: ಪಂಚ ರಾಜ್ಯ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ಸಮಗ್ರವಾಗಿ ಅವಲೋಕಿಸಿದರೆ, ಬಿಜೆಪಿಗೆ ಹೆಚ್ಚಿನ ಭಾಗ ಅನುಕೂಲಕರವಾದ ತೀರ್ಪೇ ಬಂದಂತಾಗಿದೆ. ಮತಗಟ್ಟೆ ಸಮೀಕ್ಷೆಯ ಈ ಭವಿಷ್ಯವೇ ನಿಜವಾದ್ರೆ, ಬಿಜೆಪಿಗೆ ಗುಡ್ ನ್ಯೂಸ್ ಸಿಕ್ಕಂತೆಯೇ..! ಏಕೆಂದರೆ, ಕೊರೊನಾ ವೈರಸ್ ಆರ್ಭಟದ ನಡುವೆ ಹಲವು ಸವಾಲುಗಳು ಬಿಜೆಪಿಗೆ ಇದ್ದವು. 5 ರಾಜ್ಯಗಳ ಚುನಾವಣೆಯಾದ್ರೂ ಕೇಂದ್ರ ಸರ್ಕಾರದ ವಿರುದ್ಧದ ಆಡಳಿತ ವಿರೋಧಿ ಕೂಗು ಈ ಮೇಲೆ ಪ್ರಭಾವ ಬೀರಬಹುದು ಎಂದು ಅಂದಾಜಿಸಲಾಗಿತ್ತು.
ಚುನಾವಣೆಯ ಮತದಾನದ ವೇಳೆ ಕೊರೊನಾ 2ನೇ ಅಲೆ ಅಬ್ಬರ ಅಷ್ಟರ ಮಟ್ಟಿಗೆ ಇರದಿದ್ದರೂ, ಕೃಷಿ ಕಾಯ್ದೆ, ಸಿಎಎಗಳು ಈ ಚುನಾವಣೆ ಮೇಲೆ ಪ್ರಭಾವ ಬೀರಬಹುದು ಎಂದೇ ಅಂದಾಜಿಸಲಾಗಿತ್ತು. ಆದ್ರೆ, ಎಕ್ಸಿಟ್ ಪೋಲ್ನ ಭವಿಷ್ಯವಾಣಿ ನೋಡಿದರೆ, ಈ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ..!
ಬಂಗಾಳದಲ್ಲಿ ಸೋತರೂ ಗೆದ್ದಂತೆ..!
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರ ಹಿಡಿಯಬಹುದು ಎಂದು 2 ಸಮಿಕ್ಷಾ ಸಂಸ್ಥೆಗಳು ಹೇಳುತ್ತಿದ್ದರೆ, ಒಂದು ಸಂಸ್ಥೆ ಮಾತ್ರ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿಯುತ್ತಿದೆ. ಎಕ್ಸಿಟ್ ಪೋಲ್ ಸಮೀಕ್ಷೆಯ ಪ್ರಕಾರ ಅಧಿಕಾರ ಹಿಡಿಯದಿದ್ದರೂ ಸರಿಸುಮಾರು 100ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿಗೆ ಸಿಗಬಹುದು ಎಂಬ ವಿಶ್ಲೇಷಣೆ ಕೇಳಿ ಬರ್ತಿದೆ. ಮಮತಾ ಬ್ಯಾನರ್ಜಿ ಸಾರಥ್ಯದ ಟಿಎಂಸಿ ಮೈತ್ರಿಕೂಟಕ್ಕೆ ಸರಳ ಬಹುಮತ ಸಿಗೋದು ಖಚಿತವೇ. ಒಂದು ವೇಳೆ ಸರಳ ಬಹುಮತ ಸಿಗದಿದ್ದರೆ ಕಾಂಗ್ರೆಸ್ ಹಾಗೂ ಪಕ್ಷೇತರರ ನೆರವಿನಿಂದ ಸರ್ಕಾರ ರಚಿಸಬಹುದೇನೋ.. ಆದ್ರೆ, ಇಲ್ಲಿ ಸೋತು ಗೆಲ್ಲೋದು ಬಿಜೆಪಿಯೇ..!
ಏಕೆಂದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 34 ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಬಿಜೆಪಿ, ಈ ಬಾರಿ 100ಕ್ಕೂ ಹೆಚ್ಚು ಸ್ಥಾನ ಗಳಿಸಿದರೆ ಅದನ್ನು ಗೆಲುವೆಂದೇ ಹೇಳಬೇಕು..! ಆಡಳಿತಾರೂಢ ಟಿಎಂಸಿ ಎಂಬ ಪ್ರಬಲ ಶಕ್ತಿಯನ್ನು ಎದುರಿಸೋದು, ಮೇಲುಗೈ ಸಾಧಿಸೋದು ಬಿಜೆಪಿಗೆ ಸವಾಲೇ ಸರಿ..! ಈ ಸವಾಲನ್ನು ಬಿಜೆಪಿ ಸಮರ್ಥವಾಗಿ ಎದುರಿಸಿದೆಯಾ..? ಫಲಿತಾಂಶದ ದಿನ ಉತ್ತರ ಸಿಗಲಿದೆ..!
ಪುದುಚೆರಿಯಲ್ಲಿ ಕಮಲ ಕಮಾಲ್..!
