SPB Birthday: ಮಾನವತೆಯ ಮಹಾಮಿಡಿತ ಎಸ್‌ಪಿ ಬಾಲಸುಬ್ರಹ್ಮಣ್ಯಂ

ಭಾರತೀಯ ಚಿತ್ರರಂಗ ಕಂಡ ಮೇರು ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರಿದ್ದಿದ್ದರೆ ಇಂದವರಿಗೆ 75 ವರ್ಷ ಪೂರ್ಣಗೊಳ್ಳುತ್ತಿತ್ತು. ಅದ್ಭುತ ಗಾಯಕ ಎಸ್‌ಪಿಬಿ ಅವರ ಮಾನವೀಯತೆಯ ಮುಖ ಇಲ್ಲಿದೆ. ಆ ಕುರಿತ ವಿಶೇಷ ಲೇಖನ ಇಲ್ಲಿದೆ.

SPB Birthday: ಮಾನವತೆಯ ಮಹಾಮಿಡಿತ ಎಸ್‌ಪಿ ಬಾಲಸುಬ್ರಹ್ಮಣ್ಯಂ
Linkup
ಎಂ.ಪಿ.ಎಂ. ವೀರೇಶ ಯರಬಾಳು ತಾವಿದ್ದ ಕಾಲದ ಜೊತೆಗೇ ಸದಾ ಹೆಜ್ಜೆ ಹಾಕಿದವರು ಬಹುಭಾಷಾ ಗಾಯಕ, ಸಂಗೀತ ಪ್ರೇಮಿಗಳ ಆರಾಧ್ಯದೈವ ಪದ್ಮಶ್ರೀ ಶ್ರೀಪತಿ ಪಂಡಿತಾರಾಧ್ಯುಲ ಡಾ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ. ಗಾನದಲ್ಲಷ್ಟೇ ಮೇರುಪರ್ವತವಲ್ಲಅವರು, ಮಾನವೀಯ ನಡವಳಿಕೆಯಲ್ಲಿಯೂ ಬಲು ಸೂಕ್ಷ್ಮಜ್ಞರು. ಒಮ್ಮೆ ಹಿನ್ನೆಲೆ ಗಾಯನದ ರೆಕಾರ್ಡಿಂಗ್‌ಗಾಗಿ ಅವರು ಬಂದಿದ್ದರು. ಚಿತ್ರ 'ಅನುರಾಗ ಸಂಗಮ'. ಅದರಲ್ಲಿನ 'ಓ ಮಲ್ಲಿಗೆ ನಿನ್ನೊಂದಿಗೆ ನಾನಿಲ್ಲವೇ ಸದಾ' ಹಾಡನ್ನು ಅವರು ಹಾಡಬೇಕಿತ್ತು. ಹಾಡುವ ಮುನ್ನ ಸಂಗೀತ ನಿರ್ದೇಶಕ ವಿ.ಮನೋಹರ್‌ ಅವರು ರಮೇಶ್‌ ಚಂದ್ರ ಅವರಿಂದ ತಾವು ಹಾಡಿಸಿದ್ದ ಟ್ರಾಕ್‌ ಅನ್ನು ಎಸ್‌.ಪಿ.ಬಿ ಅವರಿಗೆ ಕೇಳಿಸಿದರು. ಅದನ್ನು ಕೇಳಿದ ಬಾಲು, 'ಮೂಲ ಹಾಡೇ ಅದ್ಭುತವಾಗಿದೆ. ನಾನು ಅದಕ್ಕೆ ಇನ್ನೇನು ಒದಗಿಸಲು ಸಾಧ್ಯ? ತುಂಬಾ ಚೆನ್ನಾಗಿದೆ. ನಾನು ಹಾಡುವುದು ಬೇಡ. ಅದನ್ನೇ ಉಳಿಸಿಕೊಳ್ಳಿ' ಎಂದರಂತೆ. ಆ ಹಾಡು ಹಾಡಿದ ರಮೇಶ್‌ ಚಂದ್ರ ಅವರಿಗೆ ಮೊದಲ ಹಾಡಿಗೇ ರಾಷ್ಟ್ರಪ್ರಶಸ್ತಿ ಕೂಡ ಬಂತು. ಕನ್ನಡದಲ್ಲಿಇಂತಹ ಅದ್ಭುತ ಗೀತೆಯನ್ನೇ ಎಸ್‌.ಪಿ.