ಬೆಂಗಳೂರಿನ ದಾಸರಹಳ್ಳಿಯಲ್ಲಿ ಕೋಟಿ ವೆಚ್ಚದ ಡಯಾಲಿಸಿಸ್‌ ಕೇಂದ್ರ ಬಳಕೆಗಿಲ್ಲ

ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಡಯಾಲಿಸಿಸ್‌ ಕೇಂದ್ರವು ಉದ್ಘಾಟನೆ ನಂತರ ಮುಚ್ಚಿದ ಬಾಗಿಲು ತೆರೆದೇ ಇಲ್ಲ. ಅಗತ್ಯ ಯಂತ್ರೋಪಕರಣ, ಸಿಬ್ಬಂದಿ ಇಲ್ಲದೆ ಸೌಲಭ್ಯ ಸಿಗುತ್ತಿಲ್ಲ.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಕೋಟಿ ವೆಚ್ಚದ ಡಯಾಲಿಸಿಸ್‌ ಕೇಂದ್ರ ಬಳಕೆಗಿಲ್ಲ
Linkup
ಹನುಮಂತರಾಜು ಬಿ.ಕೆ. ಪೀಣ್ಯದಾಸರಹಳ್ಳಿ ಮಹಾನಗರ ಪಾಲಿಕೆ ವತಿಯಿಂದ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಡಯಾಲಿಸಿಸ್‌ ಕೇಂದ್ರವು ಉದ್ಘಾಟನೆ ನಂತರ ಮುಚ್ಚಿದ ಬಾಗಿಲು ತೆರೆದೇ ಇಲ್ಲ. ಅಗತ್ಯ ಯಂತ್ರೋಪಕರಣಗಳು ಇಲ್ಲದೆ, ಸಿಬ್ಬಂದಿ ನೇಮಕವಾಗದೆ ಕಟ್ಟಡ ವ್ಯರ್ಥವಾಗುತ್ತಿದೆ. ಸಾರ್ವಜನಿಕರು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ ವಾರ್ಡ್‌ ನಂ 13ರಲ್ಲಿ ಬಿಬಿಎಂಪಿ ಅನುದಾನದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿದ ಡಯಾಲಿಸಿಸ್‌ ಕೇಂದ್ರವನ್ನು 2020ರ ಆಗಸ್ಟ್‌ 29ರಂದು ಲೋಕಾರ್ಪಣೆಗೊಳಿಸಲಾಗಿತ್ತು. ಬಡ ಮತ್ತು ಮಧ್ಯಮ ವರ್ಗದ ಕಿಡ್ನಿ ರೋಗಿಗಳಿಗೆ ಅನುಕೂಲವಾಗಲೆಂದು 2019ರ ಬಿಬಿಎಂಪಿ ಬಜೆಟ್‌ನಲ್ಲಿ ಬೆಂಗಳೂರು ನಗರದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೊಂದು ಡಯಾಲಿಸಿಸ್‌ ಕೇಂದ್ರ ಪ್ರಾರಂಭಿಸುವ ನಿಟ್ಟಿನಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿತ್ತು. 28 ಕ್ಷೇತ್ರಗಳ ಪೈಕಿ ರಾಜರಾಜೇಶ್ವರಿ ನಗರ, ಮಹಾಲಕ್ಷ್ಮಿ ಲೇಔಟ್‌ ಸೇರಿದಂತೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಡಯಾಲಿಸಿಸ್‌ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆರೇಳು ಕಡೆ ಕಟ್ಟಡಗಳ ಕಾಮಗಾರಿ ಅಂತಿಮ ಹಂತದಲ್ಲಿವೆ. ಕೆಲವು ಕಡೆ ನಿರ್ಮಾಣ ಕಾಮಗಾರಿ ಆರಂಭವಾಗದೇ ಅನುದಾನ ಹಿಂದಕ್ಕೆ ಹೋಗಿದೆ. ಮಲ್ಲಸಂದ್ರ ವಾರ್ಡ್‌ನಲ್ಲಿ ಡಯಾಲಿಸಿಸ್‌ ಕೇಂದ್ರಕ್ಕಾಗಿ 4000 ಚದರ ಅಡಿ ವಿಸ್ತೀರ್ಣದಲ್ಲಿ ನೆಲಮಹಡಿಯ ಕಟ್ಟಡ ನಿರ್ಮಿಸಲಾಗಿದೆ. ''1.5 ಕೋಟಿ ರೂ. ಅನುದಾನ ಕೇವಲ ಕಟ್ಟಡಕ್ಕಷ್ಟೇ ಬಿಡುಗಡೆ ಆಗಿತ್ತು. ಅದರಿಂದ ಉತ್ತಮ ದರ್ಜೆಯ ಕಟ್ಟಡ ಕಟ್ಟಲಾಗಿದೆ. ನಂತರ ಡಯಾಲಿಸಿಸ್‌ ಯಂತ್ರೋಪಕರಣಗಳು ಹಾಗೂ ಸಿಬ್ಬಂದಿ ನೇಮಕ ಪ್ರಕ್ರಿಯೆ ಮಾಡಬೇಕಿತ್ತು. ಅಷ್ಟರಲ್ಲಿ ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದ ಪರಿಣಾಮ ಏನು ಮಾಡಲಾಗಲಿಲ್ಲ,'' ಎಂದು ಬಿಬಿಎಂಪಿ ಮಾಜಿ ಸದಸ್ಯ ಲೋಕೇಶ್‌ ಅಸಹಾಯಕತೆ ವ್ಯಕ್ತಪಡಿಸಿದರು. ಬಳಕೆಯಾಗದ 3.5 ಕೋಟಿ ರೂ. ಅನುದಾನ ''ಡಯಾಲಿಸಿಸ್‌ ಕೇಂದ್ರದ ಕಟ್ಟಡದ ಮೊದಲ ಮತ್ತು ಎರಡನೇ ಅಂತಸ್ತಿನಲ್ಲಿ ಪುರುಷ ಹಾಗೂ ಮಹಿಳಾ ವಿಶೇಷಚೇತನರ ಪುನಶ್ಚೇತನ ಕೇಂದ್ರ ಆರಂಭಿಸಲು ಮೂರು ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಅನುದಾನ ಬಳಕೆಯಾಗದೆ ಫ್ರೀಜ್‌ ಮಾಡಲಾಗಿದೆ,'' ಎಂದು ಲೋಕೇಶ್‌ ಹೇಳಿದರು. ಕಟ್ಟಡ ಕಟ್ಟಿಸುವುದು ಬಿಬಿಎಂಪಿ ಜವಾಬ್ದಾರಿ ಆಗಿರುತ್ತದೆ. ನಂತರ ಆರೋಗ್ಯ ಇಲಾಖೆಯವರು ಇದಕ್ಕೆ ಬೇಕಾದ ಯಂತ್ರೋಪಕರಣಗಳ ವ್ಯವಸ್ಥೆ ಮಾಡಿ, ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕಾಗುತ್ತದೆ. - ಕೆ.ನರಸಿಂಹಮೂರ್ತಿ, ದಾಸರಹಳ್ಳಿ ವಲಯ ಜಂಟಿ ಆಯುಕ್ತ