ಚುನಾವಣೆ ಘೋಷಣೆಗೆ ಕೆಲವೇ ದಿನ ಮುನ್ನ ನಾಟಕೀಯವಾಗಿ ಪತನಗೊಂಡ ಪುದುಚೆರಿ ಕೇಂದ್ರಾಡಳಿತ ಪ್ರದೇಶದ ಸರ್ಕಾರ, ಇದೀಗ ಎನ್ಡಿಎ ತೆಕ್ಕೆಗೆ ಸೇರುವ ಸಾಧ್ಯತೆ ಇದೆ. ಈ ಮೂಲಕ ಕಾಂಗ್ರೆಸ್ ಹಾಗೂ ಡಿಎಂಕೆಗೆ ಭಾರೀ ಮುಖಭಂಗವೇ ಆದಂತಾಗಿದೆ. ಎಕ್ಸಿಟ್ ಪೋಲ್ ಸಮೀಕ್ಷೆಯ ಅಂದಾಜೇ ಸತ್ಯವಾದ್ರೆ, ಬಿಜೆಪಿಗೆ ಇದು ಅಭೂತಪೂರ್ವ ಗೆಲುವು..!
ಅಸ್ಸಾಂನಲ್ಲಿ ಮತ್ತೆ ಕೇಸರಿ..!
ಅಸ್ಸಾಂ ವಿಧಾನಸಭೆಯಲ್ಲಿ ಆಡಳಿತಾರೂಢ ಎನ್ಡಿಎ ಮತ್ತೊಮ್ಮೆ ಭಾರೀ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯವಾಣಿ ಹೇಳುತ್ತಿದೆ. ಇಲ್ಲಿ ಯುಪಿಎ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರೂ ಕೂಡಾ ಕಾಂಗ್ರೆಸ್ ಮೈತ್ರಿಕೂಟವನ್ನು ಅಧಿಕಾರದಿಂದ ದೂರ ಇಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂಬ ಸುಳಿವು, ರಾಷ್ಟ್ರೀಯ ಮಟ್ಟದಲ್ಲೂ ಬಿಜೆಪಿಗೆ ಧನಾತ್ಮಕ ಸಂದೇಶ ರವಾನಿಸಿದೆ.
ಕೇರಳದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ..! ಆದರೂ ಗುರ್ತಿಸಿಕೊಳ್ತಿದೆ..!
ಕೇರಳದಲ್ಲಿ ಬಿಜೆಪಿ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾ ಸ್ಥಿತಿಯಲ್ಲಿದೆ. ಆಡಳಿತಾರೂಢ ಎಲ್ಡಿಎಫ್ ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆ ಅನ್ನೋದು ಎಕ್ಸಿಟ್ ಪೋಲ್ ಸಮೀಕ್ಷೆಯ ಅಂದಾಜು. ಆದ್ರೆ, ಬಿಜೆಪಿ ಪಕ್ಷವು ಆಡಳಿತಾರೂಢ ಎಲ್ಡಿಎಫ್ ಮೈತ್ರಿಕೂಟದಲ್ಲೂ ಇಲ್ಲ, ಪ್ರತಿಪಕ್ಷ ಯುಡಿಎಫ್ ಮೈತ್ರಿಕೂಟದಲ್ಲೂ ಇಲ್ಲ. ಆದ್ರೂ ಕಳೆದ ಚುನಾವಣೆಯಲ್ಲಿ 1 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಬಾರಿ ಎನ್ಡಿಎ ಮೈತ್ರಿಕೂಟದ ಮೂಲಕ 3 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ.
ತಮಿಳುನಾಡಿನಲ್ಲಿ ಹರಡದ ಕೇಸರಿ 'ಖುಷ್ಬೂ'..?
ರಜನಿಕಾಂತ್ರನ್ನು ಬಿಜೆಪಿಗೆ ಸೆಳೆಯಲು ಯತ್ನಿಸಿದ ಬಿಜೆಪಿ, ಖುಷ್ಬೂ ಸಾರಥ್ಯದಲ್ಲಿ ಚುನಾವಣೆಗೆ ಒಂದು ವರ್ಷ ಮುನ್ನವೇ ಪಕ್ಷವನ್ನು ಸಜ್ಜುಗೊಳಿಸಿತ್ತು. ಕರುನಾಡಿನ ರಾಜಕಾರಣಿಗಳೂ ಪಕ್ಕದ ತಮಿಳುನಾಡಿನಲ್ಲಿ ಸಂಚರಿಸಿದ್ದರು. ಪ್ರಧಾನಿಯಾದಿಯಾಗಿ ಘಟಾನುಘಟಿಗಳೇ ದ್ರಾವಿಡ ನಾಡಲ್ಲಿ ಪ್ರಭಾವ ಬೀರಲು ಯತ್ನಿಸಿದರು. ಆದ್ರೆ, ಸ್ಟ್ಯಾಲಿನ್ ಎದುರು ಪಳನಿ-ಪನ್ನೀರ್ ಆಟವೇ ನಡೆಯದಿರುವಾಗ ಬಿಜೆಪಿ ಲೆಕ್ಕಕ್ಕುಂಟೇ..? ಈ ಹಂತದಲ್ಲಿ ಕಮಲ್ ಹಾಸನ್ ಕೂಡಾ ಮೂಲೆಗುಂಪಾಗಿರುವಾಗ ಬಿಜೆಪಿಯ ‘ಖುಷ್ಬೂ’ ತಮಿಳರ ನಾಡಲ್ಲಿ ಹರಡಲು ಸಾಧ್ಯವೇ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರ..! ಆದ್ರೂ ಪಕ್ಷಕ್ಕೆ ನೆಲೆಯೇ ಇಲ್ಲದ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಸೀಟ್ ಗೆದ್ದರೂ ಕೂಡಾ ಅದು ಬಿಜೆಪಿಗೆ ಲಾಭವೇ..!