ದೊಡ್ಡ ಮಟ್ಟದಲ್ಲಿ ಲಸಿಕೆ ಪೂರೈಕೆ ಹೆಚ್ಚಿಸಲು ನಿರಂತರ ಪ್ರಯತ್ನ: ಪ್ರಧಾನಿ ನರೇಂದ್ರ ಮೋದಿ

ದೇಶದಾದ್ಯಂತ ಕೋವಿಡ್ ಲಸಿಕೆಗೆ ತೀವ್ರ ಕೊರತೆ ಉಂಟಾಗಿರುವ ನಡುವೆ ಭರವಸೆಯ ಮಾತನ್ನಾಡಿರುವ ಪ್ರಧಾನಿ ನರೇಂದ್ರ ಮೋದಿ, ಲಸಿಕೆ ಪೂರೈಕೆಯನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ದೊಡ್ಡ ಮಟ್ಟದಲ್ಲಿ ಲಸಿಕೆ ಪೂರೈಕೆ ಹೆಚ್ಚಿಸಲು ನಿರಂತರ ಪ್ರಯತ್ನ: ಪ್ರಧಾನಿ ನರೇಂದ್ರ ಮೋದಿ
Linkup
ಹೊಸದಿಲ್ಲಿ: ಲಸಿಕೆ ಪೂರೈಕೆಯನ್ನು ಬೃಹತ್ ಮಟ್ಟದಲ್ಲಿ ಹೆಚ್ಚಿಸಲು ನಿರಂತರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಪ್ರಧಾನಿ ಮಂಗಳವಾರ ತಿಳಿಸಿದ್ದಾರೆ. ಎಲ್ಲ ರಾಜ್ಯಗಳಲ್ಲಿಯೂ ಕೋವಿಡ್ ಲಸಿಕೆಯ ಕೊರತೆ ಉಂಟಾಗಿದ್ದು, ಜನರು ಪ್ರತಿದಿನ ಗಂಟೆಗಟ್ಟಲೆ ಸರದಿಯಲ್ಲಿ ನಿಂತು ಲಸಿಕೆ ಸಿಗದೆ ನಿರಾಶೆ ಅನುಭವಿಸುತ್ತಿರುವುದರ ನಡುವೆ ಪ್ರಧಾನಿ ಈ ಭರವಸೆ ನೀಡಿದ್ದಾರೆ. 'ಇದೆಲ್ಲದರ ನಡುವೆಯೂ ಲಸಿಕೆ ಕಾರ್ಯಕ್ರಮ ಮುಂದುವರಿಯಲಿದೆ ಮತ್ತು ನೀವೆಲ್ಲರೂ ಲಸಿಕೆ ಡೋಸ್ ವ್ಯರ್ಥವಾಗದಂತೆ ನೋಡಿಕೊಳ್ಳಬೇಕು. ಉತ್ತಮ ಅಭ್ಯಾಸಗಳನ್ನು ಪಾಲಿಸಿದರೆ ಲಸಿಕೆಯ ವ್ಯರ್ಥವಾಗುವುದನ್ನು ತಗ್ಗಿಸಬಹುದು. ನೀವೆಲ್ಲರೂ ಮಾತ್ರವಲ್ಲ, ಈ ಪ್ರಯತ್ನದ ಎಲ್ಲ ವಿಭಾಗಗಳ ಮುಖ್ಯಸ್ಥರು ಮತ್ತು ನಿಮ್ಮ ಪ್ರಯತ್ನಗಳು ಈ ವಿಚಾರದಲ್ಲಿ ದೋಷರಹಿತವಾಗಿರಬೇಕು' ಎಂದು ಅವರು ಸೂಚಿಸಿದ್ದಾರೆ. ನಿರ್ವಹಣೆ ಕುರಿತು ರಾಜ್ಯಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಅಧಿಕಾರಿಗಳನ್ನು ಪ್ರಧಾನಿ ಮೋದಿ ಅವರು ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಡುತ್ತಿರುವ 'ಫೀಲ್ಡ್ ಕಮಾಂಡರ್‌ಗಳು' ಎಂದು ಬಣ್ಣಿಸಿದ್ದಾರೆ. 