2022 ಏಪ್ರಿಲ್‌-ಮೇನಲ್ಲಿ 5ಜಿ ಸ್ಪೆಕ್ಟ್ರಮ್‌ ಹರಾಜು ಸಾಧ್ಯತೆ - ಕೇಂದ್ರ ಸಚಿವ

ದೂರ ಸಂಪರ್ಕ ವಲಯದ ನಿಯಂತ್ರಕ ಟ್ರಾಯ್‌ ಬಹು ನಿರೀಕ್ಷಿತ 5ಜಿ ಸ್ಪೆಕ್ಟ್ರಮ್‌ ಹರಾಜಿನ ರೂಪು ರೇಷೆಯನ್ನು ರೂಪಿಸಲಿದ್ದು, 2022ರ ಫೆಬ್ರವರಿಯಲ್ಲಿ ತನ್ನ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಮುಂದಿನ ವರ್ಷದ ಏಪ್ರಿಲ್‌ - ಮೇನಲ್ಲಿ ಹರಾಜು ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಅಶ್ವಿನ್‌ ವೈಷ್ಣವ್‌ ತಿಳಿಸಿದ್ದಾರೆ.

2022 ಏಪ್ರಿಲ್‌-ಮೇನಲ್ಲಿ 5ಜಿ ಸ್ಪೆಕ್ಟ್ರಮ್‌ ಹರಾಜು ಸಾಧ್ಯತೆ - ಕೇಂದ್ರ ಸಚಿವ
Linkup
ಹೊಸದಿಲ್ಲಿ: ಬಹು ನಿರೀಕ್ಷಿತ ಸ್ಪೆಕ್ಟ್ರಮ್‌ ಹರಾಜು ಮುಂದಿನ ವರ್ಷ (2022)ದ ಏಪ್ರಿಲ್‌ - ಮೇನಲ್ಲಿ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಅಶ್ವಿನ್‌ ವೈಷ್ಣವ್‌ ಗುರುವಾರ ತಿಳಿಸಿದ್ದಾರೆ. 'ಟೈಮ್ಸ್‌ ನೌ ಶೃಂಗ 2021'ವನ್ನು ಉದ್ದೇಶಿಸಿ ಮಾತನಾಡಿದ ಅವರು, ದೂರ ಸಂಪರ್ಕ ವಲಯದ ನಿಯಂತ್ರಕ ಟ್ರಾಯ್‌, ಹರಾಜಿನ ರೂಪು ರೇಷೆಯನ್ನು ರೂಪಿಸಲಿದ್ದು, 2022ರ ಫೆಬ್ರವರಿಯಲ್ಲಿ ತನ್ನ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು. ಟ್ರಾಯ್‌ ವರದಿ ಸಲ್ಲಿಕೆಯಾಗುವ ತನಕ ನಿರ್ದಿಷ್ಟ ದಿನಾಂಕವನ್ನು ಹೇಳುವುದು ಕಷ್ಟ. ಆದರೆ ಏಪ್ರಿಲ್‌ - ಮೇ ಅವಧಿಯಲ್ಲಿ ಹರಾಜು ನಡೆಯುವ ಅಂದಾಜಿದೆ. ಹರಾಜು ಅನ್ನು ಸುಲಲಿತ ತಂತ್ರಜ್ಞಾನ, ಮುಂಬರುವ ಹಲವಾರು ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟು ಕೊಂಡು ನಡೆಸಲಾಗುವುದು. ಇದರಿಂದಾಗಿ 4ಜಿಯ ವ್ಯಾಪಕ ಬಳಕೆಯ ಮಾದರಿಯಲ್ಲಿ 5ಜಿ ಕೂಡ ಬಳಕೆಯಾಗಲಿದೆ. ಹೀಗಾಗಿ ಕನಿಷ್ಠ ಮುಂದಿನ 5-10 ವರ್ಷಗಳ ದೂರದೃಷ್ಟಿಯೊಂದಿಗೆ ಹಾರಜು ಪ್ರಕ್ರಿಯೆಯನ್ನು ಆಯೋಜಿಸಲಾಗುವುದು ಎಂದರು.

ಈ ವರ್ಷದ ಮಾರ್ಚ್‌ನಲ್ಲಿ ಸ್ಪೆಕ್ಟ್ರಮ್‌ ಹರಾಜು ನಡೆದಿತ್ತು. ಆಗ 77,800 ಕೋಟಿ ರೂ.ಗಳ, 855.6 ಮೆಗಾ ಹರ್ಟ್ಸ್ ಸ್ಪೆಕ್ಟ್ರಮ್‌ ಹರಾಜು ನಡೆದಿತ್ತು. ದೂರ ಸಂಪರ್ಕ ಕ್ಷೇತ್ರದ ನಿಯಂತ್ರಕದ ಸ್ವರೂಪದಲ್ಲಿ ಮುಂದಿನ 2 - 3 ವರ್ಷಗಳಲ್ಲಿ ಬದಲಾವಣೆ ಆಗಲಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಸರಕಾರ ಟೆಲಿಕಾಂ ವಲಯಕ್ಕೆ ಮಹತ್ವದ ಸುಧಾರಣೆ ಕ್ರಮಗಳನ್ನು ರೂಪಿಸಿತ್ತು. ಟೆಲಿಕಾಂ ಕ್ಷೇತ್ರಕ್ಕೆ ಹೂಡಿಕೆಯನ್ನು 2 - 4 ಪಟ್ಟು ಹೆಚ್ಚಿಸುವುದು ಇದರ ಗುರಿಯಾಗಿದೆ. ಇದರಿಂದ ಸೇವೆಯ ಗುಣಮಟ್ಟ ವೃದ್ಧಿಸಲಿದೆ. ಟೆಲಿಕಾಂ ವಲಯದಲ್ಲಿ ಕಾಲ್‌ ಡ್ರಾಪ್‌ ಸಮಸ್ಯೆಗಳು ಕಡಿಮೆಯಾಗಲು ಹೂಡಿಕೆ ಹೆಚ್ಚಳದ ಅಗತ್ಯ ಇದೆ. ಹೀಗಿದ್ದರೂ ಭವಿಷ್ಯದಲ್ಲಿ 4ಜಿ, 5ಜಿ ಮತ್ತು 6ಜಿ ತಂತ್ರಜ್ಞಾನದ ಪ್ಯಾಕೇಜ್‌ನಿಂದ ಗಣನೀಯ ಅಭಿವೃದ್ಧಿಯಾಗಲಿದೆ ಎಂದರು. '4ಜಿ ತಂತ್ರಜ್ಞಾನಕ್ಕೆ ಅಗತ್ಯವಿರುವ ಏರ್ಪಾಟುಗಳನ್ನು ಮಾಡಲಾಗಿದೆ. 5ಜಿಗೆ ಅಗತ್ಯವಿರುವ ಏರ್ಪಾಟುಗಳಲ್ಲಿ ಶೇ. 70 - 75 ಪೂರ್ಣವಾಗಿದೆ. ಟೆಲಿಕಾಂ ಉತ್ಪಾದನೆಗೆ ಪಿಎಲ್‌ಐ (ಉತ್ಪಾದನೆ ಆಧಾರಿತ ಇನ್ಸೆಂಟಿವ್‌) ಯೋಜನೆ ಕಲ್ಪಿಸಲಾಗಿದ್ದು, 35 ಉತ್ಪಾದಕರು ಈಗಾಗಲೇ ಇದರ ಪ್ರಯೋಜನ ಗಳಿಸಿದ್ದಾರೆ' ಎಂದು ಸಚಿವರು ವಿವರ ನೀಡಿದರು.