೆ.