![](https://vijaykarnataka.com/photo/82313839/photo-82313839.jpg)
ಚೆನ್ನೈ (ತಮಿಳುನಾಡು): ಅಮ್ಮ ಜಯಲಲಿತಾ ಇಲ್ಲದ ಎಐಎಡಿಎಂಕೆಗೆ ಆಡಳಿತ ವಿರೋಧಿ ಅಲೆಯ ಬಿಸಿ ಸಖತ್ತಾಗೇ ತಟ್ಟಿದೆ. ಅಯ್ಯ ಕರುಣಾನಿಧಿ ಇಲ್ಲದ ಡಿಎಂಕೆಯತ್ತ ಮತ್ತೊಮ್ಮೆ ತಮಿಳುನಾಡು ಮತದಾರ ಮನಸೋತಿದ್ದಾನೆ.
ತಮಿಳುನಾಡು ವಿಧಾನಸಭಾ ಚುನಾವಣೆಯ ಎಕ್ಸಿಟ್ ಪೋಲ್ ಸಮೀಕ್ಷೆ ನಡೆಸಿದ ಹಲವು ಸಂಸ್ಥೆಗಳು ಸರಾಸಗಟಾಗಿ ಡಿಎಂಕೆಗೆ ಜೈ ಎಂದಿವೆ. ಅದೂ ಕೂಡಾ ಭರ್ಜರಿ ಬಹುಮತದೊಂದಿಗೆ ಅಧಿಕಾರ ಹಿಡಿಯುತ್ತಾರೆ ಎಂದೇ ಭವಿಷ್ಯ ನುಡಿದಿವೆ.
ಹಾಗೆ ನೋಡಿದ್ರೆ, ಇದು ಕರುಣಾನಿಧಿ ಹಾಗೂ ಜಯಲಲಿತಾ ಇಲ್ಲದ ಮೊದಲ ಚುನಾವಣೆ. ಇಬ್ಬರೂ ದಿಗ್ಗಜರ ನಡುವಣ ಕಾದಾಟದಲ್ಲಿ ಮೂರನೆಯವರಿಗೆ ಯಾವುದೇ ಅವಕಾಶ ಇರಲಿಲ್ಲ. ಒಮ್ಮೆ ಅಧಿಕಾರ ಹಿಡಿದರೆ, ಮಗದೊಮ್ಮೆ ಎಡಿಎಡಿಎಂಕೆ ಅಧಿಕಾರ ಹಿಡಿಯುತ್ತೆ ಎಂಬ ಜಿದ್ದಾಜಿದ್ದಿನ ರಾಜಕೀಯ ಸಂಪ್ರದಾಯ ತಮಿಳುನಾಡಿನಲ್ಲಿ ನಡೆದು ಬಂದಿತ್ತು. ಯಾವಾಗ ಅಮ್ಮ ಹಾಗೂ ಅಯ್ಯ ಕಣ್ಮರೆಯಾದರೋ, ಆ ನಂತರ ಬಂದ ಚುನಾವಣೆಯಲ್ಲಿ ಅವಕಾಶಕ್ಕಾಗಿ ಬಿಜೆಪಿ ಹಾಗೂ ಕಮಲ್ ಹಾಸನ್ ಸಾರಥ್ಯದ ಎಂಎನ್‌ಎಂ ಪಕ್ಷಗಳು ಪ್ರಯತ್ನಿಸಿದವು. ಆದ್ರೆ, ಯಾರ ಪ್ರಯತ್ನಕ್ಕೂ ಮತದಾರ ಬೆಲೆ ಕೊಟ್ಟಂತೆ ಕಾಣುತ್ತಿಲ್ಲ.
