ಐಟಿ ಕಂಪನಿಗಳಿಂದ ಈ ವರ್ಷ 1 ಲಕ್ಷ ಹೊಸಬರಿಗೆ ಉದ್ಯೋಗ

ಈ ವರ್ಷವೂ ನೇಮಕ ಟ್ರೆಂಡ್‌ ಆಶಾದಾಯಕವಾಗಿ ಇರಲಿದ್ದು, ಐಟಿ ಕಂಪನಿಗಳು ವೇತನ ಹೆಚ್ಚಳ, ಬೋನಸ್‌ಗಳನ್ನೂ ನೀಡುತ್ತಿವೆ. ಕೋವಿಡ್‌ ಬಿಕ್ಕಟ್ಟಿನ ನಂತರ ಕಂಪನಿಗಳಿಂದ ಐಟಿ ತಂತ್ರಜ್ಞಾನ ಬಳಕೆ ಹೆಚ್ಚಳವಾಗಿರುವುದೇ ಇದಕ್ಕೆ ಕಾರಣ.

ಐಟಿ ಕಂಪನಿಗಳಿಂದ ಈ ವರ್ಷ 1 ಲಕ್ಷ ಹೊಸಬರಿಗೆ ಉದ್ಯೋಗ
Linkup
ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ ಕಂಪನಿಗಳು ಈ ವರ್ಷ 1 ಲಕ್ಷಕ್ಕೂ ಹೆಚ್ಚು ಮಂದಿ ಹೊಸಬರಿಗೆ ಉದ್ಯೋಗ ನೀಡಲಿವೆ. ವಿಶ್ವಾದ್ಯಂತ ಕಂಪನಿಗಳು ಹೊಸ ತಂತ್ರಜ್ಞಾನಗಳಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿವೆ. 2020-21ರಲ್ಲಿ ಐಟಿ ಕಂಪನಿಗಳು ಶೇ.45ರಷ್ಟು ಹೆಚ್ಚು ಉದ್ಯೋಗಿಗಳನ್ನು ಸೇರಿಸಿಕೊಂಡಿವೆ. 2021-22ರಲ್ಲೂ ನೇಮಕಾತಿಯ ಟ್ರೆಂಡ್‌ ಮುಂದುವರಿಯಲಿದೆ. ಜತೆಗೆ ವೇತನ ಹೆಚ್ಚಳ, ಬೋನಸ್‌ಗಳನ್ನೂ ಕಂಪನಿಗಳು ನೀಡುತ್ತಿವೆ. ಈ ವರ್ಷ ಇನ್ಫೋಸಿಸ್‌ 26,000 ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್‌ 12,000 ಹೊಸಬರನ್ನು ಮಾಡಿಕೊಳ್ಳಲಿದೆ. ವಿಪ್ರೊ 2020ರಲ್ಲಿ 9,000 ಮಂದಿಯನ್ನು ನೇಮಿಸಿತ್ತು ಹಾಗೂ 2021ರಲ್ಲಿ ಇದಕ್ಕಿಂತಲೂ ಹೆಚ್ಚು ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದೆ. ಸಿಬ್ಬಂದಿ ಸಂಖ್ಯೆ 5 ಲಕ್ಷಕ್ಕೆ ಏರಿಕೆ ನಿರೀಕ್ಷೆ ಐಟಿ ದಿಗ್ಗಜ ಹಾಗೂ ಭಾರತದ ಅತಿ ದೊಡ್ಡ ಸಾಫ್ಟ್‌ವೇರ್‌ ರಫ್ತುದಾರ ಟಿಸಿಎಸ್‌, 2021-22ರಲ್ಲಿ 40,000 ಹೊಸಬರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಿದೆ. ಇದರೊಂದಿಗೆ ಕಂಪನಿಯ ಉದ್ಯೋಗಿಗಳ ಸಂಖ್ಯೆ ಈ ವರ್ಷ 5 ಲಕ್ಷದ ಗಡಿ ದಾಟಲಿದೆ. ಟಿಸಿಎಸ್‌ನಲ್ಲಿ ಈಗ 4,88,649 ಮಂದಿ ಉದ್ಯೋಗಿಗಳಿದ್ದಾರೆ. ಕೆಲ ವರ್ಷಗಳಲ್ಲಿ ಉದ್ಯೋಗಿಗಳ ಸಂಖ್ಯೆ ದೃಷ್ಟಿಯಿಂದ ಜಗತ್ತಿನ ಅತಿ ದೊಡ್ಡ ಐಟಿ ಕಂಪನಿಯಾಗುವ ನಿರೀಕ್ಷೆ ಇದೆ. ಈಗ ಅಕ್ಸೆಂಚರ್‌ ಅತಿ ಹೆಚ್ಚು ಉದ್ಯೋಗಿಗಳನ್ನು (5.37 ಲಕ್ಷ) ಹೊಂದಿದೆ. ರೈಲ್ವೆ ಬಿಟ್ಟರೆ ಟಿಸಿಎಸ್‌ ದೊಡ್ಡ ಉದ್ಯೋಗದಾತ ಟಿಸಿಎಸ್‌ ಉದ್ಯೋಗಿಗಳ ಸಂಖ್ಯೆ 5 ಲಕ್ಷಕ್ಕೇರಿದರೆ ರೈಲ್ವೆಯ ನಂತರ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ಎನ್ನಿಸಲಿದೆ. ರೈಲ್ವೆ ಸಾರ್ವಜನಿಕ ಸಂಸ್ಥೆಯಾದರೆ ಟಿಸಿಎಸ್‌ ಖಾಸಗಿ ವಲಯದ ಕಂಪನಿ. ಟಿಸಿಎಸ್‌ 2020-21ರಲ್ಲಿ 9.2 ಶತಕೋಟಿ ಡಾಲರ್‌ ಡೀಲ್‌ಗಳನ್ನು ಕುದುರಿಸಿತ್ತು. ವಿಪ್ರೊ 12 ದೊಡ್ಡ ವಹಿವಾಟು ಪ್ರಸ್ತಾಪಗಳನ್ನು ಪಡೆದಿತ್ತು. ಈ ವರ್ಷ ಟೆಕ್ಕಿಗಳ ನೇಮಕಾತಿ ಟಿಸಿಎಸ್‌ - 40,000 ಇನ್ಫೋಸಿಸ್‌ - 26,000 ಎಚ್‌ಸಿಎಲ್‌ ಟೆಕ್ನಾಲಜೀಸ್‌ - 12,000 ವಿಪ್ರೊ - 9000