ಅಜಯ್ ಮಿಶ್ರಾ ಜತೆ ವೇದಿಕೆ ಹಂಚಿಕೊಳ್ಳಬೇಡಿ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಒತ್ತಾಯ

ಲಖಿಂಪುರ ಖೇರಿ ಹಿಂಸಾಚಾರದ ಆರೋಪಿ ಆಶೀಶ್ ಮಿಶ್ರಾ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ ಜತೆಗೆ ವೇದಿಕೆ ಹಂಚಿಕೊಳ್ಳಬಾರದು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಪತ್ರ ಬರೆದಿದ್ದಾರೆ.

ಅಜಯ್ ಮಿಶ್ರಾ ಜತೆ ವೇದಿಕೆ ಹಂಚಿಕೊಳ್ಳಬೇಡಿ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಒತ್ತಾಯ
Linkup
ಹೊಸದಿಲ್ಲಿ: ಜಿಲ್ಲೆಯಲ್ಲಿ ರೈತರ ಮೇಲೆ ವಾಹನ ಹರಿಸಿ ಸಾಯಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಆಶೀಶ್ ಮಿಶ್ರಾ ತಂದೆ, ಕೇಂದ್ರ ಸಚಿವ ಜತೆ ವೇದಿಕೆ ಹಂಚಿಕೊಳ್ಳಬೇಡಿ ಎಂದು ಪ್ರಧಾನಿ ಅವರಿಗೆ ಕಾಂಗ್ರೆಸ್ ನಾಯಕಿ ಪತ್ರದ ಮುಖೇನ ಮನವಿ ಮಾಡಿದ್ದಾರೆ. ಅಲ್ಲದೆ, ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೂಡ ಅವರು ಆಗ್ರಹಿಸಿದ್ದಾರೆ. ಡಿಜಿಪಿ ಸಮ್ಮೇಳನದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಅವರು ಉತ್ತರ ಪ್ರದೇಶದ ಲಕ್ನೋಕ್ಕೆ ತೆರಳಿದ್ದಾರೆ. ಅಲ್ಲಿ ಅವರೊಂದಿಗೆ ಕೇಂದ್ರ ಸಚಿವ ಅಜಯ್ ಮಿಶ್ರಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 'ರೈತರ ಕುರಿತಾದ ನಿಮ್ಮ ಉದ್ದೇಶಗಳು ಸ್ಪಷ್ಟವಾಗಿದ್ದರೆ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬೇಡಿ. ಅವರನ್ನು ಸಂಪುಟದಿಂದ ಕಿತ್ತುಹಾಕಿ' ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಪ್ರಿಯಾಂಕಾ ಒತ್ತಾಯಿಸಿದ್ದಾರೆ. ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ ಮರು ದಿನ ಪ್ರಿಯಾಂಕಾ ಈ ಪತ್ರ ಬರೆದಿದ್ದಾರೆ. 'ನಿನ್ನೆ, ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡುವಾಗ, ರೈತರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಹೃದಯಪೂರ್ವಕವಾಗಿ ಕೃಷಿ ಕಾಯ್ದೆಗಳ ರದ್ದತಿಯ ಅಭೂತಪೂರ್ವ ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದೀರಿ. ಇದು ನಿಜವಾದರೆ, ಲಖಿಂಪುರ ಖೇರಿ ಹಿಂಸಾಚಾರದಲ್ಲಿ ತೊಂದರೆಗೆ ಒಳಗಾದ ಕುಟುಂಬದವರಿಗೆ ನ್ಯಾಯ ಒದಗಿಸುವಂತೆ ಮಾಡುವುದು ನಿಮ್ಮ ಪ್ರಮುಖ ಆದ್ಯತೆ ಆಗಬೇಕು' ಎಂದು ಪ್ರಿಯಾಂಕಾ ಹೇಳಿದ್ದಾರೆ. 'ಆದರೆ, ಕೇಂದ್ರ ರಾಜ್ಯ ಖಾತೆ ಗೃಹ ಸಚಿವ ಅಜಯ್ ಮಿಶ್ರಾ 'ತೇಲಿ' ಅವರು ಈಗಲೂ ನಿಮ್ಮ ಸಚಿವ ಸಂಪುಟದಲ್ಲಿ ಸದಸ್ಯರಾಗಿ ಉಳಿದಿದ್ದಾರೆ. ಡಿಜಿಪಿ ಸಮ್ಮೇಳನದಲ್ಲಿ ನೀವು ಆರೋಪಿಯ (ಆಶೀಶ್ ಮಿಶ್ರಾ) ಜತೆ ವೇದಿಕೆ ಹಂಚಿಕೊಂಡರೆ, ಕೊಲೆಗಾರರಿಗೆ ಆಶ್ರಯ ನೀಡುತ್ತಿರುವ ಆ ವ್ಯಕ್ತಿಗಳ ಜತೆಗೆ ನೀವು ಇದ್ದೀರಿ ಎಂಬ ಸ್ಪಷ್ಟ ಸಂದೇಶವನ್ನು ಆ ನೊಂದ ಕುಟುಂಬಗಳಿಗೆ ರವಾನಿಸಿದಂತೆ ಆಗಲಿದೆ' ಎಂದು ಪತ್ರದಲ್ಲಿ ಹೇಳಿದ್ದಾರೆ.