ಚುನಾವಣೆಗೆ ಕೆಲ ದಿನ ಮುನ್ನವೇ ಶಶಿಕಲಾ ಬೆಂಗಳೂರು ಜೈಲಿನಿಂದ ಹೊರಬಿದ್ದರು. ಶಶಿಕಲಾ ಆಗಮನದ ಸುಳಿವು ಸಿಕ್ಕಿದ್ದ ಕಾರಣ ಪನ್ನೀರ್ ಸೆಲ್ವಂ ಹಾಗೂ ಪಳನಿಸ್ವಾಮಿ ಇಬ್ಬರೂ ಒಂದಾಗಿ ಹೋರಾಡುವ ಪಣ ತೊಟ್ಟಿದ್ದರು. ಅಮ್ಮನಿಲ್ಲದಿದ್ದರೂ ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿಎಂಕೆ ಪಕ್ಷ ಸಂಘಟಿಸಿತ್ತು. ಆಡಳಿತಾರೂಢ ಪಕ್ಷವಾದ ಕಾರಣ ಕೊನೆಯ ಬಜೆಟ್ ಕೂಡಾ ಪಕ್ಷದ ಚುನಾವಣಾ ಪ್ರಣಾಳಿಕೆಯಂತೆಯೇ ಇತ್ತು. ಆದ್ರೆ, ಪಳನಿ ಹಾಗೂ ಪನ್ನೀರ್‌ಗೆ ಮತದಾರ ಮನೆಗೆ ಹೋಗಿ ಎಂಬ ಸಂದೇಶ ನೀಡಿದಂತೆ ಕಂಡು ಬರ್ತಿದೆ.
ಇತ್ತ, ಮಧುರೈ ಭಾಗದಲ್ಲಿ ಪ್ರಬಲವಾಗಿರುವ ಡಿಎಂಕೆ ನಾಯಕ, ಸ್ಟ್ಯಾಲಿನ್ ಅಣ್ಣ ಅಳಗಿರಿ, ಮುನಿಸು ಮರೆತು ಕೈಜೋಡಿಸಿದ ಕಾರಣ, ಇದೀಗ ಕರುಣಾನಿಧಿ ಉತ್ತರಾಧಿಕಾರಿಯಾಗಿ ತಮಿಳುನಾಡಿನ ಚುಕ್ಕಾಣಿ ಹಿಡಿಯಲು ಸ್ಟ್ಯಾಲಿನ್ ಸಜ್ಜಾಗಿದ್ದಾರೆ. ಕಾಂಗ್ರೆಸ್ ಕೂಡಾ ಡಿಎಂಕೆಗೆ ಮಿತ್ರ ಪಕ್ಷವಾಗಿರುವ ಕಾರಣ, ಕೊಂಚ ಸಮಾಧಾಕರ ಬಹುಮಾನ ಪಡೆದಂತಾಗಿದೆ. ತಮಿಳುನಾಡಿನಲ್ಲಿ ಇನ್ಮುಂದೆ ಸ್ಟ್ಯಾಲಿನ್ ಶಕೆ ಆರಂಭವಾಗಲಿದೆ. ಹೊಸ ಹಾಗೂ ವಿಭಿನ್ನ ವಿಚಾರಧಾರೆಗಳ ನಾಯಕ ಎಂದೇ ಗುರ್ತಿಸಿಕೊಂಡಿರುವ ಸ್ಟ್ಯಾಲಿನ್‌ಗೆ ಡಿಎಂಕೆ ಪಕ್ಷದಲ್ಲಿ ಮಾತ್ರವಲ್ಲ, ತಮಿಳುನಾಡಿನಲ್ಲೂ ಡಿಫ್ರೆಂಟ್ ಇಮೇಜ್ ಇದೆ. ಭವಿಷ್ಯವೇ ನಿಜವಾಗಿ ಸ್ಟ್ಯಾಲಿನ್ ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಅವರ ಕಾರ್ಯವೈಖರಿಯೇ ಭವಿಷ್ಯದ ತಮಿಳುನಾಡು ರಾಜಕೀಯವನ್ನು ನಿರ್ಧರಿಸಲಿದೆ.