ಲಸಿಕೆ ಕೊಡದಿದ್ದರೆ ವಿಮಾನ ಹಾರಿಸೊಲ್ಲ: ಏರ್ ಇಂಡಿಯಾ ಪೈಲಟ್‌ಗಳ ಬೆದರಿಕೆ

ಭಾರತದಾದ್ಯಂತ ಪೈಲಟ್‌ಗಳಿಗೆ ಲಸಿಕೆ ಶಿಬಿರಗಳನ್ನು ನಡೆಸುವ ಮೂಲಕ ಕೋವಿಡ್ ಲಸಿಕೆಗಳನ್ನು ನೀಡದೆ ಹೋದರೆ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಏರ್ ಇಂಡಿಯಾ ಪೈಲಟ್‌ಗಳ ಒಕ್ಕೂಟ ಸಂಸ್ಥೆಗೆ ಎಚ್ಚರಿಕೆ ನೀಡಿದೆ.

ಲಸಿಕೆ ಕೊಡದಿದ್ದರೆ ವಿಮಾನ ಹಾರಿಸೊಲ್ಲ: ಏರ್ ಇಂಡಿಯಾ ಪೈಲಟ್‌ಗಳ ಬೆದರಿಕೆ
Linkup
ಹೊಸದಿಲ್ಲಿ: ದೇಶಾದ್ಯಂತ ಇರುವ ಎಲ್ಲ ಪೈಲಟ್‌ಗಳಿಗೂ ಲಸಿಕೆ ನೀಡಲು ಶಿಬಿರಗಳನ್ನು ಸ್ಥಾಪಿಸುವಲ್ಲಿ ವಿಮಾನಯಾನ ಸಂಸ್ಥೆ ವಿಫಲವಾದರೆ, ಕೆಲಸ ಮಾಡುವುದನ್ನು ನಿಲ್ಲಿಸಲಾಗುವುದು ಎಂದು ಪೈಲಟ್‌ಗಳ ಒಕ್ಕೂಟ - ಐಸಿಪಿಎ ಬೆದರಿಕೆ ಹಾಕಿದೆ. ಏರ್ ಇಂಡಿಯಾದ ಕಾರ್ಯಾಚರಣೆ ನಿರ್ದೇಶಕ ಆರ್ ಎಸ್ ಸಂಧು ಅವರಿಗೆ ಪತ್ರ ಬರೆದಿರುವ ಐಸಿಪಿಎ, 'ಹಾರಾಟ ಸಿಬ್ಬಂದಿಗೆ ಯಾವುದೇ ಆರೋಗ್ಯ ಆರೈಕೆಯ ಸೌಲಭ್ಯವಿಲ್ಲ, ವಿಮೆ ಇಲ್ಲ. ಇದರ ಜತೆಗೆ ಸಮಯ ಸಿಕ್ಕಾಗೆಲ್ಲ ದೊಡ್ಡ ಮೊತ್ತದ ವೇತನ ಕಡಿತ ಮಾಡಲಾಗುತ್ತಿದೆ. ಲಸಿಕೆಗಳಿಲ್ಲದೆ ನಮ್ಮ ಪೈಲಟ್‌ಗಳ ಜೀವಗಳನ್ನು ಅಪಾಯಕ್ಕೆ ಸಿಲುಕಿಸುವುದನ್ನು ಮುಂದುವರಿಸುವ ಸ್ಥಿತಿಯಲ್ಲಿ ನಾವು ಇಲ್ಲ' ಎಂದು ಹೇಳಿದೆ. 'ಈಗಾಗಲೇ ಮಾರಕ ವೈರಸ್‌ ಸೋಂಕಿನಿಂದ ಹಾಸಿಗೆ ಹಿಡಿದಿರುವ ಸಹೋದ್ಯೋಗಿಗಳು ಮತ್ತು ಅವರ ಕುಟುಂಬದವರಿಗೆ ಸಹಾಯ ಮಾಡುವುದರಲ್ಲಿ ನಮ್ಮ ಬಳಿಯಿದ್ದ ಆರ್ಥಿಕ ಸಂಪನ್ಮೂಲ ಬರಿದಾಗುತ್ತಿದೆ' ಎಂದು ಒಕ್ಕೂಟ ಕಳವಳ ವ್ಯಕ್ತಪಡಿಸಿದೆ. 'ಪ್ಯಾನ್ ಇಂಡಿಯಾ ಮಾದರಿಯಲ್ಲಿ 18 ವರ್ಷ ಮೇಲಿನ ಎಲ್ಲ ಸಿಬ್ಬಣಂದಿಗೂ ಆದ್ಯತೆ ಮೇರೆಗೆ ಲಸಿಕೆ ನೀಡಲು ಶಿಬಿರಗಳನ್ನು ಆರಂಭಿಸುವಲ್ಲಿ ಏರ್ ಇಂಡಿಯಾ ವಿಫಲವಾದರೆ ನಾವು ಕೆಲಸ ಮಾಡುವುದನ್ನು ನಿಲ್ಲಿಸುತ್ತೇವೆ' ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದೆ. ಒಕ್ಕೂಟದ ಪ್ರಕಾರ, ಏರ್ ಇಂಡಿಯಾದ ಅನೇಕ ಸಿಬ್ಬಂದಿ ಕೋವಿಡ್ ಪಾಸಿಟಿವ್‌ಗೆ ಒಳಗಾಗಿದ್ದಾರೆ. ಜತೆಗೆ ಆಕ್ಸಿಜನ್ ಸಿಲಿಂಡರ್ ಪಡೆಯಲು ಒದ್ದಾಡುತ್ತಿದ್ದಾರೆ. 'ನಾವು ಆಸ್ಪತ್ರೆಗೆ ದಾಖಲಾಗುವುದರಿಂದ ದೂರವಿರಲು ಪ್ರಯತ್ನಿಸುತ್ತಿದ್ದೇವೆ. ಮ್ಯಾನೇಜ್ಮೆಂಟ್ ಈ ಮುಂಚೆ ಮಾಡುತ್ತಿದ್ದಂತೆಯೇ ಬಾಯಿ ಮಾತಲ್ಲಿ ಹೇಳುವುದು, ಸುತ್ತೋಲೆ ಮತ್ತು ಪತ್ರಗಳನ್ನು ಹೊರಡಿಸುವುದರ ಹೊರತಾಗಿ ಬೇರೇನೂ ಮಾಡುತ್ತಿಲ್ಲ. ಇದರಿಂದ ಯಾವ ಪ್ರಯೋಜನವೂ ಆಗುತ್ತಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಮ್ಯಾನೇಜ್ಮೆಂಟ್ ತನ್ನ ಸೇವೆಯನ್ನು ಮಾತ್ರ ಮಾಡಿಸಿಕೊಳ್ಳುತ್ತಿದೆ. ಈ ನಿಲುವಿನಿಂದ ಒಕ್ಕೂಟದ ಸದಸ್ಯರು ಬೇಸರಗೊಂಡಿದ್ದಾರೆ. ಕೆಲವು ನೆಲೆಗಳಲ್ಲಿ ಲಸಿಕೆ ಶಿಬಿರಗಳನ್ನು ನಡೆಸಿ ಅವರಿಗೆ ಲಸಿಕೆಗಳನ್ನು ನೀಡಲಾಗುತ್ತಿದೆ. ಆದರೆ ಪೈಲಟ್‌ಗಳನ್ನು ಇದರಿಂದ ಹೊರಗಿರಿಸಲಾಗುತ್ತಿದೆ ಎಂದು ತಿಳಿಸಿದೆ.