ಲಾಕ್‌ಡೌನ್‌ನಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಶೇ. 60ರಷ್ಟು ಇಳಿಕೆ..!

ಲಾಕ್‌ಡೌನ್‌ ಮುನ್ನ ಬೆಂಗಳೂರು ನಗರದಲ್ಲಿ ಸುಮಾರು 6 ಸಾವಿರ ಬಿಎಂಟಿಸಿ ಬಸ್‌ಗಳೂ ಸೇರಿದಂತೆ 80 ಲಕ್ಷ ವಾಹನಗಳು ಸಂಚರಿಸುತ್ತಿದ್ದವು. ಲಾಕ್‌ಡೌನ್‌ ಬಳಿಕ ಸುಮಾರು 500 ಬಿಎಂಟಿಸಿ ಬಸ್‌ಗಳು ಹಾಗೂ ಹತ್ತು ಲಕ್ಷ ಖಾಸಗಿ ವಾಹನಗಳಷ್ಟೇ ಸಂಚರಿಸುತ್ತಿವೆ.

ಲಾಕ್‌ಡೌನ್‌ನಿಂದ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಶೇ. 60ರಷ್ಟು ಇಳಿಕೆ..!
Linkup
ರವಿಕುಮಾರ್‌ ಬೆಟ್ಟದಪುರ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ, ರಸ್ತೆ ಮತ್ತು ಕಟ್ಟಡ ಕಾಮಗಾರಿಗಳು, ಕಾರ್ಖಾನೆಗಳು ಸ್ಥಗಿತಗೊಂಡಿರುವ ಪರಿಣಾಮ ನಗರದಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿಇಳಿಕೆ ಕಂಡಿದೆ. ಮೇ ಮೊದಲನೇ ವಾರ ಜನತಾ ಕರ್ಫ್ಯೂ ಹಾಗೂ ಬಳಿಕ ಲಾಕ್‌ಡೌನ್‌ ಜಾರಿ ಹಾಗೂ ವಿಸ್ತರಣೆಗೊಳಿಸಿದ ಪರಿಣಾಮ, ಬಹುತೇಕ ವಾಹನ ಸಂಚಾರ ಸ್ಥಗಿತಗೊಂಡಿವೆ. ಅಗತ್ಯ ಕಾರ್ಖಾನೆಗಳ ಚಟುವಟಿಕೆ ಹೊರತುಪಡಿಸಿ ಉಳಿದೆಲ್ಲ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಪರಿಣಾಮ ನಗರದಲ್ಲಿ ಮೇ ಮೊದಲ ವಾರದಿಂದ ಇಂದಿನವರೆಗೆ (ಲಾಕ್‌ಡೌನ್‌ ಸಮಯದಲ್ಲಿ) ಶೇ.60ರಷ್ಟು ವಾಯುಮಾಲಿನ್ಯ ಕಡಿಮೆಯಾಗಿದೆ ಎಂದು ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ಬೆಂಗಳೂರಿನಲ್ಲಿ ಲಾಕ್‌ಡೌನ್‌ ಪೂರ್ವದಲ್ಲಿ ವಾಯುಮಾಲಿನ್ಯ ಏರಿಕೆ ಕಂಡಿತ್ತು. ವಾಹನ ಸಂಚಾರ, ಕಾರ್ಖಾನೆಗಳ ವಿಷಕಾರಕ ಹೊಗೆ, ಕಟ್ಟಡ, ರಸ್ತೆ ಕಾಮಗಾರಿಗಳ ಧೂಳಿನಿಂದ ವಾಯು ಗುಣಮಟ್ಟ ತೀರ ಕೆಳಮಟ್ಟದಲ್ಲಿತ್ತು. ಹೀಗಾಗಿ, ಅಸ್ತಮಾ ರೋಗಿಗಳು, ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸಮಸ್ಯೆ ಇರುವವರಿಗೆ ತೊಂದರೆ ಉಂಟಾಗಿತ್ತು. ಇದೀಗ ಮಾಲಿನ್ಯ ಪ್ರಮಾಣ ತಗ್ಗಿದ್ದು, ವಾಯು ಗುಣಮಟ್ಟ ಉತ್ತಮವಾಗಿದೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ (ವಾಯು ಗುಣಮಟ್ಟ ಸೂಚ್ಯಂಕ) 80ರಿಂದ 110 ರವರೆಗಿದ್ದ ವಾಯು ಗುಣಮಟ್ಟ, ಮೇ ತಿಂಗಳಲ್ಲಿ 30ರಿಂದ 60ರ ಆಸುಪಾಸಿಗೆ ಇಳಿಕೆ ಕಂಡಿದೆ. ನಗರದಲ್ಲಿ ಹೇಗಿದೆ ಪ್ರಮಾಣ: ನಗರದಲ್ಲಿ ವಾಯುಮಾಲಿನ್ಯ ಇಳಿಮುಖವಾಗಿದ್ದು, ಬಿಟಿಎಂ ಲೇಔಟ್‌ನಲ್ಲಿ ಮೇ ತಿಂಗಳಲ್ಲಿ ಏರ್‌ ಕ್ವಾಲಿಟಿ ಇಂಡೆಕ್ಸ್‌ (ಎಕ್ಯೂಐ) 59ಕ್ಕೆ ಇಳಿಕೆಯಾಗಿದೆ. ಹಾಗಾಗಿ, ಇಲ್ಲಿ ವಾಯು ಗುಣಮಟ್ಟ ತೃಪ್ತಿದಾಯಕವಾಗಿದೆ. ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜು ಬಳಿ ಮಾರ್ಚ್‌ನಲ್ಲಿ 92 ಇದ್ದ ಏಕ್ಯೂಐ, ಮೇನಲ್ಲಿ 27ಕ್ಕೆ ಇಳಿಕೆಯಾಗಿದೆ. ಮೆಜೆಸ್ಟಿಕ್‌ನ ಕೆಂಪೇಗೌಡ ರೈಲ್ವೆ ನಿಲ್ದಾಣದಲ್ಲಿ ಮಾರ್ಚ್‌ನಲ್ಲಿ 87 ಇದ್ದ ಎಕ್ಯೂಐ, ಮೇನಲ್ಲಿ 49ಕ್ಕೆ ಇಳಿಕೆಯಾಗಿದೆ. ಮೈಸೂರು ರಸ್ತೆಯ ಬಾಪೂಜಿನಗರದಲ್ಲಿ ಮಾರ್ಚ್‌ನಲ್ಲಿ 99 ಇದ್ದ ಎಕ್ಯೂಐ ಮೇನಲ್ಲಿ 31ಕ್ಕೆ ಇಳಿದಿದೆ. ಹೊಂಬೇಗೌಡ ನಗರದ ರಾಜೀವ್‌ಗಾಂಧಿ ಇನ್ಸ್‌ಟಿಟ್ಯೂಟ್‌ ಬಳಿ ಮಾರ್ಚ್‌ನಲ್ಲಿ 84 ಇದ್ದ ಎಕ್ಯೂಐ 43ಕ್ಕೆ ಇಳಿದಿದೆ. ಎಚ್‌ಎಸ್‌ ಆರ್‌ ಲೇಔಟ್‌ನ ಸಿಲ್ಕ್‌ ಬೋರ್ಡ್‌ ಬಳಿ ಮಾರ್ಚ್‌ನಲ್ಲಿ 89 ಇದ್ದ ಎಕ್ಯೂಐ, ಮೇನಲ್ಲಿ 37ಕ್ಕೆ ಇಳಿದಿದೆ, ಸಾಣೆಗೊರವನಹಳ್ಳಿ ನಿಸರ್ಗ ಭವನದ ಬಳಿ 62 ಇದ್ದ ಏಕ್ಯೂಐ, ಮೇನಲ್ಲಿ 36ಕ್ಕೆ ಇಳಿದಿದೆ, ಪೀಣ್ಯದಲ್ಲೂ ಮೇನಲ್ಲಿ 23ಕ್ಕೆ ಎಕ್ಯೂಐ ಇಳಿದಿದ್ದು, ಉತ್ತಮ ವಾಯುಗುಣ ಮಟ್ಟವಿದೆ. ಇಳಿಮುಖವಾಗಲು ಕಾರಣವೇನು? ಲಾಕ್‌ಡೌನ್‌ ಪೂರ್ವದಲ್ಲಿ ನಗರದಲ್ಲಿ ಸುಮಾರು 6 ಸಾವಿರ ಬಿಎಂಟಿಸಿ ಬಸ್‌ಗಳೂ ಸೇರಿದಂತೆ 80 ಲಕ್ಷ ವಾಹನಗಳು ಸಂಚರಿಸುತ್ತಿದ್ದವು. ಲಾಕ್‌ಡೌನ್‌ ಬಳಿಕ ಸುಮಾರು 500 ಬಿಎಂಟಿಸಿ ಬಸ್‌ಗಳು ಹಾಗೂ ಹತ್ತು ಲಕ್ಷ ಖಾಸಗಿ ವಾಹನಗಳಷ್ಟೇ ಸಂಚರಿಸುತ್ತಿವೆ. ಇನ್ನು ಶೇ.3ರಷ್ಟು ಕೈಗಾರಿಕೆಗಳು ಮಾತ್ರ ನಗರದಲ್ಲಿ ತೆರೆದಿವೆ. ಕಟ್ಟಡ ಕಾಮಗಾರಿ, ರಸ್ತೆ ಕಾಮಗಾರಿಯೂ ಸ್ಥಗಿತವಾಗಿವೆ. ಮತ್ತೆ ಕೇಳಿಸುತ್ತಿದೆ ಹಕ್ಕಿಗಳ ಕಲರವ ಮಾಲಿನ್ಯ ಇಳಿಮುಖವಾಗುತ್ತಿದ್ದಂತೆಯೇ ನಗರದಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಳವಾಗಿವೆ. ಹಲವರಿಗೆ ಉಸಿರಾಟದ ಸಮಸ್ಯೆ ಕಡಿಮೆಯಾಗಿದೆ. ಆದರೆ, ಲಾಕ್‌ಡೌನ್‌ ಮುಗಿದ ಬಳಿಕ ವಾಯು ಗುಣಮಟ್ಟ ಕುಸಿಯಲಿದ್ದು, ಮಾಲಿನ್ಯ ಹೆಚ್ಚಳವಾಗಬಹುದೆಂಬ ಆತಂಕವಿದೆ. ಜನರು ಇದನ್ನು ಅರಿತು ಅನವಶ್ಯಕವಾಗಿ ವಾಹನ ಬಳಸದೆ ಪರಿಸರ ಸ್ನೇಹಿ ಕಾರ್ಯಗಳನ್ನು ಮಾಡುವ ಮೂಲಕ ವಾಯು ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಪರಿಸರ ತಜ್ಞ ಡಾ. ಅಲಿಂ ಹೇಳಿದರು.