'ನೀವೆಲ್ಲರೂ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಪಡೆಯುತ್ತಿರುವ ಈ ಅನುಭವವು ಭವಿಷ್ಯದಲ್ಲಿ ಅನೇಕ ಸಂಗತಿಗಳನ್ನು ನಿಭಾಯಿಸುವಾಗ ನಿಮಗೆ ನೆರವಾಗುತ್ತದೆ. ಅಂತಹ ಸನ್ನಿವೇಶಗಳನ್ನು ಇನ್ನಷ್ಟು ಉತ್ತಮವಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ. ಹೀಗಾಗಿ ನಿಮ್ಮ ಪ್ರತಿಕ್ರಿಯೆ ದಾಖಲಿಸುವಿಕೆ ಮುಖ್ಯವಾಗಿದೆ' ಎಂದು ಮೋದಿ ತಿಳಿಸಿದ್ದಾರೆ. ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಪಿಎಂ ಕೇರ್ಸ್ ಮೂಲಕ ದೇಶದ ಪ್ರತಿ ಜಿಲ್ಲೆಗಳಲ್ಲಿಯೂ ಆಕ್ಸಿಜನ್ ಪ್ಲಾಂಟ್‌ಗಳನ್ನು ಅಳವಡಿಸುವ ತ್ವರಿತ ಕಾರ್ಯಗಳು ನಡೆಯುತ್ತಿದೆ. ಪ್ರಕರಣಗಳ ಇಳಿಕೆ ನಡುವೆ ನಾವು ಇನ್ನಷ್ಟು ಜಾಗ್ರತರಾಗಬೇಕಿದೆ. ಕಳೆದ ಒಂದು ವರ್ಷದಲ್ಲಿ ಪ್ರತಿ ಸಭೆಯಲ್ಲಿಯೂ, ಪ್ರತಿ ಒಂದು ಜೀವವನ್ನು ಉಳಿಸಲು ನಮ್ಮ ಹೋರಾಟ ನಡೆಯಬೇಕು ಎನ್ನುವುದು ನನ್ನ ಮನವಿಯಾಗಿದೆ ಎಂದು ಮೋದಿ ಹೇಳಿದ್ದಾರೆ. ನಿಮ್ಮ ಜಿಲ್ಲೆ ಗೆದ್ದರೆ, ದೇಶವೇ ಗೆದ್ದಂತೆ ನಿಮಗೆ ಯಾವುದೇ ನೀತಿಯಲ್ಲಿ ಸುಧಾರಣೆಯಾಗಬೇಕು ಎಂದೆನಿಸಿದರೆ ಯಾವುದೇ ಹಿಂಜರಿಕೆಯಿಲ್ಲದೆ ಸಲಹೆಗಳನ್ನು ನೀಡಿ. ವ್ಯಾಪಕ ಪರೀಕ್ಷೆಗಳು, ಸ್ಥಳೀಯ ಕಂಟೇನ್ಮೆಂಟ್ ವಲಯಗಳು, ನಿಖರ ಮಾಹಿತಿಗಳು ಕೋವಿಡ್ 19ರ ವಿರುದ್ಧದ ನಮ್ಮ ಅಸ್ತ್ರಗಳಾಗಿವೆ. ನಿಮ್ಮ ಜಿಲ್ಲೆಯ ಸವಾಲುಗಳು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಹೀಗಾಗಿ ನಿಮ್ಮ ಜಿಲ್ಲೆ ಗೆದ್ದರೆ, ದೇಶವೇ ಗೆದ್ದಂತೆ. ನಿಮ್ಮ ಜಿಲ್ಲೆ ಕೊರೊನಾವನ್ನು ಸೋಲಿಸಿದರೆ, ದೇಶವು ಕೊರೊನಾವನ್ನು ಮಣಿಸಿದಂತೆ ಎಂದು ಹೇಳಿದ್ದಾರೆ.