ಪಂಜಾಬ್‌ ಕಾಂಗ್ರೆಸ್‌ನಲ್ಲಿ ಮುಗಿಯದ ಬೇಗುದಿ, ಸಿಧು ನಾಯಕತ್ವದ ವಿರುದ್ಧ ಎದ್ದಿದೆ ಅಪಸ್ವರ

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯನ್ನು ನವಜೋತ್‌ ಸಿಂಗ್‌ ಸಿಧು ನಾಯಕತ್ವದಲ್ಲಿಯೇ ಎದುರಿಸಲಾಗುವುದು ಎನ್ನುವ ಪಂಜಾಬ್ ಕಾಂಗ್ರೆಸ್‌ ಉಸ್ತುವಾರಿ ಹರೀಶ್‌ ರಾವತ್‌ ಹೇಳಿಕೆಗೆ ವಿರೋಧ ವ್ಯಕ್ತವಾಗಿದ್ದು, 'ರಾವತ್‌ ಹೇಳಿಕೆ ದಿಗ್ಭ್ರಮೆ ಮೂಡಿಸಿದೆ' ಎಂದು ಸುನೀಲ್‌ ಜಾಖಡ್‌ ಹೇಳಿದ್ದಾರೆ.

ಪಂಜಾಬ್‌ ಕಾಂಗ್ರೆಸ್‌ನಲ್ಲಿ ಮುಗಿಯದ ಬೇಗುದಿ, ಸಿಧು ನಾಯಕತ್ವದ ವಿರುದ್ಧ ಎದ್ದಿದೆ ಅಪಸ್ವರ
Linkup
ಹೊಸದಿಲ್ಲಿ: ಕ್ಯಾ. ಅಮರೀಂದರ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಸಿದ ಬಳಿಕವೂ ಪಂಜಾಬ್‌ ಕಾಂಗ್ರೆಸ್‌ನಲ್ಲಿ ಅಸಮಾಧಾನ ಶಮನಗೊಂಡಿಲ್ಲ. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ (ಪಿಪಿಸಿಸಿ) ಅಧ್ಯಕ್ಷ ನಾಯಕತ್ವದ ವಿರುದ್ಧ ಈಗ ಹಿರಿಯ ನಾಯಕರೇ ಅಪಸ್ವರ ತೆಗೆದಿದ್ದಾರೆ. ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವ ಕೊಂಚ ಮುನ್ನ, "ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯನ್ನು ನವಜೋತ್‌ ಸಿಂಗ್‌ ಸಿಧು ನಾಯಕತ್ವದಲ್ಲಿಯೇ ಎದುರಿಸಲಾಗುವುದು," ಎಂದು ಕಾಂಗ್ರೆಸ್‌ನ ಪಂಜಾಬ್‌ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರೀಶ್‌ ರಾವತ್‌ ಹೇಳಿದ್ದರು. ರಾವತ್‌ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪಿಪಿಸಿಸಿ ನಿಕಟಪೂರ್ವ ಅಧ್ಯಕ್ಷ ಸುನೀಲ್‌ ಜಾಖಡ್‌ ಅವರು, "ರಾವತ್‌ ಹೇಳಿಕೆ ದಿಗ್ಭ್ರಮೆ ಮೂಡಿಸಿದೆ," ಎಂದು ಹೇಳಿದ್ದಾರೆ. ''ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಾಗುವುದು ಎಂದು ಖುದ್ದು ರಾವತ್‌ ಈ ಹಿಂದೆ ಹೇಳಿದ್ದರು. ಈಗ ಚುನಾವಣೆಗೆ ಸಿಧು ನೇತೃತ್ವ ಎನ್ನುತ್ತಿದ್ದಾರೆ. ಇದು ದಿಗ್ಭ್ರಮೆ ಮೂಡಿಸುವ ಹೇಳಿಕೆ ಮಾತ್ರವಲ್ಲ, ನೂತನ ಮುಖ್ಯಮಂತ್ರಿಯ ಸಾಮರ್ಥ್ಯವನ್ನೂ ಅವಹೇಳನ ಮಾಡುವಂತಹ ಹೇಳಿಕೆ. ಹೊಸ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲಿ ಇಂತಹ ಹೇಳಿಕೆ ಬೇಕಿರಲಿಲ್ಲ," ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ರೇಸ್‌ನಲ್ಲಿ ಸುನೀಲ್‌ ಜಾಖಡ್‌ ಸಹ ಇದ್ದರು ಎನ್ನುವುದು ಗಮನಾರ್ಹ. ಜಾಖಡ್‌ ಹೇಳಿಕೆ ಬೇರೆ ಸ್ವರೂಪ ಪಡೆಯುತ್ತಿರುವುದನ್ನು ಗಮನಿಸಿದ ಪಕ್ಷದ ವರಿಷ್ಠರು ತೇಪೆ ಹಾಕುವ ಪ್ರಯತ್ನ ಮಾಡಿದರು. "ವಿಧಾನಸಭೆ ಚುನಾವಣೆ ನೇತೃತ್ವವನ್ನು ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಮತ್ತು ಪಿಪಿಸಿಸಿ ಅಧ್ಯಕ್ಷ ನವಜೋತ್‌ ಸಿಂಗ್‌ ಸಿಧು ಇಬ್ಬರೂ ವಹಿಸಲಿದ್ದಾರೆ. ಈ ಕುರಿತು ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ," ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸ್ಪಷ್ಟೀಕರಣ ನೀಡಿದರು. ಇಬ್ಬರು ಡಿಸಿಎಂಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಜತೆಗೆ ಸುಖಜಿಂದರ್‌ ಸಿಂಗ್‌ ರಾಂಧ್ವಾ ಮತ್ತು ಒ.ಪಿ.ಸೈನಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಂಧ್ವಾ ಮತ್ತು ಸೈನಿ ಇಬ್ಬರೂ ಕ್ಯಾ.ಅಮರೀಂದರ್‌ ಸಿಂಗ್‌ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಇಬ್ಬರನ್ನೂ ಉಪ ಮುಖ್ಯಮಂತ್ರಿಗಳಾಗಿ ಘೋಷಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ಹಲವು ಪ್ರಮುಖರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದರು. ನಿರ್ಗಮಿತ ಮುಖ್ಯಮಂತ್ರಿ ಕ್ಯಾ.ಅಮರೀಂದರ್‌ ಸಿಂಗ್‌ ಅವರು ಗೈರಾಗುವ ಮೂಲಕ ತಮ್ಮ ಸಿಟ್ಟು ಇನ್ನೂ ತಣಿದಿಲ್ಲ ಎನ್ನುವ ಸಂದೇಶ ರವಾನಿಸಿದರು. ''ರಾಷ್ಟ್ರದ್ರೋಹಿಯಾಗಿರುವ ಸಿಧು ಅವರನ್ನು ರಾಜ್ಯದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ,'' ಎಂದು ಕ್ಯಾಪ್ಟನ್‌ ಈಗಾಗಲೇ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರಣ್‌ಜಿತ್‌ ಅವರು, ''ರಾಜ್ಯದ ರೈತರ ನೀರು ಮತ್ತು ವಿದ್ಯುತ್‌ ಬಿಲ್‌ಗಳನ್ನು ಮನ್ನಾ ಮಾಡಲಾಗುವುದು. ಬಾಕಿ ಬಿಲ್‌ ಸಹ ಮನ್ನಾ ಆಗಲಿದೆ," ಎಂದು ಘೋಷಿಸಿದರು. ''ಕೇಂದ್ರ ಸರಕಾರವು ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು,'' ಎಂದೂ ಅವರು ಆಗ್ರಹಿಸಿದರು. ಪದಗ್ರಹಣದ ದಿನವೇ ರಾಜೀನಾಮೆಗೆ ಆಗ್ರಹ ಚರಣ್‌ಜಿತ್‌ ಸಿಂಗ್‌ ಚನ್ನಿ ಪ್ರಮಾಣವಚನ ಸ್ವೀಕರಿಸಿದ ದಿನವೇ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಚನ್ನಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ''ಚರಣ್‌ಜಿತ್‌ ಅವರ ವಿರುದ್ಧ ಮಹಿಳಾ ಐಎಎಸ್‌ ಅಧಿಕಾರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಇದೆ. ರಾಜ್ಯ ಮಹಿಳಾ ಆಯೋಗವು ಈ ಕುರಿತು ತನಿಖೆ ನಡೆಸುತ್ತಿದೆ. ಹೀಗಾಗಿ ಅವರು ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ನೀಡಬೇಕು,'' ಎಂದು ಶರ್ಮಾ ಆಗ್ರಹಿಸಿದ್ದಾರೆ. ಮಹಿಳಾ ಐಎಎಸ್‌ ಅಧಿಕಾರಿಗೆ 2018ರಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ ಆರೋಪವನ್ನು ಚರಣ್‌ಜಿತ್‌ ಎದುರಿಸುತ್ತಿದ್ದಾರೆ. ಪಂಜಾಬ್‌ನಲ್ಲಿಕಾಂಗ್ರೆಸ್‌ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಿರುವುದು ಚುನಾವಣೆ ಸ್ಟಂಟ್‌ ಅಲ್ಲದೇ ಬೇರೇನೂ ಅಲ್ಲ. ಇಂತಹ ಮೋಸದ ತಂತ್ರಗಳಿಗೆ ದಲಿತರು ಬಲಿಯಾಗಬಾರದು. ಕಾಂಗ್ರೆಸ್‌ ಸೇರಿದಂತೆ ಕೆಲವು ಪಕ್ಷಗಳು ತಾವು ಬಿಕ್ಕಟ್ಟಿನಲ್ಲಿರುವಾಗ ಮಾತ್ರ ದಲಿತರನ್ನು ನೆನಪು ಮಾಡಿಕೊಳ್ಳುತ್ತವೆ. ಇದನ್ನು ದಲಿತ ಸಮುದಾಯ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬಿಎಸ್ಪಿ ವರಿಷ್ಠ ನಾಯಕಿ ಮಾಯಾವತಿ ಹೇಳಿದ್ದಾರೆ. ದಲಿತ ಮುಖ್ಯಮಂತ್ರಿ ಮಾಡಿ ದಲಿತರ ಮತ ಕಬಳಿಸುವ ಹುನ್ನಾರವನ್ನು ಕಾಂಗ್ರೆಸ್‌ ನಡೆಸಿದೆ. ಮಹಾರಾಷ್ಟ್ರದಲ್ಲಿ 2004ರ ವಿಧಾನಸಭೆ ಚುನಾವಣೆಗೆ ಕೊಂಚ ಮೊದಲು ವಿಲಾಸರಾವ್‌ ದೇಶಮುಖ್‌ ಅವರನ್ನು ಪದಚ್ಯುತಗೊಳಿಸಿ ದಲಿತ ನಾಯಕ ಸುಶೀಲ್‌ಕುಮಾರ್‌ ಶಿಂಧೆ ಅವರನ್ನು ಸಿಎಂ ಮಾಡಲಾಯಿತು. ಇದು ಕಾಂಗ್ರೆಸ್‌ನ ಚಾಳಿ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಷ್ಯಂತ್‌ಕುಮಾರ್‌ ಗೌತಮ್‌ ಕೂಡ ದೂರಿದ್ದಾರೆ.