NEET 2021: ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕಠಿಣವೇ ನೀಟ್‌ ಪರೀಕ್ಷೆ? ಟ್ವಿಟ್ಟರ್‌ನಲ್ಲಿ ಸ್ವಾರಸ್ಯಕರ ಚರ್ಚೆ

ನೀಟ್‌ಗೆ ಹೆದರಿ ಹಲವು ಅಭ್ಯರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ನೆಟ್ಟಿಗರು ನೀಟ್‌ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ.

NEET 2021: ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಕಠಿಣವೇ ನೀಟ್‌ ಪರೀಕ್ಷೆ? ಟ್ವಿಟ್ಟರ್‌ನಲ್ಲಿ ಸ್ವಾರಸ್ಯಕರ ಚರ್ಚೆ
Linkup
ಹೊಸ ದಿಲ್ಲಿ: ಕೇಂದ್ರ ಸರ್ಕಾರದ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಕಲ್ಪಿಸುವ ನೀಟ್‌ ಪರೀಕ್ಷೆಗೆ ಹೆದರಿ ಹಲವು ಅಭ್ಯರ್ಥಿಗಳು ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನೀಟ್‌ ಹಾಗೂ ಅಭ್ಯರ್ಥಿಗಳ ಮನೋಧೈರ್ಯದ ಬಗ್ಗೆ ನಾನಾ ಚರ್ಚೆಗಳು ನಡೆಯುತ್ತಿವೆ. ನೀಟ್‌ ಪರೀಕ್ಷೆಗೆ ಹೆದರಿ ತಮಿಳುನಾಡಲ್ಲಿ ಕಳೆದ ನಾಲ್ಕು ದಿನಗಳಲ್ಲಿ ನೀಟ್‌ ಪರೀಕ್ಷೆ ಬರೆದ ಮೂರು ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಗರಿಗೆದರಿವೆ. ನೀಟ್‌ ವ್ಯಾಪ್ತಿಯಿಂದ ವಿದ್ಯಾರ್ಥಿಗಳಿಗೆ ವಿನಾಯ್ತಿ ನೀಡುವ ಮಸೂದೆಗೆ ಅಲ್ಲಿನ ಸರ್ಕಾರ ಅಂಗೀಕಾರ ನೀಡಿದ ಹೊರೆತಾಗಿಯೂ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಹೀಗಾಗಿ ನೀಟ್‌ ಪರ-ವಿರೋಧದ ಬಗ್ಗೆಯೂ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಸಾಗಿವೆ. ಮಾಜಿ ಯೋಧ, ಸದ್ಯ ಅತಿಥಿ ಉಪನ್ಯಾಸಕರಾಗಿರುವ ಮೇಜರ್‌ ಮಧನ್‌ ಕುಮಾರ್‌ ಎಂಬವರು ಟ್ವಿಟ್ಟರ್‌ನಲ್ಲಿ ನೀಟ್‌ ಬಗ್ಗೆ ಬರೆದುಕೊಂಡಿರುವ ವಾಕ್ಯಗಳು ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ. ' ನೀಟ್‌ನಲ್ಲಿ ಕೇವಲ 9 ಅಂಕದ ಕೊರತೆಯಿಂದಾಗಿ ನನಗೆ ಎಂಬಿಬಿಎಸ್‌ ಸೀಟು ಕೈ ತಪ್ಪಿತು. ಒಂದು ವರ್ಷದ ಬಳಿಕ +12 ನಲ್ಲಿ ಮತ್ತೆ ಒಳ್ಳೆಯ ಅಂಕ ಪಡೆದುಕೊಂಡು ನೀಟ್‌ ಪರೀಕ್ಷೆಗೆ ತಯಾರಾದೆ. ಅಂದು ಪರೀಕ್ಷಾ ಕೇಂದ್ರಕ್ಕೆ ತೆರಳುವ ವೇಳೆ ರಸ್ತೆ ಅಪಘಾತ ಉಂಟಾಗಿತು. ಆ ವರ್ಷವೂ ಏಳು ಅಂಕಗಳಿಂದಾಗಿ ಎಂಬಿಬಿಎಸ್‌ ಸೀಟು ಸಿಗಲಿಲ್ಲ. ಬಳಿಕ ನನಗೆ ಭಾರತೀಯ ಸೇನೆ ಜೀವ ಕೊಟ್ಟಿತು. ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಫೈಟ್‌ ಬ್ಯಾಕ್‌...' ಎಂದು ಬರೆದುಕೊಂಡಿದ್ದಾರೆ. ಇವರ ಈ ಟ್ವೀಟ್‌ಗೆ ಹಲವು ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಅಗತ್ಯವಿದೆ. ಆತ್ಮಹತ್ಯೆ ಯಾವುದಕ್ಕೂ ಪರಿಹಾರ ಅಲ್ಲ. ನೀಟ್‌ ಬಗ್ಗೆ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬಬೇಕು ಎಂದು ಹಲವು ಮಂದಿ ಕಮೆಂಟ್‌ ಮಾಡಿದ್ದಾರೆ. ಮೇಜರ್‌ ಅವರ ಟ್ವೀಟ್‌ಗೆ ಕೃಷ್ಣ ಕುಮಾರ್‌ ಎಂಬವರು ರೀಪ್ಲೇ ಮಾಡಿದ್ದು, 'ನೀಟ್‌ ಹೆಸರಲ್ಲಿ ರಾಜಕೀಯ ಮಾಡುವವರಿಗೆ ನನ್ನ ಪ್ರಶ್ನೆ. ನೀಟ್‌ ಆರಂಭವಾಗಿ ಎಂಟು ವರ್ಷಗಳಾಗಿವೆ. ಈ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಬೇಕಾದ ಟ್ರೈನಿಂಗ್‌ ಸೆಂಟರ್‌ಗಳನ್ನು, ಶಾಲೆಗಳಲ್ಲಿ ಬೇಕಾದ ಅಗತ್ಯ ಮಾರ್ಗದರ್ಶನಗಳನ್ನು ನೀಡಲು ತಮಿಳುನಾಡು ಸರ್ಕಾರಕ್ಕೆ ಸಾಧ್ಯವಾಗಿಲ್ಲವೇ..?' ಎಂದು ಪ್ರಶ್ನೆ ಮಾಡಿದ್ದಾರೆ. ವಿಜಯ್‌ವೇಲ್‌ ಎಂಬ ಮತ್ತೊಬ್ಬ ಟ್ವಿಟ್ಟರ್‌ ಬಳಕೆದಾರರು ನೀಟ್‌ ವಿರುದ್ಧ ಅಭಿಪ್ರಾಯ ವ್ಯಕ್ತ ಪಡಿಸಿದ್ದು, 'ನೀಟ್‌ನಿಂದಾಗಿ 12ನೇ ತರಗತಿಯ ಅಂಕಗಳು ಮೌಲ್ಯ ಕಳೆದುಕೊಳ್ಳುತ್ತಿದೆ. ಇದೊಂದು ಸಮಸ್ಯೆಯಾದರೆ, ನೀಟ್‌ ಪಾಸಾಗಬೇಕಾದರೆ ದುಬಾರಿ ಕೋಚಿಂಗ್ ಶುಲ್ಕ ತೆರಬೇಕು. ಇದು ಬಡವರಿಗೆ ಅನಾನುಕೂಲ. ನೀಟ್‌ ಶ್ರೀಮಂತರ, ನಗರವಾಸಿಗಳ ಹಾಗೂ ಸಿಬಿಎಸ್ಇ ವಿದ್ಯಾರ್ಥಿಗಳ ಪರವಾಗಿದೆ ಅಷ್ಟೇ' ಎಂದು ಹೇಳಿದ್ದಾರೆ. ಹೀಗೆ ಟ್ವಿಟ್ಟರ್‌ನಲ್ಲಿ ನೀಟ್‌ ಬಗ್ಗೆ ಹಲವು ಮಂದಿ ಹಲವು ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿದ್ದಾರೆ.ತಮ್ಮದೇ ವಿಶ್ಲೇಷಣೆ ಮಾಡುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಕೂಡ ದಯಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ನೀಟ್‌ ಅಭ್ಯರ್ಥಿಗಳಲ್ಲಿ ಕೈ ಮುಗಿದು ಮನವಿ ಮಾಡಿದ್ದಾರೆ. ಏನಾದರೂ ಆಗಲಿ, ಆಗುವುದಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ಮಾತ್ರ ಬಾಲಿಶ ನಿರ್ಧಾರ.