ಇಡುಕ್ಕಿ ಅಣೆಕಟ್ಟೆಯ ಗೇಟ್‌ ತೆರೆದ ಕೇರಳ: 2 ಜಿಲ್ಲೆಗಳಲ್ಲಿ ಹೈ ಅಲರ್ಟ್‌

ತಮಿಳುನಾಡು ಸರಕಾರ ಸೋಮವಾರ ರಾತ್ರಿ ಮುಲ್ಲಪೆರಿಯಾರ್ ಅಣೆಕಟ್ಟೆಯ ಒಂಬತ್ತು ಗೇಟ್‌ಗಳನ್ನು ತೆರೆದಿತ್ತು. ಈ ಬೆನ್ನಲ್ಲೇ ನೀರಿನ ಒಳ ಹರಿವಿನ ಒತ್ತಡ ಕಡಿಮೆ ಮಾಡಲು ಕೇರಳ ಸರ್ಕಾರ ಇಡುಕ್ಕಿಯ ಚೆರುಥೋನಿ ಅಣೆಕಟ್ಟೆಯ ಗೇಟ್‌ ತೆರೆದಿದೆ.

ಇಡುಕ್ಕಿ ಅಣೆಕಟ್ಟೆಯ ಗೇಟ್‌ ತೆರೆದ ಕೇರಳ: 2 ಜಿಲ್ಲೆಗಳಲ್ಲಿ ಹೈ ಅಲರ್ಟ್‌
Linkup
ಹೊಸದಿಲ್ಲಿ: ಮುಲ್ಲಪೆರಿಯಾರ್ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಹೆಚ್ಚಿದ ಕಾರಣ ಸರಕಾರ ಸೋಮವಾರ ರಾತ್ರಿ ಅಣೆಕಟ್ಟೆಯ ಒಂಬತ್ತು ಗೇಟ್‌ಗಳನ್ನು ತೆರೆದಿತ್ತು. ಈ ಬೆನ್ನಲ್ಲೇ ನೀರಿನ ಒಳ ಹರಿವಿನ ಒತ್ತಡ ಕಡಿಮೆ ಮಾಡಲು ಸರ್ಕಾರ ಇಡುಕ್ಕಿಯ ಚೆರುಥೋನಿ ಅಣೆಕಟ್ಟೆಯ ಗೇಟ್‌ಗಳನ್ನು ಮಂಗಳವಾರ ಮುಂಜಾನೆ 6ಗಂಟೆ ವೇಳೆಗೆ ತೆರೆದಿದೆ. ಮೂರು ತಿಂಗಳ ಅವಧಿಯಲ್ಲಿ ಇಡುಕ್ಕಿ ಜಲಾಶಯದ ಗೇಟ್‌ಗಳನ್ನು ನಾಲ್ಕು ಬಾರಿ ತೆರೆದಿರುವುದು ಇದೇ ಮೊದಲು. ತಗ್ಗು ಪ್ರದೇಶದಲ್ಲಿ ವಾಸಿಸುತ್ತಿರುವ ಅನೇಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಅಣೆಕಟ್ಟೆಯ ಗೇಟ್‌ಗಳನ್ನು ತೆರೆಯುವುದಕ್ಕೆ ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಇಡುಕ್ಕಿ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮುಲ್ಲಪೆರಿಯಾರ್ ಅಣೆಕಟ್ಟೆಯ ಗೇಟ್‌ಗಳನ್ನು ಮತ್ತೆ ತೆರೆದ ನಂತರ ಕೇರಳದ ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಮುಷ್ಕರ ಹೂಡಿದ್ದಾರೆ. ತಮಿಳುನಾಡಿನ ಈ ಕ್ರಮದ ವಿರುದ್ಧ ರಾಜ್ಯ (ಕೇರಳ) ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದೆ ಎಂದಿದ್ದಾರೆ. ತಮಿಳುನಾಡು ಸರಕಾರ ರಾತ್ರಿ ವೇಳೆ ಅಣೆಕಟ್ಟೆಯ ಗೇಟ್‌ಗಳನ್ನು ತೆರೆದಿರುವುದು ಇದೇ ಮೊದಲು. ಕೇರಳ ಸರ್ಕಾರವು ಈ ಕ್ರಮವನ್ನು ವಿರೋಧಿಸಿದ್ದು, ತಮಿಳುನಾಡಿನ ನಿರ್ಧಾರ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಆಗಸ್ಟಿನ್ ಆರೋಪಿಸಿದ್ದಾರೆ. ಶತಮಾನದಷ್ಟು ಹಳೆಯದಾದ ಅಣೆಕಟ್ಟಿನ ನೀರಿನ ಮಟ್ಟ ಸೋಮವಾರ 141.90 ಅಡಿ ತಲುಪಿದ ನಂತರ ತಮಿಳುನಾಡು ಅಧಿಕಾರಿಗಳು ರಾತ್ರಿ 7.45 ಕ್ಕೆ ಅಣೆಕಟ್ಟೆಯ ಒಂಬತ್ತು ಶಟರ್‌ಗಳನ್ನು 120 ಸೆಂ.ಮೀ.ಗೆ ಏರಿಸಿದರು. ರಾತ್ರಿ 10 ಗಂಟೆಯ ನಂತರ ಮೂರು ಗೇಟ್‌ಗಳನ್ನು ಮುಚ್ಚಲಾಯಿತು. ತಮಿಳುನಾಡಿನ ಈ ಕ್ರಮದಿಂದಾಗಿ 100 ಕ್ಕೂ ಹೆಚ್ಚು ಕುಟುಂಬಗಳನ್ನು ಇಡುಕ್ಕಿಯಿಂದ ಸ್ಥಳಾಂತರಿಸಬೇಕಾಯಿತು ಎಂದು ಕೇರಳದ ಇಡುಕ್ಕಿ ಜಿಲ್ಲೆಯ ಅಧಿಕಾರಿಗಳ ತಿಳಿಸಿದ್ದಾರೆ. ದೇವರನಾಡು ಕೇರಳ ಕಳೆದ ಒಂದು ತಿಂಗಳಿಂದ ಧಾರಾಕಾರ ಮಳೆಗೆ ತತ್ತರಿಸಿ ಹೋಗಿದೆ. ಪ್ರವಾಹ-ಭೂಕುಸಿತಕ್ಕೆ ಇದುವರೆಗೆ ನೂರಾರು ಮಂದಿ ಮೃತಪಟ್ಟಿದ್ದಾರೆ.