ಬಿ ಬಿಟ್ಟಕೊಟ್ಟಿದ್ದು ಇತರ ಗಾಯಕರನ್ನು ಗೌರವಿಸುತ್ತಿದ್ದ, ಬೆಳೆಸುತ್ತಿದ್ದ ಅವರ ಹಿರಿತನಕ್ಕೆ ಸಾಕ್ಷಿ. ತಾಳಿ ಕಟ್ಟಿದ ಶುಭವೇಳೆ! ಆರಂಭ ಕಾಲದ ಹಾಡುಗಳಲ್ಲಿ ಸೀಟಿ ಹೊಡೆಯುವಂತಹ ಅಥವಾ ಮಿಮಿಕ್ರಿಯ ಸಂದರ್ಭಗಳಿದ್ದರೆ ಎಸ್‌ಪಿ ಅದನ್ನು ತಾವೇ ಮಾಡುವುದಾಗಿ ವಹಿಸಿಕೊಳ್ಳುತ್ತಿದ್ದರಂತೆ. ಆದರೆ ಇದರಿಂದ ಹಾಡುಗಳ ನಡುವೆ ಸೀಟಿ ಹೊಡೆಯುವ ಕೆಲಸವನ್ನೇ ಮಾಡುತ್ತಿದ್ದಂಥ ಕಲಾವಿದರೂ ಇದ್ದಾರೆಂದೂ, ತನ್ನಿಂದ ಅವರಿಗೆ ಸಂಭಾವನೆ ನಷ್ಟವಾಗುತ್ತಿದೆಯೆಂದೂ ಅವರಿಗೆ ಅರಿವಾಯ್ತು. ಆ ಬಳಿಕ ಅವರು ತಾವಾಗಿ ಅದರಿಂದ ಹಿಂದೆ ಸರಿದರಂತೆ. ಉದಾ: 'ತಾಳಿಕಟ್ಟುವ ಶುಭವೇಳೆ..' ಹಾಡಿನಲ್ಲಿ ಬರುವ ಜಿಂಕೆ ಮಂತ್ರ ಹೇಳುವ, ಗಿಣಿ ಹಾಡುವ ಇತ್ಯಾದಿ ಧ್ವನಿಗಳನ್ನು ಕನ್ನಡದಲ್ಲಿಎಸ್ಪಿಬಿಯವರೇ ನಿರ್ವಹಿಸಿದ್ದರೆ ಮೂಲ ತಮಿಳಲ್ಲಿ ಅಲ್ಲಿನ ಮಿಮಿಕ್ರಿ ಕಲಾವಿದರಿಗೆ ಅವಕಾಶ ನೀಡಲಾಗಿತ್ತು. ಹಾಗಿದ್ದರೂ ಕನ್ನಡದಲ್ಲಿ ಎಸ್‌ಪಿಬಿ ಮಾಡಿದಂಥ ಮಿಮಿಕ್ರಿಯೇ ಆಕರ್ಷಕವಾಗಿದೆ ಎನ್ನುವುದು ಗಮನಾರ್ಹ! ಕಷ್ಟಗಳಿಗೆ ಮಿಡಿವ ಮನಸ್ಸು ಬದುಕಿನ ಪೂರ್ತಿ ಎಷ್ಟೊಂದು ಸಂಕಷ್ಟಗಳಿಗೆ ಅವರು ನೆರವು ನೀಡುತ್ತಲೇ ಬಂದಿದ್ದರು. ಚೆನ್ನೈನ ಎಸ್‌.ಪಿ. ಫ್ಯಾನ್ಸ್‌ ಚಾರಿಟೆಬಲ್‌ ಟ್ರಸ್ಟ್‌ನಿಂದ ಅನೇಕ ಕಲಾವಿದರ ಕುಟುಂಬಗಳಿಗೆ ನೆರವು ನೀಡಿದ್ದರು. ಕರ್ನಾಟಕದಲ್ಲಿಯೂ ಹಲವು ಗಾಯಕರಿಗೆ, ಕಲಾವಿದರಿಗೆ ಅವರು ನೆರವಾಗಿದ್ದರು. ಖ್ಯಾತ ಗಾಯಕ ಎಲ್. ಎನ್‌. ಶಾಸ್ತ್ರಿ ಅವರು ತೀರಿಕೊಂಡಾಗ ಎಸ್‌.ಪಿ.ಬಿ ಅವರೇ ಖುದ್ದಾಗಿ ಶಾಸ್ತ್ರಿ ಅವರ ಮನೆಗೆ ಬಂದು ಸುಮಾ ಶಾಸ್ತ್ರಿ ಅವರನ್ನು ಸಂತೈಸಿ ಒಂದು ಲಕ್ಷದ ಚೆಕ್‌ ನೀಡಿ ಹೋಗಿದ್ದರು. ಈ ಗಾಯಕ ತಾನೇ ಸಂಗೀತ ವಿಶ್ವವಿದ್ಯಾಲಯವಾದವರು. ವ್ಯಕ್ತಿತ್ವದಲ್ಲೂ ಮಹಾನ್‌ ಆಗಿ ನಿಂತವರು. ಅವರ ಹಾಡುಗಳೂ ಅಷ್ಟೇ, ಸಹೋದರತ್ವ, ನಾಡು, ನುಡಿಯ ಶ್ರದ್ಧೆ, ಪರಿಸರ ಕಾಳಜಿ, ನ್ಯಾಯ, ಧರ್ಮ, ಮಮತೆ, ವಾತ್ಸಲ್ಯ, ಪ್ರೀತಿ, ಸ್ನೇಹ, ಶೃಂಗಾರ ಎಲ್ಲವೂ ಮಿಳಿತವಾದುದು. ಕಿವಿಗೂ ಹೃದಯಕ್ಕೂ ಅದು ತಂಪು ನೀಡುವಂಥದ್ದು. ಅದಕ್ಕೇ ಈ ಗಾಯಕನ ಹಾಡು ಎಂದೆಂದಿಗೂ ಅಮರ ಹಾಗೂ ಸರ್ವಶ್ರೇಷ್ಠ.