ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 70 ಸೀಟು ಗೆಲ್ಲುವುದಿಲ್ಲ ಎಂದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಐದನೇ ಸುತ್ತಿನ ಚುನಾವಣೆಗೆ ಪ್ರಚಾರ ಬಿರುಸುಗೊಂಡಿದ್ದು, ಏನೇ ಕಸರತ್ತು ಮಾಡಿದರೂ ರಾಜ್ಯದಲ್ಲಿ ಬಿಜೆಪಿ 70 ಸ್ಥಾನ ಕೂಡ ಗೆಲ್ಲಲಾರದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಛೇಡಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 70 ಸೀಟು ಗೆಲ್ಲುವುದಿಲ್ಲ ಎಂದ ಮಮತಾ ಬ್ಯಾನರ್ಜಿ
Linkup
ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಇನ್ನಷ್ಟು ಬಿರುಸುಗೊಂಡಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಮತ್ತು ನಡುವಿನ ಪ್ರತಿಷ್ಠೆಯ ಹೋರಾಟ ಮತ್ತಷ್ಟು ತೀವ್ರಗೊಂಡಿದೆ. ''ಏನೇ ಕಸರತ್ತು ಮಾಡಿದರೂ ರಾಜ್ಯದಲ್ಲಿ ಬಿಜೆಪಿ 70 ಸ್ಥಾನ ಕೂಡ ಗೆಲ್ಲಲಾರದು,'' ಎಂದು ಮುಖ್ಯಮಂತ್ರಿ ಛೇಡಿಸಿದ್ದಾರೆ. ದಬ್‌ಗ್ರಾಮ್‌ -ಫುಲ್‌ಬರಿಯಲ್ಲಿ ಬುಧವಾರ ಚುನಾವಣಾ ಜಾಥಾ ನಡೆಸಿದ ಮಮತಾ ಬ್ಯಾನರ್ಜಿ, ಬಿಜೆಪಿ ಗೆಲುವಿನ ಕುರಿತು ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಉತ್ಸಾಹದ ಹೇಳಿಕೆಗೆ ತಿರುಗೇಟು ನೀಡಿದರು. 294 ಸ್ಥಾನಗಳ ಪೈಕಿ ಈಗಾಗಲೇ ಬಿಜೆಪಿ 100 ಸ್ಥಾನ ಮೇಲ್ಪಟ್ಟು ಗೆದ್ದುಕೊಂಡಿದೆ ಎಂದು ಇತ್ತೀಚಿನ ಸಮಾವೇಶದಲ್ಲಿ ಪ್ರಧಾನಿ ಹೇಳಿದ್ದರು. ರಾಜ್ಯದಲ್ಲಿ ನಾಲ್ಕು ಹಂತಗಳ ಚುನಾವಣೆ ಮುಗಿದಿದ್ದು, ಇನ್ನೂ ನಾಲ್ಕು ಹಂತಗಳು ಬಾಕಿ ಉಳಿದಿವೆ. ''ಈಗಾಗಲೇ ಚುನಾವಣೆ ಮುಗಿದ 135 ಸ್ಥಾನಗಳಲ್ಲಿ ಬಿಜೆಪಿ 100 ಸೀಟು ಗೆದ್ದುಕೊಂಡದ್ದಾಗಿದೆ ಎಂದು ಹೇಳಿ ಪ್ರಧಾನಿ ಮೋದಿ ಬೀಗುತ್ತಿದ್ದಾರೆ. ಅದು ಯಾವ ಸೀಮೆಯಲ್ಲಿ ಇಷ್ಟೊಂದು ಸೀಟುಗಳನ್ನು ಬಿಜೆಪಿ ಗೆದ್ದುಕೊಂಡಿದೆ ಎಂದು ನನಗಂತೂ ತಿಳಿದಿಲ್ಲ. ಅರ್ಧ ಚುನಾವಣೆಯ ಮಾತು ಬಿಡಿ, ಪೂರ್ತಿ ಚುನಾವಣೆ ಮುಗಿದು ಫಲಿತಾಂಶ ಬರಲಿ, ಆಗ ಗೊತ್ತಾಗುತ್ತದೆ ಇವರ ಬಂಡವಾಳ. ಒಟ್ಟು ಸ್ಥಾನಗಳ ಪೈಕಿ ಬಿಜೆಪಿ 70 ಸ್ಥಾನ ಗೆದ್ದರೆ ಅದೇ ಹೆಚ್ಚು,'' ಎಂದು ಕೆಣಕಿದರು. ವಿಧ ವಿಧ ಸುಳ್ಳು ಬಿಜೆಪಿ ಸುಳ್ಳಿನ ಕಾರ್ಖಾನೆ. ಒಂದೊಂದು ಕಡೆ ಒಂದೊಂದು ಬಗೆಯ ಸುಳ್ಳು ಹೇಳುತ್ತ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಒಂದು ವಿಷಯದ ಮೇಲೆಯೇ ಆ ಪಕ್ಷದ ನಾಯಕರು ಹತ್ತಾರು ರೀತಿಯ ಸುಳ್ಳು ತೂರಿ ಬಿಡುತ್ತಾರೆ ಎಂದು ಮಮತಾ ದೂರಿದರು. ''ಡಾರ್ಜಿಲಿಂಗ್‌ನ ಲೆಬೊಂಗ್‌ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಂಗಾಳದಲ್ಲಿ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದು ಹೇಳಿದರು. ಆದರೆ, ಅಕ್ರಮ ವಲಸೆ ಬಂದವರು ಎಂದು ರಾಜ್ಯದ 14 ಲಕ್ಷ ಜನರನ್ನು ಈಗಾಗಲೇ ಗುರುತಿಸಲಾಗಿದೆ. ಅವರನ್ನು ಬಂಧನದಲ್ಲಿ ಇರಿಸಲು ನಿರ್ಧರಿಸಲಾಗಿದೆ. ಶಾ ಮಾತ್ರ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ,'' ಎಂದು ಮಮತಾ ಬ್ಯಾನರ್ಜಿ ಆರೋಪಿಸಿದರು. ಎದುರಾಳಿಗಳು ಎಷ್ಟೇ ಕಸರತ್ತು ಮಾಡಿದರೂ ಅಧಿಕಾರ ಉಳಿಸಿಕೊಳ್ಳುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂತ್ರಸ್ತ ಕುಟುಂಬ ಸದಸ್ಯರ ಭೇಟಿ ನಾಲ್ಕನೇ ಹಂತದ ಚುನಾವಣೆ ವೇಳೆ ಕೂಚ್‌ ಬೆಹಾರ್‌ನ ಸಿತಲ್‌ಕುಚಿಯಲ್ಲಿ ಕೇಂದ್ರ ಭದ್ರತಾ ಪಡೆಗಳಿಂದ ಗೋಲಿಬಾರ್‌ ನಡೆದು ನಾಲ್ವರು ಮೃತಪಟ್ಟಿದ್ದರು. ಅಲ್ಲಿನ ಸಂತ್ರಸ್ತ ಕುಟುಂಬಗಳ ಸದಸ್ಯರನ್ನು ಮಮತಾ ಬ್ಯಾನರ್ಜಿ ಬುಧವಾರ ಭೇಟಿ ಮಾಡಿ, ಸಾಂತ್ವನ ಹೇಳಿದರು. ''ಈ ನರಮೇಧಕ್ಕೆ ಕಾರಣರಾದವರನ್ನು ಗುರುತಿಸುವ ಅಗತ್ಯ ಇದೆ. ಮೇ 2ರ ಫಲಿತಾಂಶದ ಬಳಿಕ ಸೂಕ್ತ ರೀತಿಯ ತನಿಖೆಗೆ ಆದೇಶ ನೀಡಲಾಗುವುದು. ಸತ್ಯಾಂಶ ಬಯಲಾದ ಬಳಿಕ ತಪ್ಪಿತಸ್ಥರ ವಿರುದ್ಧ ತಕ್ಕ ಕಾನೂನು ಕ್ರಮ ಕೈಗೊಳ್ಳಲಾಗುವುದು,'' ಎಂದು ಭರವಸೆ ನೀಡಿದರು. ಮಮತಾ ನಿರ್ಗಮನ ಶತಸಿದ್ಧ ಎಂದ ನಡ್ಡಾ ''ಬಿಜೆಪಿ ಉನ್ನತ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ, ಅನುಚಿತ ಭಾಷೆ ಬಳಸಿ ಟೀಕಿಸುತ್ತಿದ್ದಾರೆ. ಇದು ಬಂಗಾಳದ ಸಭ್ಯ ಸಂಸ್ಕೃತಿಗೆ ಎಸಗಿದ ದ್ರೋಹ. ನಿರ್ಗಮನ ಖಚಿತಗೊಂಡಿರುವುದರಿಂದ ದೀದಿ ಈ ರೀತಿ ಹತಾಶೆಯ ವಾಗ್ದಾಳಿ ಮಾಡುತ್ತಿದ್ದಾರೆ,'' ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಜಮಲ್‌ಪುರ ಚುನಾವಣಾ ಸಮಾವೇಶದಲ್ಲಿ ಟೀಕಿಸಿದ್ದಾರೆ. ''ಬಿಜೆಪಿಯು ಬಂಗಾಳದ ಸಂಸ್ಕೃತಿಯನ್ನು ರಕ್ಷಿಸುವ ನಿಜವಾದ ವಾರಸುದಾರ ಪಕ್ಷ. ಈ ನಾಡಿನಲ್ಲಿ ಜನಿಸಿದ ಮಹಾನ್‌ ಚಿಂತಕರು, ತತ್ವಜ್ಞಾನಿಗಳ ವಿಚಾರಧಾರೆಯನ್ನು ಪ್ರಚಾರ ಮಾಡುವ ಕೆಲಸವನ್ನು ನಮ್ಮ ಪಕ್ಷ ಮಾಡುತ್ತಿದೆ. ನಾವು ಒಳಗಿನವರು, ಆದ್ದರಿಂದ ಬಂಗಾಳದ ಸಂಸ್ಕೃತಿಯನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇವೆ. ನೀವು ತದ್ವಿರುದ್ಧವಾಗಿ ನಿಂತು, ನಿಂದನೆಯ ಹೀನ ನುಡಿಗಳ ಮೂಲಕ ನಾಡಿನ ಉನ್ನತಿಯನ್ನು ಕುಬ್ಜಗೊಳಿಸುತ್ತಿದ್ದೀರಿ,'' ಎಂದು ಜರಿದರು.